'ಫ್ರಾನ್ಸ್ ಸಂಘರ್ಷ' ನಿಲ್ಲಿಸಿ: ಗಲಭೆಕೋರರಿಗೆ ಸಂತ್ರಸ್ಥ ಯುವಕನ ಅಜ್ಜಿ ಮನವಿ

ಟ್ರಾಫಿಕ್‌ ತಪಾಸಣೆ ವೇಳೆ ಪೊಲೀಸರ ಗುಂಡಿಗೆ 17 ವರ್ಷದ ನಹೆಲ್ ಎಂಬ ಯುವಕ ಸಾವಿಗೀಡಾದ ಬೆನ್ನಲ್ಲೇ ಫ್ರಾನ್ಸ್ ನಲ್ಲಿ ಭುಗಿಲೆದ್ದಿರುವ ಹಿಂಸಾಚಾರ ಐದನೇ ದಿನವೂ ಮುಂದವರೆದಿದ್ದು, ಕೂಡಲೇ ಸಂಘರ್ಷ ನಿಲ್ಲಿಸಿ ಎಂದು ಗಲಭೆಕೋರರಿಗೆ ಸಂತ್ರಸ್ಥ ಯುವಕನ ಅಜ್ಜಿ ಮನವಿ ಮಾಡಿದ್ದಾರೆ.
ಫ್ರಾನ್ಸ್ ಸಂಘರ್ಷ
ಫ್ರಾನ್ಸ್ ಸಂಘರ್ಷ

ಪ್ಯಾರಿಸ್: ಟ್ರಾಫಿಕ್‌ ತಪಾಸಣೆ ವೇಳೆ ಪೊಲೀಸರ ಗುಂಡಿಗೆ 17 ವರ್ಷದ ನಹೆಲ್ ಎಂಬ ಯುವಕ ಸಾವಿಗೀಡಾದ ಬೆನ್ನಲ್ಲೇ ಫ್ರಾನ್ಸ್ ನಲ್ಲಿ ಭುಗಿಲೆದ್ದಿರುವ ಹಿಂಸಾಚಾರ ಐದನೇ ದಿನವೂ ಮುಂದವರೆದಿದ್ದು, ಕೂಡಲೇ ಸಂಘರ್ಷ ನಿಲ್ಲಿಸಿ ಎಂದು ಗಲಭೆಕೋರರಿಗೆ ಸಂತ್ರಸ್ಥ ಯುವಕನ ಅಜ್ಜಿ ಮನವಿ ಮಾಡಿದ್ದಾರೆ.

17 ವರ್ಷದ ನಹೆಲ್‌ನ ಅಜ್ಜಿ ನಾಡಿಯಾ ಎಂಬುವವರು ಫ್ರೆಂಚ್ ಸುದ್ದಿ ಪ್ರಸಾರ ಸಂಸ್ಥೆ BFM ಟಿವಿಗೆ ನೀಡಿದ ದೂರವಾಣಿ ಸಂದರ್ಶನದಲ್ಲಿ, “ಕಿಟಕಿ, ಬಸ್ಸುಗಳು ... ಶಾಲೆಗಳನ್ನು ಒಡೆಯಬೇಡಿ. ನಾವು ವಿಷಯಗಳನ್ನು ಶಾಂತಗೊಳಿಸಲು ಬಯಸುತ್ತೇವೆ. ದಯಮಾಡಿ ಸಂಘರ್ಷ ನಿಲ್ಲಿಸಿ ಎಂದು ಗಲಭೆಕೋರರಿಗೆ ಮನವಿ ಮಾಡಿದ್ದಾರೆ.

ತನ್ನ ಮೊಮ್ಮಗನನ್ನು ಕೊಂದ ಅಧಿಕಾರಿಯ ಮೇಲೆ ಅಜ್ಜಿ ನಾಡಿಯಾ ಅವರಿಗೆ ಕೋಪವಿದೆಯಾದರೂ, ತನ್ನ ಮೊಮ್ಮಗನ ಸಾವು ದೇಶದ ಭದ್ರತೆ ಮೇಲೆ ಪರಿಣಾಮ ಬೀರಬಾರದು. ಫ್ರಾನ್ಸ್ ಇತ್ತೀಚಿನ ವರ್ಷಗಳಲ್ಲಿ ತನ್ನ ಕೆಟ್ಟ ಸಾಮಾಜಿಕ ಕ್ರಾಂತಿಯನ್ನು ಎದುರಿಸುತ್ತಿದ್ದು, ದೇಶದ ನ್ಯಾಯ ವ್ಯವಸ್ಥೆಯಲ್ಲಿ ನಮಗೆ ನಂಬಿಕೆ ಇದೆ. ನಮಗೆ ನ್ಯಾಯ ದೊರೆಯುತ್ತದೆ ಎಂದು ಹೇಳಿದ್ದಾರೆ.

