ಫ್ರಾನ್ಸ್ ಸಂಘರ್ಷ: ಗಲಭೆ ನಿಯಂತ್ರಣಕ್ಕೆ ಮ್ಯಾಕ್ರನ್ ಸರ್ಕಾರದ ಕಠಿಣ ಕ್ರಮ; ಸಂಘರ್ಷಕ್ಕೇನು ಕಾರಣ?

ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಸಂಘರ್ಷ ನಿರ್ಣಾಯಕ ಘಟ್ಟ ತಲುಪಿದ್ದು, ಗಲಭೆ ನಿಯಂತ್ರಣಕ್ಕೆ ಶತಾಯಗತಾಯ ಪ್ರಯತ್ನಿಸುತ್ತಿರುವ ಫ್ರಾನ್ಸ್ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದ್ದು, 'ಎಲ್ಲಾ ಆಯ್ಕೆ ಮುಂದಿದೆ' ಎಂದು ಎಚ್ಚರಿಕೆ ನೀಡಿದೆ.
ಫ್ರಾನ್ಸ್ ಗಲಭೆ
ಫ್ರಾನ್ಸ್ ಗಲಭೆ
Updated on

ಪ್ಯಾರಿಸ್: ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಸಂಘರ್ಷ ನಿರ್ಣಾಯಕ ಘಟ್ಟ ತಲುಪಿದ್ದು, ಗಲಭೆ ನಿಯಂತ್ರಣಕ್ಕೆ ಶತಾಯಗತಾಯ ಪ್ರಯತ್ನಿಸುತ್ತಿರುವ ಫ್ರಾನ್ಸ್ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದ್ದು, 'ಎಲ್ಲಾ ಆಯ್ಕೆ ಮುಂದಿದೆ' ಎಂದು ಎಚ್ಚರಿಕೆ ನೀಡಿದೆ.

ಗಲಭೆ, ಪ್ರತಿಭಟನೆ ಮತ್ತು ಲೂಟಿ ಸೇರಿದಂತೆ ಹಲವಾರು ಹಿಂಸಾತ್ಮಕ ಘಟನೆಗಳು ಫ್ರಾನ್ಸ್‌ನಾದ್ಯಂತ ಸಂಭವಿಸುತ್ತಿವೆ. ಜನರು ಬೀದಿಗಿಳಿದು ಸಿಕ್ಕಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಈ ದೃಶ್ಯಗಳು ನೋಡುವುದಕ್ಕೇ ಭಯಾನಕವಾಗಿವೆ. ಉದ್ರಿಕ್ತರ ಗುಂಪು ನಾಲ್ಕನೇ ದಿನವೂ ಲೂಟಿಗಿಳಿದಿದೆ.

ಮಾಧ್ಯಮ ವರದಿಗಳ ಪ್ರಕಾರ, ಪ್ರತಿಭಟನೆಗಳು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಆಡಳಿತದ ವಿರುದ್ಧ ನಡೆಯುತ್ತಿದೆ ಎನ್ನಲಾಗಿದ್ದು, ಇದು ಹೊಸ ಬಿಕ್ಕಟ್ಟನ್ನು ಹುಟ್ಟುಹಾಕಿದೆ. ಈ ಪರಿಸ್ಥಿತಿಯನ್ನು ನಿಯಂತ್ರಿಸಲು ಮ್ಯಾಕ್ರನ್ ಅವರು ಮಂತ್ರಿಗಳೊಂದಿಗೆ ತುರ್ತು ಸಭೆ ನಡೆಸಿದ್ದಾರೆ. ಅಲ್ಲದೆ ಸಭೆಯಲ್ಲಿ ಗಲಭೆ ನಿಯಂತ್ರಣಕ್ಕೆ ಮ್ಯಾಕ್ರನ್ ಸರ್ಕಾರ ಕಠಿಣ ನಿಲುವು ತಳೆದಿದ್ದು, 'ಎಲ್ಲಾ ಆಯ್ಕೆ ಮುಂದಿದೆ' ಹೇಳುವ ಮೂಲಕ ಗಲಭೆ ನಿಯಂತ್ರಣಕ್ಕೆ ಯಾವುದೇ ರೀತಿಯ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಹೇಳಿದೆ.

