ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಆತ್ಮಾಹುತಿ ದಾಳಿ; 9 ಪೊಲೀಸರು ಸಾವು, 13 ಮಂದಿಗೆ ಗಾಯ

ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಸೋಮವಾರ ನಡೆದ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ ಒಂಬತ್ತು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ ಮತ್ತು 13 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕರಾಚಿ: ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಸೋಮವಾರ ನಡೆದ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ ಒಂಬತ್ತು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ ಮತ್ತು 13 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ವೆಟ್ಟಾ-ಸಿಬಿ ಹೆದ್ದಾರಿಯ ಕಾಂಬ್ರಿ ಸೇತುವೆ ಮೇಲೆ ಬಲೂಚಿಸ್ತಾನದ ಕಾನ್‌ಸ್ಟಾಬ್ಯುಲರಿ ಸಿಬ್ಬಂದಿಯಿದ್ದ ಟ್ರಕ್ ಬಳಿ ಸ್ಫೋಟ ಸಂಭವಿಸಿದೆ ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.

ಇದು ಆತ್ಮಹತ್ಯಾ ದಾಳಿ ಎಂದು ಪ್ರಾಥಮಿಕ ಸಾಕ್ಷ್ಯಾಧಾರಗಳು ಸೂಚಿಸುತ್ತಿವೆ. ಆದಾಗ್ಯೂ, ತನಿಖೆಯ ನಂತರ ಸ್ಫೋಟದ ನಿಖರ ಸ್ವರೂಪ ತಿಳಿಯಲಿದೆ. ಬಾಂಬ್ ನಿಷ್ಕ್ರಿಯ ದಳ ಘಟನಾ ಸ್ಥಳಕ್ಕೆ ತಲುಪಿದ್ದು, ಸ್ಫೋಟದ ಬಳಿಕ ಆ ಪ್ರದೇಶದಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ಕಚ್ಚಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಮೆಹಮೂದ್ ನೋಟ್ಜೈ ಹೇಳಿದ್ದಾರೆ.

ಈವರೆಗೆ ಯಾವ ಸಂಘಟನೆಗಳು ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಘಟನೆ ವರದಿಯಾದ ತಕ್ಷಣ ಸ್ಥಳೀಯ ಆಡಳಿತ ಮತ್ತು ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿವೆ.

ಬಲೂಚಿಸ್ತಾನ ಕಾನ್‌ಸ್ಟಾಬ್ಯುಲರಿ (ಬಿಸಿ) ಸಿಬ್ಬಂದಿ ಸಿಬಿ ಮೇಳದಲ್ಲಿ ಕರ್ತವ್ಯ ಮುಗಿಸಿ ಹಿಂತಿರುಗುತ್ತಿದ್ದಾಗ ಅವರನ್ನು ಗುರಿಯಾಗಿಸಿ ಸ್ಫೋಟಿಸಲಾಗಿದೆ. ಸ್ಫೋಟದ ತೀವ್ರತೆಗೆ ಟ್ರಕ್ ಪಲ್ಟಿಯಾಗಿದೆ ಎಂದು ವರದಿ ತಿಳಿಸಿದೆ.

ಮೃತದೇಹಗಳು ಮತ್ತು ಗಾಯಗೊಂಡ ಸಿಬ್ಬಂದಿಯನ್ನು ಸಿಬಿ ಜಿಲ್ಲೆಗೆ ಸ್ಥಳಾಂತರಿಸಲಾಗಿದ್ದು, ಅಲ್ಲಿ ಅವರಿಗೆ ವೈದ್ಯಕೀಯ ನೆರವು ನೀಡಲಾಗುತ್ತಿದೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.

ಬಿಸಿಯು ಪ್ರಾಂತೀಯ ಪೊಲೀಸ್ ಪಡೆಯ ವಿಭಾಗವಾಗಿದ್ದು, ಪ್ರಮುಖ ಘಟನೆಗಳಲ್ಲಿ ಮತ್ತು ಜೈಲುಗಳು ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಯನ್ನು ಒದಗಿಸುತ್ತದೆ.

ಖೈಬರ್ ಪಖ್ತುಂಖ್ವಾ ಪ್ರಾಂತ್ಯ ಮತ್ತು ಅಫ್ಘಾನಿಸ್ತಾನದ ಗಡಿ ಪ್ರದೇಶಗಳ ದಾಳಿಯ ನೆರಳಿನಲ್ಲೇ ಸ್ಫೋಟ ಸಂಭವಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com