ಚೀನಾ: 56 ವರ್ಷದ ಈ ಕೋಟ್ಯಾಧೀಶ 27ನೇ ಬಾರಿಯು ಕಾಲೇಜು ಪ್ರವೇಶ ಪರೀಕ್ಷೆಯಲ್ಲಿ ಫೇಲ್!

ಈತ ಚೀನಾದ ಪ್ರತಿಷ್ಠಿತ ವ್ಯಕ್ತಿಗಳ ಒಬ್ಬರು.. ತಮ್ಮ ಪರಿಶ್ರಮದಿಂದ ಕೋಟ್ಯಾಧೀಶರಾದವರು.. ಆದರೆ ಈ ವರೆಗೂ ಕನಸಿನ ಕಾಲೇಜಿನ ಪ್ರವೇಶ ಪರೀಕ್ಷೆಯಲ್ಲಿ ಪಾಸಾಗಲು ಸಾಧ್ಯವಾಗಿಲ್ಲ..
ಚೀನಾದ 56 ವರ್ಷದ ಕೋಟ್ಯಾಧೀಶ
ಚೀನಾದ 56 ವರ್ಷದ ಕೋಟ್ಯಾಧೀಶ

ಬೀಜಿಂಗ್: ಈತ ಚೀನಾದ ಪ್ರತಿಷ್ಠಿತ ವ್ಯಕ್ತಿಗಳ ಒಬ್ಬರು.. ತಮ್ಮ ಪರಿಶ್ರಮದಿಂದ ಕೋಟ್ಯಾಧೀಶರಾದವರು.. ಆದರೆ ಈ ವರೆಗೂ ಕನಸಿನ ಕಾಲೇಜಿನ ಪ್ರವೇಶ ಪರೀಕ್ಷೆಯಲ್ಲಿ ಪಾಸಾಗಲು ಸಾಧ್ಯವಾಗಿಲ್ಲ..

ಅಚ್ಚರಿಯಾದರೂ ಇದು ಸತ್ಯ... ಚೀನಾದ 56 ವರ್ಷದ ಕೋಟ್ಯಾಧೀಶ ಲಿಯಾಂಗ್ ಶಿ ಅವರು ತಮ್ಮ ಕನಸಿನ ವಿಶ್ವವಿದ್ಯಾನಿಲಯ ಪ್ರವೇಶ ಮಾಡ ಬಯಸಿದ್ದು ಈ ವರೆಗೂ 26 ಬಾರಿ ಪ್ರವೇಶ ಪರೀಕ್ಷೆ ಬರೆದಿದ್ದು, 26 ಬಾರಿಯೂ ಫೇಲ್ ಆಗಿದ್ದು, ಇತ್ತೀಚೆಗೆ ನಡೆದ 27ನೇ ಬಾರಿಯ ಪರೀಕ್ಷೆಯಲ್ಲೂ ಫೇಲ್ ಆಗುವ ಮೂಲಕ ಸುದ್ದಿಯಾಗಿದ್ದಾರೆ.

ಲಿಯಾಂಗ್ ಶಿ ಕಳೆದ ನಾಲ್ಕು ದಶಕಗಳಲ್ಲಿ 27 ಬಾರಿ ಕಠಿಣ "ಗಾವೊಕಾವೊ" ಪರೀಕ್ಷೆಯನ್ನು ತೆಗೆದುಕೊಂಡಿದ್ದು, ಉನ್ನತ ಶ್ರೇಣಿಯ ಸಿಚುವಾನ್ ವಿಶ್ವವಿದ್ಯಾನಿಲಯದಲ್ಲಿ ಸ್ಥಾನ ಗಳಿಸಲು ಮತ್ತು "ಪದವಿದರ" ಆಗುವ ಅವರ ಮಹತ್ವಾಕಾಂಕ್ಷೆಯನ್ನು ಪೂರೈಸಲು ಆಶಿಸುತ್ತಿದ್ದಾರೆ. ಆದರೆ 27 ಬಾರಿಯೂ ಪ್ರವೇಶ ಪರೀಕ್ಷೆಯಲ್ಲಿ ಫೇಲ್ ಆಗಿದ್ದಾರೆ. ಕಟ್ಟಡ ನಿರ್ಮಾಣದ ಸಾಮಾನ್ಯ ಕೂಲಿ ಕಾರ್ಮಿಕನಾಗಿ ಔದ್ಯೋಗಿಕ ಜೀವನ ಆರಂಭಿಸಿದ ಲಿಯಾಂಗ್ ಶಿ ತಮ್ಮ ಬುದ್ದಿವಂತಿಕೆ ಮತ್ತು ಪರಿಶ್ರಮದಿಂದ ಇಂದು ನಿರ್ಮಾಣ ಸಾಮಗ್ರಿಗಳ ವ್ಯಾಪಾರ ಸಾಮ್ರಾಜ್ಯವನ್ನೇ ಕಟ್ಟಿದ್ದಾರೆ. ಈ ಪ್ರಕ್ರಿಯೆಯಲ್ಲಿ ಲಕ್ಷಾಂತರ ಯುವಾನ್‌ (ಚೀನಾದ ಹಣ)ಗಳನ್ನು ಗಳಿಸಿರುವ ಲಿಯಾಂಗ್ ಶಿ, ವಿಶ್ವವಿದ್ಯಾಲಯದ ಪದವಿ ಕನಸನ್ನು ಮಾತ್ರ ಸಾಕಾರಗೊಳಿಸಿಕೊಳ್ಳಲು ಈ ವರೆಗೂ ಸಾಧ್ಯವಾಗಿಲ್ಲ.

