ಫ್ರಾನ್ಸ್ ಹಿಂಸಾಚಾರ: ಐದನೇ ದಿನವೂ ಮುಂದುವರಿದ ಗಲಭೆ; ಮೇಯರ್‌ ನಿವಾಸಕ್ಕೆ ಬೆಂಕಿ

ಫ್ರಾನ್ಸ್‌ನಾದ್ಯಂತ ಭುಗಿಲೆದ್ದಿದ್ದ ಹಿಂಸಾಚಾರ ಐದನೇ ದಿನವೂ ಮುಂದುವರೆದಿದ್ದು, ಉದ್ರಿಕ್ತ ಪ್ರತಿಭಟನಕಾರರು ಪ್ಯಾರಿಸ್‌ನ ದಕ್ಷಿಣ ಉಪನಗರದ ಮೇಯರ್‌ ವಿನ್‌ಸೆಂಟ್‌ ಜೀನ್‌ಬ್ರುನ್‌ ಅವರ ನಿವಾಸಕ್ಕೆ ಕಾರು ನುಗ್ಗಿಸಿ ಬೆಂಕಿ ಇಟ್ಟಿದ್ದಾರೆ. 
ಮೇಯರ್‌ ನಿವಾಸಕ್ಕೆ ಬೆಂಕಿ (ಸಂಗ್ರಹ ಚಿತ್ರ)
ಮೇಯರ್‌ ನಿವಾಸಕ್ಕೆ ಬೆಂಕಿ (ಸಂಗ್ರಹ ಚಿತ್ರ)

ಲಂಡನ್: ಫ್ರಾನ್ಸ್‌ನಾದ್ಯಂತ ಭುಗಿಲೆದ್ದಿದ್ದ ಹಿಂಸಾಚಾರ ಐದನೇ ದಿನವೂ ಮುಂದುವರೆದಿದ್ದು, ಉದ್ರಿಕ್ತ ಪ್ರತಿಭಟನಕಾರರು ಪ್ಯಾರಿಸ್‌ನ ದಕ್ಷಿಣ ಉಪನಗರದ ಮೇಯರ್‌ ವಿನ್‌ಸೆಂಟ್‌ ಜೀನ್‌ಬ್ರುನ್‌ ಅವರ ನಿವಾಸಕ್ಕೆ ಕಾರು ನುಗ್ಗಿಸಿ ಬೆಂಕಿ ಇಟ್ಟಿದ್ದಾರೆ. 

ಈ ವೇಳೆ ಮೇಯರ್‌ ಪತ್ನಿ ಮತ್ತು ಇಬ್ಬರು ಮಕ್ಕಳು ಮನೆಯೊಳಗೆ ಮಲಗಿದ್ದರು. ಬೆಂಕಿ ಕಾಣಿಸುತ್ತಿದ್ದಂತೆಯೇ ಅವರು ಮನೆ ಹಿಂಬಾಗಿಲ ಮೂಲಕ ಹೊರಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ  ಅವರ ಕುಟುಂಬಸ್ಥರು ಅಲ್ಪಸ್ವಲ್ಪ ಗಾಯಗೊಂಡಿದ್ದಾರೆ. ಘಟನೆ ವೇಳೆ ಮೇಯರ್‌ ಜೀನ್‌ಬ್ರುನ್‌ ಅವರು ಟೌನ್‌ಹಾಲ್‌ನಲ್ಲಿ ಇದ್ದರು. ಯುವಕನ ಹತ್ಯೆಯಾದಾಗಿನಿಂದ ಟೌನ್‌ ಹಾಲ್‌ ಗುರಿಯಾಗಿಸಿಕೊಂಡು ದಾಳಿ ನಡೆಸಲು ಉದ್ರಿಕ್ತ ಗುಂಪು ಯತ್ನಿಸುತ್ತಿದ್ದು, ಬ್ಯಾರಿಕೇಡ್‌ ಮತ್ತು ಮುಳ್ಳುತಂತಿಗಳನ್ನು ಹಾಕಿ ಅವರನ್ನು ತಡೆಯಲಾಗಿದೆ. ಕೊಲೆ ಯತ್ನ ಆರೋಪದ ಮೇಲೆ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಘಟನೆ ಕುರಿತು ಪ್ರತಿಕ್ರಿಯಿಸಿರುವ ಮೇಯರ್ ವಿನ್ಸೆಂಟ್ ಜೀನ್‌ಬ್ರುನ್ ಅವರು, ರಾತ್ರಿ ಮಲಗಿದ್ದಾಗ ಸುಮಾರು 1:30 ಕ್ಕೆ ನಡೆದ ದಾಳಿ ನಡೆದಿದೆ. ದಾಳಿಯಲ್ಲಿ ಅವರ ಪತ್ನಿ ಮತ್ತು ಅವರ ಮಕ್ಕಳಲ್ಲಿ ಒಬ್ಬರು ಗಾಯಗೊಂಡಿದ್ದಾರೆ. ದಾಳಿ ನಾನು ಟೌನ್ ಹಾಲ್‌ನಲ್ಲಿ ಹಿಂಸಾಚಾರದ ಮೇಲ್ವಿಚಾರಣೆ ನಡೆಸುತ್ತಿದ್ದೆ ಎಂದು ಹೇಳಿದ್ದು, ದಾಳಿಯು ಅಶಾಂತಿಯಲ್ಲಿ "ಭಯಾನಕ ಮತ್ತು ಅವಮಾನ" ದ ಹೊಸ ಹಂತವನ್ನು ಪ್ರತಿನಿಧಿಸುತ್ತದೆ ಎಂದು ಕಿಡಿಕಾರಿದ್ದಾರೆ. 