ತಗ್ಗಿದ ಹಿಂಸಾಚಾರ ಪ್ರಕರಣಗಳು
ಇನ್ನು ದೇಶದಾದ್ಯಂತ ಗಲಭೆಕೋರರು ಮತ್ತು ಪೊಲೀಸರ ನಡುವಿನ ಸಂಘರ್ಷ ಮುಂದುವರಿದಿದೆಯಾದರೂ ಹಿಂದಿನ ದಿನಕ್ಕೆ ಹೋಲಿಸಿದರೆ ಭಾನುವಾರ ಹಿಂಸಾಚಾರ ಅಲ್ಪ ಪ್ರಮಾಣದಲ್ಲಿ ತಗ್ಗಿತ್ತು. ಶಾಂತಿ ಪುನಃಸ್ಥಾಪನೆಗೆ ಭಾರಿ ಸಂಖ್ಯೆಯಲ್ಲಿ ಪೊಲೀಸ್‌ ನಿಯೋಜಿಸಲಾಗಿದ್ದು, ಒಂದೇ ದಿನ 719 ಮಂದಿಯನ್ನು ಬಂಧಿಸಲಾಗಿದೆ. ಹಾಗಿದ್ದೂ ಪ್ರತಿಭಟನಕಾರರು ಹಲವು ಶಾಲೆ, ಪೊಲೀಸ್‌ ಠಾಣೆ, ಟೌನ್‌ಹಾಲ್‌ ಮತ್ತು ಅಂಗಡಿಮುಂಗಟ್ಟಿಗೆ ಬೆಂಕಿ ಇಟ್ಟು ಧ್ವಂಸ ಮಾಡಿದರು. ಶನಿವಾರ ರಾತ್ರಿಯಾಗುತ್ತಿದ್ದಂತೆಯೇ ಸಣ್ಣ ಗುಂಪೊಂದು ರಾಜಧಾನಿಯಲ್ಲಿ ಪ್ರತಿಭಟನೆ ಆರಂಭಿಸಿತ್ತು. ನೂರಾರು ಪೊಲೀಸರು ಲಾಠಿಚಾರ್ಜ್‌ ಮಾಡಿ ಗುಂಪನ್ನು ಚದುರಿಸಿದರು. ಉತ್ತರ ಪ್ಯಾರಿಸ್‌ನಲ್ಲೂ ಪಟಾಕಿ ಹಚ್ಚಿ ಮತ್ತು ಬ್ಯಾರಿಕೇಡ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು. ಪೊಲೀಸರೂ ಅಶ್ರುವಾಯು ಬಳಸಿ ಪ್ರತಿಭಟನಕಾರರನ್ನು ಹಿಮ್ಮೆಟ್ಟಿಸಿದರು. 

ಪ್ರತಿಭಟನಾಕಾರರ ಆಕ್ರೋಶಕ್ಕೆ 2,000ಕ್ಕೂ ಹೆಚ್ಚು ಕಾರುಗಳು ಬೆಂಕಿಗೆ ಆಹುತಿಯಾಗಿವೆ. 500 ಕಟ್ಟಡಗಳು ಧ್ವಂಸಗೊಂಡಿವೆ. ಹಾಗಾಗಿ ಪ್ರತಿಭಟನೆಯನ್ನು ಹತ್ತಿಕ್ಕಲು ಸುಮಾರು 45 ಸಾವಿರ ಪೊಲೀಸರನ್ನ ಭದ್ರತೆಗೆ ನಿಯೋಜಿಸಲಾಗಿದೆ. ಈವರೆಗೆ ಸುಮಾರು 994 ಮಂದಿಯನ್ನು ಬಂಧಿಸಲಾಗಿದೆ. ಪ್ಯಾರಿಸ್‌ ಸಹಿತ ಹಲವು ನಗರಗಳಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಕೈಗೊಳ್ಳಲಾಗಿದ್ದರೂ ಗಲಭೆಗಳು ನಿಯಂತ್ರಣಕ್ಕೆ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಸರ್ಕಾರ 17ರ ಹುಡುಗರನ್ನು ಹತ್ಯೆ ಮಾಡಿದ ಇಬ್ಬರು ಪೊಲೀಸ್‌ ಅಧಿಕಾರಿಗಳನ್ನೂ ಬಂಧಿಸಲಾಗಿದ್ದು, ಅವರ ವಿರುದ್ಧ ತನಿಖೆಗೆ ಸರ್ಕಾರ ಆದೇಶಿಸಿದೆ. ಹಿಂಸಾಚಾರ ಆರಂಭವಾದಾಗಿನಿಂದ ಈವರೆಗೆ ದೇಶದಾದ್ಯಂತ ನೂರಾರು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಗಾಯಗೊಂಡಿದ್ದಾರೆ. 3000ಕ್ಕೂ ಹೆಚ್ಚು ಪ್ರತಿಭಟನಕಾರರನ್ನು ಬಂಧಿಸಲಾಗಿದೆ. 

ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಭಾನುವಾರ ರಾತ್ರಿ ವಿಶೇಷ ಭದ್ರತಾ ಸಭೆಯನ್ನು ನಡೆಸುತ್ತಿದ್ದು, ಸಭೆ ಬಳಿಕ ಅವರು ಮಾಧ್ಯಮಗಳಿಗೆ ಮಾಹಿತಿ ನೀಡುವ ಸಾಧ್ಯತೆ ಇದೆ. ದೇಶದಲ್ಲಿನ ಗಲಭೆ ಹಿನ್ನಲೆಯಲ್ಲಿ ಅಧ್ಯಕ್ಷ ಮ್ಯಾಕ್ರನ್ ತಮ್ಮ ಜರ್ಮನಿ ಪ್ರವಾಸವನ್ನು ವಿಳಂಬಗೊಳಿಸಿದ್ದಾರೆ. ಇದು 23 ವರ್ಷಗಳಲ್ಲಿ ಫ್ರೆಂಚ್ ಅಧ್ಯಕ್ಷರ ಮೊದಲ ಜರ್ಮನಿ ಭೇಟಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com