12 ದಿನಗಳ ಬ್ರೇಕ್ ನಂತರ ಮತ್ತೆ ಉಕ್ರೇನ್ ವಿರುದ್ಧ ಮುಗಿಬಿದ್ದ ರಷ್ಯಾ; ರಾತ್ರೋ ರಾತ್ರಿ ಡ್ರೋನ್ ದಾಳಿ, ಝೆಲೆನ್ಸ್ಕಿ ಪಡೆಯಿಂದಲೂ ತಿರುಗೇಟು

12 ದಿನಗಳ ಬ್ರೇಕ್ ನಂತರ ಮತ್ತೆ ಉಕ್ರೇನ್ ವಿರುದ್ಧ ಮತ್ತೆ ರಷ್ಯಾ ಮುಗಿಬಿದ್ದಿದ್ದು, ರಾತ್ರೋ ರಾತ್ರಿ ಸರಣಿ ಡ್ರೋನ್ ದಾಳಿ ನಡೆಸಿದೆ.
ಉಕ್ರೇನ್ ವಿರುದ್ಧ ಮುಗಿಬಿದ್ದ ರಷ್ಯಾ
ಉಕ್ರೇನ್ ವಿರುದ್ಧ ಮುಗಿಬಿದ್ದ ರಷ್ಯಾ

ಕೀವ್‌: 12 ದಿನಗಳ ಬ್ರೇಕ್ ನಂತರ ಮತ್ತೆ ಉಕ್ರೇನ್ ವಿರುದ್ಧ ಮತ್ತೆ ರಷ್ಯಾ ಮುಗಿಬಿದ್ದಿದ್ದು, ರಾತ್ರೋ ರಾತ್ರಿ ಸರಣಿ ಡ್ರೋನ್ ದಾಳಿ ನಡೆಸಿದೆ.

ಉಕ್ರೇನ್‌ ‘ಭದ್ರ ಕೋಟೆ’ ಎನಿಸಿರುವ ರಾಜಧಾನಿ ಕೀವ್‌ ನಗರದ ಮೇಲೆ ಭಾನುವಾರ ನಸುಕಿನಲ್ಲಿ ರಷ್ಯಾ ಡ್ರೋನ್‌ ದಾಳಿ ನಡೆಸಿದ್ದು, 12 ದಿನಗಳ ನಂತರ ಉಕ್ರೇನ್ ಮೇಲೆ ರಷ್ಯಾ ನಡೆಸಿರುವ ಮೊದಲ ದಾಳಿ ಇದಾಗಿದೆ. ಮಾತ್ರವಲ್ಲದೇ ಕೆರ್ಸಾನ್‌ ಪ್ರಾಂತ್ಯದಲ್ಲಿ ಭಾನುವಾರ ಬೆಳಿಗ್ಗೆಯೂ ಶೆಲ್‌ ದಾಳಿ ಮುಂದುವರಿದಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಉಕ್ರೇನ್ ಕೈಗಾರಿಕಾ ನಗರದ ಪೂರ್ವ ಭಾಗದಲ್ಲಿ ಅತ್ಯಂತ ತೀವ್ರ ಹೋರಾಟ ಮುಂದುವರಿದಿದೆ. ಡೊನೆಟ್‌ಸ್ಕ್‌ ಪ್ರಾಂತ್ಯದ ಬಾಖ್ಮಟ್‌, ಮರಿಂಕಾ ಮತ್ತು ಲೈಮನ್‌ ಯುದ್ಧ ಕೇಂದ್ರಿತವಾಗಿದೆ ಉಕ್ರೇನ್‌ ಸೇನೆ ಹೇಳಿದೆ. 

ದೇಶದ ಉತ್ತರ, ಈಶಾನ್ಯ, ಪೂರ್ವ ಮತ್ತು ದಕ್ಷಿಣ ಭಾಗದ ಪ್ರದೇಶಗಳನ್ನು ಗುರಿಯಾಗಿಸಿ, ರಷ್ಯಾ ಸೇನೆಯು ಕಳೆದ 24 ತಾಸುಗಳಲ್ಲಿ 27 ವೈಮಾನಿಕ ದಾಳಿ, ಒಂದು ಕ್ಷಿಪಣಿ ದಾಳಿ ಮತ್ತು ಬಹುವಿಧದ ಕ್ಷಿಪಣಿಗಳ 80 ದಾಳಿಗಳನ್ನು ನಡೆಸಿದೆ ಎಂದು ಹೇಳಲಾಗಿದೆ. 

ಝೆಲೆನ್ಸ್ಕಿ ಪಡೆಯಿಂದಲೂ ತಿರುಗೇಟು
ಇತ್ತ ರಷ್ಯಾ ದಾಳಿಗೆ ತಿರುಗೇಟು ನೀಡಿರುವ ಉಕ್ರೇನ್ ಸೇನೆ ರಷ್ಯಾದ ಡ್ರೋನ್ ಗಳನ್ನು ಹೊಡೆದುರುಳಿಸಿದೆ. ದೇಶದ ವಾಯುಗಡಿ ಪ್ರವೇಶಿಸಿದ ಇರಾನಿ ನಿರ್ಮಿತ 8 ಶಾಹಿದ್‌ ಡ್ರೋನ್‌ಗಳು ಮತ್ತು ಮೂರು ಕಲಿಬ್‌ ಕ್ರೂಸ್‌ ಕ್ಷಿಪಣಿಗಳನ್ನು ಪತ್ತೆಹಚ್ಚಿ ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್‌ ವಾಯು ಪಡೆ ಹೇಳಿದೆ. 

ರಷ್ಯಾದ ಬೆಲ್ಗೊರೋಡ್ ಪ್ರದೇಶದ ಮೇಲೆ ಹಾರಿ ಬಂದ ಉಕ್ರೇನ್‌ನ ಡ್ರೋನ್‌ಗಳನ್ನು ರಷ್ಯಾ ವಾಯುಪಡೆ ಹೊಡೆದುರುಳಿಸಿವೆ. ಕುರ್ಸ್ಕ್ ಪ್ರದೇಶದಲ್ಲಿ ಶೆಲ್ ದಾಳಿ ನಡೆದಿದೆ. ಯಾವುದೇ ಸಾವು-ನೋವು ಅಥವಾ ಆಸ್ತಿ ನಷ್ಟ ವರದಿಯಾಗಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.

ಕೀವ್‌ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಗುರಿ ನೆಟ್ಟಿದ್ದ ಡ್ರೋನ್‌ಗಳನ್ನು ಪತ್ತೆ ಹಚ್ಚಿ ಧ್ವಂಸಗೊಳಿಸಲಾಗಿದೆ. ಡ್ರೋನ್‌ ಅವಶೇಷಗಳು ಬಿದ್ದು ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ ಎಂದು ಕೀವ್‌ ಪ್ರಾದೇಶಿಕ ಗವರ್ನರ್‌ ರಸ್ಲಾನ್‌ ಕ್ರಾವ್‌ಶೆಂಕೊ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com