ಪ್ರಾದೇಶಿಕ ಪ್ರಾಸಿಕ್ಯೂಟರ್ ಸ್ಟೀಫನ್ ಹಾರ್ಡೌಯಿನ್ ಅವರು ಕೊಲೆಯ ಯತ್ನದ ತನಿಖೆಯನ್ನು ಪ್ರಾರಂಭಿಸಿದ್ದು, ಪ್ರಾಥಮಿಕ ತನಿಖೆಯು ಕಾರು ಮನೆಗೆ ನುಗ್ಗಿ ಅದನ್ನು ಸುಡಲು ಉದ್ದೇಶಿಸಿದೆ ಎಂದು ಸೂಚಿಸುತ್ತದೆ ಎಂದು ಫ್ರೆಂಚ್ ದೂರದರ್ಶನಕ್ಕೆ ತಿಳಿಸಿದ್ದಾರೆ. ಕಾರಿನಲ್ಲಿದ್ದ ಬಾಟಲಿಯಲ್ಲಿ ಪೆಟ್ರೋಲ್ ರೀತಿಯ ವಸ್ತು ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ.

ಹಿಂಸಾಚಾರಕ್ಕೆ ಸಾಮಾಜಿಕ ಮಾಧ್ಯಮ ಕಾರಣ ಎಂದ ಮ್ಯಾಕ್ರನ್
ಇನ್ನು ದೇಶದಲ್ಲಿನ ಹಿಂಸಾಚಾರ ಉಲ್ಬಣಕ್ಕೆ ಸಾಮಾಜಿಕ ಮಾಧ್ಯಮಗಳೇ ಕಾರಣ ಎಂದು ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್ ಕಿಡಿಕಾರಿದ್ದು, Snapchat ಅಥವಾ ಇತರ ಅಪ್ಲಿಕೇಶನ್‌ಗಳಲ್ಲಿ ಹಿಂಸಾಚಾರದ ಕರೆಗಳನ್ನು ಹಂಚಿಕೊಳ್ಳುವ ಯುವಜನರು ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು  ಎಚ್ಚರಿಸಿದ್ದಾರೆ.