ತಮ್ಮ ಕನಸನ್ನು ಸಾಕಾರಗೊಳಿಸಿಕೊಳ್ಳಲು ಲಿಯಾಂಗ್ ಶಿ ತಮ್ಮ ದುಡಿಮೆಯ ಹೊರತಾಗಿಯೂ ನಿತ್ಯ 12 ಗಂಟೆಗಳ ಕಾಲ ಓದುತ್ತಾರೆ. ಓದಿಗಾಗಿ ಮದ್ಯಪಾನ-ಧೂಪಮಾನದಂತಹ ಎಲ್ಲ ರೀತಿಯ ಚಟಗಳನ್ನು ತ್ಯಜಿಸಿದ್ದಾರೆ. ಅದಾಗ್ಯೂ ಅವರು ತಮ್ಮ ಕನಸು ಸಾಧಿಸಿಕೊಳ್ಳುವಲ್ಲಿ ಸತತವಾಗಿ ವಿಫಲರಾಗುತ್ತಿದ್ದಾರೆ. ಅವರ ಈ ಪ್ರಯತ್ನವನ್ನು ಸ್ಥಳೀಯ ಮಾಧ್ಯಮಗಳು ಪ್ರಚಾರದ ತಂತ್ರ ಎಂದು ಟೀಕಿಸುತ್ತಿವೆಯಾದರೂ ಅವುಗಳಿಗೆ ತಲೆಕೆಡಿಸಿಕೊಳ್ಳದ ಲಿಯಾಂಗ್ ಶಿ ತಮ್ಮ ಓದಿನಲ್ಲಿ ನಿರತರಾಗಿದ್ದಾರೆ. "ತಪಸ್ವಿ ಸನ್ಯಾಸಿ" ಯಂತೆ ತಿಂಗಳುಗಳ ಓದಿನಲ್ಲಿ ಮಗ್ನರಾಗಿದ್ದರೂ, ಈ ವರ್ಷ ಲಿಯಾಂಗ್ ಯಾವುದೇ ವಿಶ್ವವಿದ್ಯಾನಿಲಯಕ್ಕೆ ಪ್ರವೇಶಿಸಲು ಸಾಧ್ಯವಾಗಿಲ್ಲ. ಪರೀಕ್ಷೆ ಪಾಸಾಗಲು ಇರುವ ಅಂಕಗಳಿಗಿಂತ ಅವರಿಗೆ 34 ಅಂಕಗಳ ಕೊರತೆ ಎದುರಾಗಿದೆ. ಹೀಗಾಗಿ ಲಿಯಾಂಗ್ ಶಿ ಮತ್ತೆ ಫೇಲ್ ಆಗಿದ್ದಾರೆ. 

ಆದರೂ ಧೈರ್ಯ ಕಳೆದುಕೊಳ್ಳದ ಲಿಯಾಂಗ್ ಶಿ, ಪರೀಕ್ಷೆಗೂ ಮುನ್ನ ನಾನು ಈ ಗಣ್ಯ ವಿಶ್ವವಿದ್ಯಾನಿಲಯಕ್ಕೆ ಪ್ರವೇಶಿಸಲು ಸಾಕಷ್ಟು ಹೆಚ್ಚಿನ ಅಂಕಗಳನ್ನು ಪಡೆಯಲು ನನಗೆ ಸಾಧ್ಯವಾಗುವುದಿಲ್ಲ ಎಂಬ ಭಾವನೆ ನನ್ನಲ್ಲಿತ್ತು ಎಂದು ಹೇಳಿದ್ದಾರೆ.

