Israel-Gaza Conflict: 2ನೇ ಹಂತದಲ್ಲಿ 17 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್‌

ಕದನವಿರಾಮ ಒಪ್ಪಂದದಂತೆ 2ನೇ ಹಂತದಲ್ಲಿ 13 ಇಸ್ರೇಲಿ ಮತ್ತು 4 ಥಾಯ್‌ ಒತ್ತೆಯಾಳುಗಳನ್ನು ಹಮಾಸ್‌ ಬಂಡುಕೋರರು ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಒಟ್ಟು 17 ಮಂದಿ ಒತ್ತೆಯಾಳುಗಳು ಭಾನುವಾರ ತಮ್ಮ ಕುಟುಂಬ ಸೇರಿಕೊಂಡಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಜೆರುಸಲೇಂ: ಕದನವಿರಾಮ ಒಪ್ಪಂದದಂತೆ 2ನೇ ಹಂತದಲ್ಲಿ 13 ಇಸ್ರೇಲಿ ಮತ್ತು 4 ಥಾಯ್‌ ಒತ್ತೆಯಾಳುಗಳನ್ನು ಹಮಾಸ್‌ ಬಂಡುಕೋರರು ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಒಟ್ಟು 17 ಮಂದಿ ಒತ್ತೆಯಾಳುಗಳು ಭಾನುವಾರ ತಮ್ಮ ಕುಟುಂಬ ಸೇರಿಕೊಂಡಿವೆ.

ಶನಿವಾರ ತಡರಾತ್ರಿ ಹಮಾಸ್, ಒತ್ತೆಯಾಳುಗಳನ್ನು ಇಂಟರ್ನ್ಯಾಷನಲ್ ಕಮಿಟಿ ಆಫ್ ರೆಡ್‌ಕ್ರಾಸ್‌ಗೆ (ICRC) ಹಸ್ತಾಂತರಿಸುತ್ತಿದ್ದಂತೆ, ಬಿಡುಗಡೆಗೊಂಡ ಜನರು ಗಾಜಾವನ್ನು ತೊರೆದು ರಫಾ ಗಡಿ ದಾಟುವ ಈಜಿಪ್ಟ್‌ ಭಾಗದ ದೃಶ್ಯಾವಳಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿವೆ.

ಬಿಡುಗಡೆಯಾದ 13 ಇಸ್ರೇಲಿಗಳ ಪೈಕಿ ಆರು ಮಂದಿ ಮಹಿಳೆಯರು ಮತ್ತು ಏಳು ಮಕ್ಕಳಿದ್ದಾರೆಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಮಾಹಿತಿ ನೀಡಿದೆ.

ಹಮಾಸ್ ಹಾಗೂ ಇಸ್ರೇಲ್‌ ನಡುವಿನ ಈ ಒಪ್ಪಂದದನ್ವಯ 3 ಹಾಗೂ 1ರ ಅನುಪಾತದಲ್ಲಿ ಒತ್ತೆಯಾಳುಗಳ ಬಿಡುಗಡೆ ಪ್ರಕ್ರಿಯೆ ನಡೆಯುತ್ತಿದೆ. ಅಂದರೆ ಹಂತ, ಹಂತವಾಗಿ ಹಮಾಸ್‌ ಬಂಡುಕೋರರಿಂದ 50 ಒತ್ತೆಯಾಳುಗಳ ಬಿಡುಗಡೆ ಹಾಗೂ ಪ್ರತಿಯಾಗಿ ಇಸ್ರೇಲ್‌ನಿಂದ 150 ಪ್ಯಾಲೆಸ್ಟೀನ್‌ ಕೈದಿಗಳ ಬಿಡುಗಡೆ ಕುರಿತಂತೆ ಒಪ್ಪಂದ ಆಗಿತ್ತು.

ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಇಸ್ರೇಲ್​ ಮೇಲೆ 5 ಸಾವಿರಕ್ಕೂ ಅಧಿಕ ರಾಕೆಟ್​ಗಳಿಂದ ದಾಳಿ ನಡೆಸಿದ್ದರು. ಅದಕ್ಕೆ ಪ್ರತಿಯಾಗಿ ಇಸ್ರೇಲ್ ಗಾಜಾದಲ್ಲಿ ದಾಳಿ ಆರಂಭಿಸಿತ್ತು. ಹಮಾಸ್​ನ್ನು ಹತ್ತಿಕ್ಕುವವರೆಗೂ ಯುದ್ಧವನ್ನು ನಿಲ್ಲಿಸುವುದಿಲ್ಲ ಎಂದು ಇಸ್ರೇಲ್ ಹೇಳಿತ್ತು. ಅಷ್ಟೇ ಅಲ್ಲದೆ, ಯುದ್ಧವನ್ನು ನಾವು ಪ್ರಾರಂಭಿಸಿಲ್ಲ ಆದರೆ ಅಂತ್ಯ ನಮ್ಮಿಂದಲೇ ಆಗಲಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹೇಳಿದ್ದರು.

ಇದಾದ ಬಳಿಕ ಕತಾರ್ ಮಧ್ಯಸ್ಥಿಕೆಯಲ್ಲಿ 4 ದಿನಗಳ ಕದನ ವಿರಾಮಕ್ಕೆ ಇಸ್ರೇಲ್ ಒಪ್ಪಿಗೆ ನೀಡಿತ್ತು. ಅದರ ಭಾಗವಾಗಿ ಇದೀಗ ಒತ್ತೆಯಾಳುಗಳ ಬಿಡುಗಡೆ ಪ್ರಕ್ರಿಯೆ ನಡೆಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com