ಹಡಗು ಹೈಜಾಕ್ ವಿಡಿಯೋ ಬಿಡುಗಡೆ ಮಾಡಿದ ಹೌತಿ ಬಂಡುಕೋರರು
ಹಡಗು ಹೈಜಾಕ್ ವಿಡಿಯೋ ಬಿಡುಗಡೆ ಮಾಡಿದ ಹೌತಿ ಬಂಡುಕೋರರು

ಭಾರತಕ್ಕೆ ಬರುತ್ತಿದ್ದ ಹಡಗು ಅಪಹರಣ: ವಿಡಿಯೋ ಬಿಡುಗಡೆ ಮಾಡಿದ ಯೆಮೆನ್‌ನ ಹೌತಿ ಬಂಡುಕೋರರು

ಭಾರತಕ್ಕೆ ಬರುತ್ತಿದ್ದ ಇಸ್ರೇಲ್ ಮೂಲದ "ಗ್ಯಾಲಕ್ಸಿ ಲೀಡರ್" ಹಡಗಿನ ಅಪಹರಣದ ಕ್ಷಣಗಳ ವಿಡಿಯೋವನ್ನು ಯೆಮೆನ್ ಮೂಲದ ಹೌತಿ ಬಂಡುಕೋರರು ಬಿಡುಗಡೆ ಮಾಡಿದ್ದಾರೆ.

ನವದೆಹಲಿ: ಭಾರತಕ್ಕೆ ಬರುತ್ತಿದ್ದ ಇಸ್ರೇಲ್ ಮೂಲದ "ಗ್ಯಾಲಕ್ಸಿ ಲೀಡರ್" ಹಡಗಿನ ಅಪಹರಣದ ಕ್ಷಣಗಳ ವಿಡಿಯೋವನ್ನು ಯೆಮೆನ್ ಮೂಲದ ಹೌತಿ ಬಂಡುಕೋರರು ಬಿಡುಗಡೆ ಮಾಡಿದ್ದಾರೆ.

ಹಮಾಸ್ ವಿರುದ್ಧದ ಯುದ್ಧದ ಪ್ರತೀಕಾರವಾಗಿ ಇಸ್ರೇಲಿ ಹಡಗುಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವ ಎಚ್ಚರಿಕೆ ನೀಡಿರುವ ಹೌತಿ ಬಂಡುಕೋರರು, ಹಡಗು ಇಸ್ರೇಲಿಗೆ ಸೇರಿದ್ದು ಎಂದು ಹೇಳಿದ್ದಾರೆ. ಆದರೆ ಹೌತಿ ಬಂಡುಕೋರರ ಹೇಳಿಕೆಯನ್ನು ಇಸ್ರೇಲ್ ನಿರಾಕರಿಸಿದೆ, ಅದರಲ್ಲಿ ಯಾವುದೇ ಇಸ್ರೇಲಿ ಪ್ರಜೆಯೂ ಇಲ್ಲ.. ಅಪಹರಣಕ್ಕೊಳಗಾದ ಹಡಗು ಇಸ್ರೇಲ್ ನದ್ದಲ್ಲ ಎಂದು ಹೇಳಿದೆ.

ಟರ್ಕಿಯಿಂದ ಭಾರತಕ್ಕೆ ತೆರಳುತ್ತಿದ್ದ ಹಡಗು ನಿನ್ನೆ ಅಪಹರಣಕ್ಕೆ ಒಳಗಾಗಿತ್ತು. ಇದೀಗ ಹೌತಿ ಬಂಡುಕೋರರು ಎರಡು ನಿಮಿಷಗಳ ಹಡಗಿನ ಹೈಜಾಕ್ ವಿಡಿಯೋ ಕ್ಲಿಪ್ ಬಿಡುಗಡೆ ಮಾಡಿದ್ದು, ಬಂಡುಕೋರರು ಹೆಲಿಕಾಪ್ಟರ್‌ನಲ್ಲಿ ಬಂದು ಹಡಗಿನ ಮೇಲೆ ದಾಳಿ ನಡೆಸಿದ್ದಾರೆ. ಹೆಲಿಕಾಪ್ಟರ್ ನೇರವಾಗಿ ಹಡಗಿನ ಡೆಕ್‌ನಲ್ಲಿ ಇಳಿದಿದ್ದು, ಅಲ್ಲಿ ರಕ್ಷಣೆಗೆ ಯಾರೂ ಇರಲಿಲ್ಲ. ನಂತರ ಘೋಷಣೆಗಳನ್ನು ಕೂಗುತ್ತಾ ಮತ್ತು ಗುಂಡು ಹಾರಿಸುತ್ತಾ ಅವರು ಡೆಕ್‌ನಾದ್ಯಂತ ಓಡಿ, ವೀಲ್‌ಹೌಸ್ ಮತ್ತು ಹಡಗಿನ ನಿಯಂತ್ರಣ ಕೇಂದ್ರವನ್ನು ಸ್ವಾಧೀನಪಡಿಸಿಕೊಂಡರು. ವಿಡಿಯೊದಲ್ಲಿ ಕಂಡುಬರುವ ಕೆಲವು ಸಿಬ್ಬಂದಿಗಳು, ಸಂಪೂರ್ಣವಾಗಿ ಆಶ್ಚರ್ಯ ಮತ್ತು ಆಘಾತದಿಂದ ತಮ್ಮ ಕೈಗಳನ್ನು ಶರಣಾಗತಿ ರೀತಿಯಲ್ಲಿ ಮೇಲೆಕ್ಕೆ ಎತ್ತುತ್ತಾರೆ.