ಶುಕ್ರವಾರ ರಾತ್ರಿ 10 ಗಂಟೆಗೆ ಸ್ವಲ್ಪ ಮೊದಲು -- ನೈಋತ್ಯ ಸಿಚುವಾನ್ ಪ್ರಾಂತ್ಯದಾದ್ಯಂತ ನೂರಾರು ಸಾವಿರ ಹೈಸ್ಕೂಲ್ ವಿದ್ಯಾರ್ಥಿಗಳ ಜೊತೆಗೆ - ಉದ್ಯಮಿ ಲಿಯಾಂಗ್ ಶೀ ಕೂಡ ತಮ್ಮ ಪರೀಕ್ಷಾ ಫಲಿತಾಂಶಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದರು. ಈ ಫಲಿತಾಂಶ ಪ್ರಕಟ ಪ್ರಕ್ರಿಯೆಯನ್ನು ಮಾಧ್ಯಮಗಳು ನೇರ ಪ್ರಸಾರ ಮಾಡುತ್ತಿದ್ದವು. ಆದರೆ ಫಲಿತಾಂಶ ಪ್ರಕಟವಾದ ಬಳಿಕ ಲಿಯಾಂಗ್ ಮೊಗದಲ್ಲಿ ಮತ್ತದೇ ನಿರಾಶೆ.. ಈ ವರ್ಷವೂ ಮತ್ತೆ ಎಲ್ಲಾ ಮುಗಿದಿದೆ.. "ಇದು ತುಂಬಾ ವಿಷಾದನೀಯ.. ಎಂದು ಅವರು ತಮ್ಮಷ್ಟಕ್ಕೇ ಹೇಳಿಕೊಂಡರು.

ಪ್ರತೀ ವರ್ಷದಂತೆ ಈ ಬಾರಿಯೂ ಲಿಯಾಂಗ್ ಶಿ ಮುಂದಿನ ವರ್ಷ ಪಾಸಾಗುವ ಕುರಿತು ಪ್ರತಿಜ್ಞೆ ಮಾಡಿದ್ದಾರೆ. 

"ನಾನು ನಿಜವಾಗಿಯೂ ಸುಧಾರಣೆಯ ಭರವಸೆಯನ್ನು ಕಾಣದಿದ್ದರೆ, ಅದನ್ನು ಮತ್ತೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ನಾನು ನಿಜವಾಗಿಯೂ ಪ್ರತಿದಿನ ತುಂಬಾ ಕಷ್ಟಪಟ್ಟು ಕೆಲಸ ಮಾಡಿದ್ದೇನೆ. ನಾನು ಮುಂದಿನ ವರ್ಷ ಗಾವೊಕಾವೊಗೆ ತಯಾರಿ ನಡೆಸುತ್ತೇನೆಯೇ ಎಂದು ಹೇಳುವುದು ಕಷ್ಟ" ಎಂದು ನೋವಿನಿಂದ ಹೇಳಿರುವ ಅವರು ಅಂತೆಯೇ ಗಾವೊಕಾವೊ ಪರೀಕ್ಷೆಗೆ ಸಿದ್ಧತೆಯಿಲ್ಲದ ಜೀವನವು ಬಹುತೇಕ ಯೋಚಿಸಲಾಗುವುದಿಲ್ಲ. ಇದು ಕಠಿಣ.. ಆದರೂ ನಾನು ಸಹ ಬಿಟ್ಟುಕೊಡಲು ಸಿದ್ಧರಿಲ್ಲ. ನಾನು ಒಂದು ವೇಳೆ ಗಾವೊಕಾವೊ ಪರೀಕ್ಷೆ ತೆಗೆದುಕೊಳ್ಳುವುದನ್ನು ನಿಲ್ಲಿಸಿದರೆ, ನನ್ನ ಜೀವನದುದ್ದಕ್ಕೂ ನಾನು ಕುಡಿಯುವ ಪ್ರತಿ ಕಪ್ ಚಹಾವು ವಿಷಾದದ ರುಚಿಯನ್ನು ಹೊಂದಿರುತ್ತದೆ ಎಂದು ಹೇಳುವ ಮೂಲಕ ಮತ್ತೆ ಮುಂದಿನ ವರ್ಷದ ಪರೀಕ್ಷೆಗೆ ಸಿದ್ದರಾಗುವ ಕುರಿತು ಲಿಯಾಂಗ್ ಶಿ ಸುಳಿವು ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com