ಸಂಘರ್ಷಕ್ಕೇನು ಕಾರಣ?
ಹಾಗಾದರೆ, ಫ್ರಾನ್ಸ್‌ನಲ್ಲಿ ಅಶಾಂತಿಗೆ ಕಾರಣವೇನು? ಇದು ವರ್ಣಭೇದ ನೀತಿಯ ವಿರುದ್ಧದ ಹೋರಾಟವೇ? ಅಥವಾ ಪೊಲೀಸ್ ದೌರ್ಜನ್ಯ ವಿರುದ್ಧದ ಪ್ರತಿಭಟನೆಯೇ? ಎಂಬ ಪ್ರಶ್ನೆಗಳು ಉದ್ಭವಿಸಿದ್ದು, ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಫ್ರಾನ್ಸ್ ಅಶಾಂತಿಗೆ ಕಾರಣವಾದ ಘಟನೆ ಇದೇ..
ಪ್ಯಾರಿಸ್ ಬಳಿ ನಹೆಲ್ ಎಂಬ 17 ವರ್ಷದ ಯುವಕನ ಮೇಲೆ ಪೊಲೀಸ್ ಅಧಿಕಾರಿಯೊಬ್ಬರು ಮಾರಣಾಂತಿಕವಾಗಿ ಗುಂಡು ಹಾರಿಸಿದ್ದಾರೆ. ಮಂಗಳವಾರ ಬೆಳಗ್ಗೆ ನೆಲ್ಸನ್ ಮಂಡೇಲಾ ಸ್ಕ್ವೇರ್ ಬಳಿಯ ಟ್ರಾಫಿಕ್ ಸ್ಟಾಪ್‌ನಲ್ಲಿ ನಹೆಲ್ ಕಾರನ್ನು ಓಡಿಸುತ್ತಿದ್ದಾಗ ಅತ್ಯಂತ ಸಮೀಪದಿಂದ ಪೊಲೀಸ್ ಅಧಿಕಾರಿ ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ. ಪೊಲೀಸ್‌ ಅಧಿಕಾರಿ ಹಾರಿಸಿದ ಗುಂಡಿನ ದಾಳಿಯಲ್ಲಿ ನಹೆಲ್‌ ಪ್ರಾಣ ಕಳೆದುಕೊಂಡಿದ್ದಾರೆ. ಪೊಲೀಸರು ಮತ್ತು ವೈದ್ಯಾಧಿಕಾರಿಗಳು ಆತನನ್ನು ಉಳಿಸಲು ಪ್ರಯತ್ನಿಸಿದ್ದಾರೆ. ಆದರೂ, ಆತ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. 