ಇದೇ ವಿಡಿಯೋದಲ್ಲಿ ಇತರ ಬಂಡುಕೋರರು ಗುಂಡು ಹಾರಿಸುತ್ತಾ ಹಡಗಿನ ಮೂಲಕ ನುಗ್ಗುತ್ತಿರುವುದನ್ನು ಕಾಣಬಹುದು. ಅಪಹರಣದ ಬಳಿಕ ಹಡಗನ್ನು ಹೊಡೆಡಾ ಪ್ರಾಂತ್ಯದ ಸಲೀಫ್ ಬಂದರಿನ ಯೆಮೆನ್ ಬಂದರಿಗೆ ಮರು-ಮಾರ್ಗ ಮಾಡಲಾಗಿದೆ ಎಂದು ಕಡಲ ಭದ್ರತಾ ಕಂಪನಿ ಆಂಬ್ರೆ ಮತ್ತು ಯೆಮೆನ್ ಕಡಲ ಮೂಲವನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ.

ಹಡಗಿನ ಹೈಜಾಕ್ ಬಳಿಕ ಇದು "ಆರಂಭ ಮಾತ್ರ" ಎಂದು ಹೌತಿ ಸಂಘಟನೆ ವಕ್ತಾರ ಮೊಹಮ್ಮದ್ ಅಬ್ದುಲ್-ಸಲಾಮ್ ಭಾನುವಾರ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ಹೇಳಿದ್ದು, ಕೆಂಪು ಸಮುದ್ರ ಮಾರ್ಗದಲ್ಲಿ ಬರುವ ಎಲ್ಲ ಇಸ್ರೇಲಿ ಹಡಗುಗಳನ್ನೂ ಅಪಹರಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಇಸ್ರೇಲ್ ತನ್ನ ಗಾಜಾ ಕಾರ್ಯಾಚರಣೆಯನ್ನು ನಿಲ್ಲಿಸುವವರೆಗೆ ಮತ್ತಷ್ಟು ಕಡಲ ದಾಳಿಗಳನ್ನು ನಡೆಸುವುದಾಗಿ ಹೌತಿ ಬಂಡುಕೋರರು ಪ್ರತಿಜ್ಞೆ ಮಾಡಿದ್ದಾರೆ.

ಇನ್ನು ಅಪಹರಣಕ್ಕೊಳಗಾದ ಹಡಗಿನ ಮೇಲೆ ಬಹಾಮಾಸ್ ಧ್ವಜವಿತ್ತು. ಹಡಗಿನಲ್ಲಿ ವಿವಿಧ ರಾಷ್ಟ್ರಗಳಿಗೆ ಸೇರಿದ ಸುಮಾರು 25 ಸಿಬ್ಬಂದಿ ಇದ್ದರು. ಇದು ಬ್ರಿಟಿಷ್ ಕಂಪನಿಯ ಒಡೆತನದಲ್ಲಿದ್ದು, ಇಸ್ರೇಲಿ ಉದ್ಯಮಿ ಅಬ್ರಹಾಂ "ರಾಮಿ" ಉಂಗಾರ್ ಅವರೂ ಕೂಡ ಈ ಹಡಗಿನ ಸಹ ಮಾಲೀಕರು ಎಂದು ಹೇಳಲಾಗಿದೆ. ಅಪಹರಣದ ಸಮಯದಲ್ಲಿ ಹಡಗನ್ನು ಜಪಾನಿನ ಕಂಪನಿಗೆ ಗುತ್ತಿಗೆಗೆ ನೀಡಲಾಗಿದೆ. 

ಇಸ್ರೇಲ್ ಖಂಡನೆ, ಇರಾನ್ ಮೇಲೆ ಆರೋಪ
ಇನ್ನು ಹಡಗು ಅಪಹರಣವನ್ನು ಇಸ್ರೇಲ್ ಖಂಡಿಸಿದ್ದು, ಈ ಕುರಿತು ಟ್ವೀಟ್ ಮಾಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹಡಗು ಅಪಹರಣದಲ್ಲಿ ಇರಾನ್ ಬೆಂಬಲದಿಂದ ಹೌತಿ ಉಗ್ರರು ಹಡಗು ಅಪಹರಿಸಿದ್ದಾರೆ. ಇದು ಇರಾನಿನ ಭಯೋತ್ಪಾದನೆಯ ಮತ್ತೊಂದು ಕೃತ್ಯವಾಗಿದೆ ಮತ್ತು ಜಾಗತಿಕ ಹಡಗು ಮಾರ್ಗಗಳ ಸುರಕ್ಷತೆಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಪರಿಣಾಮಗಳೊಂದಿಗೆ ಮುಕ್ತ ಪ್ರಪಂಚದ ನಾಗರಿಕರ ವಿರುದ್ಧ ಇರಾನ್‌ನ ಆಕ್ರಮಣದಲ್ಲಿ ಒಂದು ಜಿಗಿತವನ್ನು ರೂಪಿಸುತ್ತದೆ ಎಂದು ಹೇಳಿದ್ದಾರೆ.

ಅಂತೆಯೇ ಇಸ್ರೇಲ್ ಆರೋಪವನ್ನು ಇರಾನ್ ತಳ್ಳಿಹಾಕಿದೆ.

Related Stories

No stories found.

Advertisement

X
Kannada Prabha
www.kannadaprabha.com