ದೇಶದಾದ್ಯಂತ ಗಲಭೆಕೋರರು ಮತ್ತು ಪೊಲೀಸರ ನಡುವಿನ ಸಂಘರ್ಷ ಮುಂದುವರಿದಿದೆ. ಆದರೆ  ಹಿಂದಿನ ದಿನಕ್ಕೆ ಹೋಲಿಸಿದರೆ ಭಾನುವಾರ ಹಿಂಸಾಚಾರ ಅಲ್ಪ ಪ್ರಮಾಣದಲ್ಲಿ ತಗ್ಗಿತ್ತು. ಶಾಂತಿ ಪುನಃಸ್ಥಾಪನೆಗೆ ಭಾರಿ ಸಂಖ್ಯೆಯಲ್ಲಿ ಪೊಲೀಸ್‌ ನಿಯೋಜಿಸಲಾಗಿದ್ದು, ಒಂದೇ ದಿನ 719 ಮಂದಿಯನ್ನು ಬಂಧಿಸಲಾಗಿದೆ. ಹಾಗಿದ್ದೂ ಪ್ರತಿಭಟನಕಾರರು ಹಲವು ಶಾಲೆ, ಪೊಲೀಸ್‌ ಠಾಣೆ, ಟೌನ್‌ಹಾಲ್‌ ಮತ್ತು ಅಂಗಡಿಮುಂಗಟ್ಟಿಗೆ ಬೆಂಕಿ ಇಟ್ಟು ಧ್ವಂಸ ಮಾಡಿದರು. ಶನಿವಾರ ರಾತ್ರಿಯಾಗುತ್ತಿದ್ದಂತೆಯೇ ಸಣ್ಣ ಗುಂಪೊಂದು ರಾಜಧಾನಿಯಲ್ಲಿ ಪ್ರತಿಭಟನೆ ಆರಂಭಿಸಿತ್ತು. ನೂರಾರು ಪೊಲೀಸರು ಲಾಠಿಚಾರ್ಜ್‌ ಮಾಡಿ ಗುಂಪನ್ನು ಚದುರಿಸಿದರು. ಉತ್ತರ ಪ್ಯಾರಿಸ್‌ನಲ್ಲೂ ಪಟಾಕಿ ಹಚ್ಚಿ ಮತ್ತು ಬ್ಯಾರಿಕೇಡ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು. ಪೊಲೀಸರೂ ಅಶ್ರುವಾಯು ಬಳಸಿ ಪ್ರತಿಭಟನಕಾರರನ್ನು ಹಿಮ್ಮೆಟ್ಟಿಸಿದರು. 

ಪ್ರತಿಭಟನಾಕಾರರ ಆಕ್ರೋಶಕ್ಕೆ 2,000ಕ್ಕೂ ಹೆಚ್ಚು ಕಾರುಗಳು ಬೆಂಕಿಗೆ ಆಹುತಿಯಾಗಿವೆ. 500 ಕಟ್ಟಡಗಳು ಧ್ವಂಸಗೊಂಡಿವೆ. ಹಾಗಾಗಿ ಪ್ರತಿಭಟನೆಯನ್ನು ಹತ್ತಿಕ್ಕಲು ಸುಮಾರು 45 ಸಾವಿರ ಪೊಲೀಸರನ್ನ ಭದ್ರತೆಗೆ ನಿಯೋಜಿಸಲಾಗಿದೆ. ಈವರೆಗೆ ಸುಮಾರು 994 ಮಂದಿಯನ್ನು ಬಂಧಿಸಲಾಗಿದೆ. ಪ್ಯಾರಿಸ್‌ ಸಹಿತ ಹಲವು ನಗರಗಳಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಕೈಗೊಳ್ಳಲಾಗಿದ್ದರೂ ಗಲಭೆಗಳು ನಿಯಂತ್ರಣಕ್ಕೆ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಸರ್ಕಾರ 17ರ ಹುಡುಗರನ್ನು ಹತ್ಯೆ ಮಾಡಿದ ಇಬ್ಬರು ಪೊಲೀಸ್‌ ಅಧಿಕಾರಿಗಳನ್ನೂ ಬಂಧಿಸಲಾಗಿದ್ದು, ಅವರ ವಿರುದ್ಧ ತನಿಖೆಗೆ ಸರ್ಕಾರ ಆದೇಶಿಸಿದೆ. ಹಿಂಸಾಚಾರ ಆರಂಭವಾದಾಗಿನಿಂದ ಈವರೆಗೆ ದೇಶದಾದ್ಯಂತ ನೂರಾರು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಗಾಯಗೊಂಡಿದ್ದಾರೆ. 3000ಕ್ಕೂ ಹೆಚ್ಚು ಪ್ರತಿಭಟನಕಾರರನ್ನು ಬಂಧಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com