ಮನಸೋ ಇಚ್ಛೆ ಕಾರು ಓಡಿಸಿದ್ದ ನಹೆಲ್!
ಘಟನೆ ನಡೆದ ದಿನ ಬೆಳಿಗ್ಗೆ 7:55 ಕ್ಕೆ ಬಸ್ ಲೇನ್‌ನಲ್ಲಿ ನೆಹಾಲ್ ಯದ್ವಾತದ್ವಾ ಮರ್ಸಿಡಿಸ್ ಕಾರನ್ನು ಅನ್ನು ಓಡಿಸುತ್ತಿರುವುದನ್ನು ಫ್ರೆಂಚ್ ಪೊಲೀಸರು ಗುರುತಿಸಿದ್ದಾರೆ. ಅವರು ಸೈರನ್ ಮತ್ತು ಲೈಟ್‌ಗಳ ಸಹಾಯದಿಂದ ಕಾರನ್ನು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಆದರೆ, ನಹೆಲ್‌ ಕಾರು ನಿಲ್ಲಿಸದ ಕಾರಣ ಆತ ಪಾದಚಾರಿಗಳ ಜೀವಕ್ಕೆ ಅಪಾಯವನ್ನುಂಟು ಮಾಡುತ್ತಾನೆಂದು ಭಾವಿಸಿ ಪೊಲೀಸ್‌ ಅಧಿಕಾರಿ ಗುಂಡು ಹಾರಿಸಿದ್ದಾರೆ. ಎದೆಗೆ ಗುಂಡು ತಗುಲಿ ನೆಹಲ್ ಸ್ಥಳದಲ್ಲಿಯೇ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಧಾರ್ಮಿಕ ಕಾರಣವೇ ಅಶಾಂತಿಗೆ ಕಾರಣ?
ಇನ್ನು ಮುಸ್ಲಿಂ ಸಮುದಾಯದಕ್ಕೆ ಸೇರಿರುವ ನಹೆಲ್‌ನ ಧರ್ಮವೇ ಆತನ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಪ್ರತಿಭಟನಾಕಾರರು ಆಕ್ರೋಶಗೊಂಡಿದ್ದಾರೆ. ಫ್ರಾನ್ಸ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಪೊಲೀಸ್ ತಾರತಮ್ಯದ ಬಗ್ಗೆ ಆತನ ಹತ್ಯೆ ತಿಳಿಸಿಕೊಡುತ್ತದೆ ಎಂದು ಹೇಳುತ್ತಿದ್ದಾರೆ.

ನೆಹಲ್‌ ಸಾವಿನ ಬಳಿಕ ಭುಗಿಲೆದ್ದ ಹಿಂಸಾಚಾರ
ನೆಹಲ್‌ ಸಾವಿನ ಬಳಿಕ ಪ್ರತಿಭಟನೆಗಳು ಭುಗಿಲೆದ್ದಿವೆ. ಮಾರ್ಸಿಲ್ಲೆ, ಲಿಯಾನ್, ಟೌಲೌಸ್, ಸ್ಟ್ರಾಸ್‌ಬರ್ಗ್, ಲಿಲ್ಲೆ ಮತ್ತು ಪ್ಯಾರಿಸ್‌ನಂತಹ ನಗರಗಳಿಗೆ ಹಿಂಸಾಚಾರ ಹರಡಿದೆ. ಶನಿವಾರ ಸುಮಾರು 45,000 ಪೊಲೀಸ್ ಅಧಿಕಾರಿಗಳು ಮತ್ತು ಕೆಲವು ಶಸ್ತ್ರಸಜ್ಜಿತ ವಾಹನಗಳನ್ನು ಬೀದಿಗಳಲ್ಲಿ ನಿಯೋಜಿಸಲಾಗಿದೆ. ಶುಕ್ರವಾರ 270 ಜನರನ್ನು ಬಂಧಿಸಲಾಗಿದೆ ಎಂದು ಆಂತರಿಕ ಸಚಿವ ಜೆರಾಲ್ಡ್ ಡಾರ್ಮಾನಿನ್ ಬಹಿರಂಗಪಡಿಸಿದ್ದಾರೆ.

ಪ್ರತಿಭಟನೆಗಳು ಪ್ರಾರಂಭವಾದಾಗಿನಿಂದ ಒಟ್ಟು 1,100 ಕ್ಕಿಂತ ಹೆಚ್ಚು ಜನರ ಬಂಧನವಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಮಾರ್ಸಿಲ್ಲೆ ಮೇಯರ್ ಬೆನೈಟ್ ಪಯಾನ್ ಅವರು ಹೆಚ್ಚುವರಿ ಪಡೆಗಳನ್ನು ತಕ್ಷಣವೇ ಕಳುಹಿಸಲು ಸರ್ಕಾರಕ್ಕೆ ಕರೆ ನೀಡಿದ್ದಾರೆ. ಈಗಾಗಲೇ ಫ್ರಾನ್ಸ್ ನ ಗಲಭೆ ಪೀಡಿತ ಪ್ರದೇಶಗಳಲ್ಲಿ ಸುಮಾರು 45 ಸಾವಿರ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com