ಇಸ್ರೇಲ್​-ಲೆಬನಾನ್ ಗಡಿಯಲ್ಲಿ 900 ಭಾರತೀಯ ಸೈನಿಕರ ನಿಯೋಜನೆ!; ಗಾಜಾ ಆಸ್ಪತ್ರೆ ಮೇಲೆ ವೈಮಾನಿಕ ದಾಳಿ, 200 ಸಾವು

ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ ತಾರಕಕ್ಕೇರಿರುವಂತೆಯೇ ಇತ್ತ ಇಸ್ರೇಲ್ ಮತ್ತು ಲೆಬನಾನ್ ಗಡಿಯಲ್ಲಿ 900 ಭಾರತೀಯ ಸೈನಿಕರನ್ನು ನಿಯೋಜನೆ ಮಾಡಲಾಗಿದೆ.
ಇಸ್ರೇಲ್-ಲೆಬನಾನ್ ಗಡಿಯಲ್ಲಿ ಭಾರತೀಯ ಸೇನೆ
ಇಸ್ರೇಲ್-ಲೆಬನಾನ್ ಗಡಿಯಲ್ಲಿ ಭಾರತೀಯ ಸೇನೆ

ಟೆಲ್ ಅವೀವ್: ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ ತಾರಕಕ್ಕೇರಿರುವಂತೆಯೇ ಇತ್ತ ಇಸ್ರೇಲ್ ಮತ್ತು ಲೆಬನಾನ್ ಗಡಿಯಲ್ಲಿ 900 ಭಾರತೀಯ ಸೈನಿಕರನ್ನು ನಿಯೋಜನೆ ಮಾಡಲಾಗಿದೆ.

ಹೌದು.. ಹಮಾಸ್ ಭಯೋತ್ಪಾದಕರು ಇಸ್ರೇಲ್​ ಮೇಲೆ ಏಕಾಏಕಿ ದಾಳಿ ನಡೆಸಿದ್ದರು, ಅದಕ್ಕೆ ಪ್ರತಿಯಾಗಿ ಇಸ್ರೇಲ್ ಕೂಡ ಗಾಜಾದ ಮೇಲೆ ಬಾಂಬ್ ದಾಳಿ ನಡೆಸಿದೆ, ಈ ಸಂಘರ್ಷದಲ್ಲಿ ಇದುವರೆಗೆ ಒಟ್ಟಾರೆ 4 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

ಇಸ್ರೇಲ್-ಹಮಾಸ್ ಯುದ್ಧದಲ್ಲಿ ಹಿಂಸಾಚಾರ ಮತ್ತು ಜೀವಹಾನಿಯ ಬಗ್ಗೆ ಭಾರತ ಸರ್ಕಾರವು ಕಳವಳ ವ್ಯಕ್ತಪಡಿಸುತ್ತಿರುವಾಗ, ಇರಾನ್ ಬೆಂಬಲಿತ ಹಿಜ್ಬುಲ್ಲಾ ಮತ್ತು ಇಸ್ರೇಲ್ ಸೇನೆಯ ನಡುವಿನ ಸಂಘರ್ಷದಿಂದಾಗಿ ಉದ್ವಿಗ್ನತೆ ಹೆಚ್ಚಿರುವ ಲೆಬನಾನ್‌ನ ದಕ್ಷಿಣ ಗಡಿಯಲ್ಲಿ ಭಾರತೀಯ ಪಡೆಗಳನ್ನು ನಿಯೋಜಿಸಲಾಗಿದೆ. ಇಸ್ರೇಲ್-ಲೆಬನಾನ್ ಗಡಿಯಲ್ಲಿ ಸುಮಾರು 900 ಭಾರತೀಯ ಸೈನಿಕರನ್ನು ನಿಯೋಜಿಸಲಾಗಿದೆ.

ಭಾರತೀಯ ಪಡೆಗಳು 110 ಕಿಮೀ ಉದ್ದದ ‘ಬ್ಲೂ ಲೈನ್’ನಲ್ಲಿ ನೆಲೆಗೊಂಡಿವೆ.ಇಸ್ರೇಲ್-ಲೆಬನಾನ್ ಗಡಿಯ ಹೊರತಾಗಿ, ಇಸ್ರೇಲ್ ಮತ್ತು ಸಿರಿಯಾ ನಡುವಿನ ಗೋಲನ್ ಹೈಟ್ಸ್‌ನಲ್ಲಿ ವಿಶ್ವಸಂಸ್ಥೆಯ ಡಿಸ್‌ಎಂಗೇಜ್‌ಮೆಂಟ್ ಫೋರ್ಸ್ (ಯುಎನ್‌ಡಿಒಎಫ್) ಭಾಗವಾಗಿ ಇನ್ನೂ 200 ಭಾರತೀಯ ಸೈನಿಕರನ್ನು ನಿಯೋಜಿಸಲಾಗಿದೆ. ಆ ಮೂಲಕ ಈ ವರೆಗೂ ಒಟ್ಟಾರೆ 900 ಭಾರತೀಯ ಸೈನಿಕರನ್ನು ಇಸ್ರೇಲ್​-ಲೆಬನಾನ್ ಗಡಿಯಲ್ಲಿ ನಿಯೋಜಿಸಲಾಗಿದೆ.

ಭಾರತೀಯ ಸೈನಿಕರನ್ನೇಕೆ ಇಸ್ರೇಲ್ ಗಡಿಯಲ್ಲಿ ನಿಯೋಜಿಸಲಾಗಿದೆ?
ಎರಡು ಸಂಘರ್ಷದ ದೇಶಗಳ ನಡುವೆ ಶಾಂತಿ ಕಾಪಾಡುವುದು ಭಾರತೀಯ ಸೈನಿಕರ ಉದ್ದೇಶವಾಗಿದ್ದು, ಪ್ರಸ್ತುತ, 48 ರಾಷ್ಟ್ರಗಳಿಂದ ಸುಮಾರು 10,500 ಶಾಂತಿಪಾಲಕರನ್ನು ಗಡಿಯಲ್ಲಿ ನಿಯೋಜಿಸಲಾಗಿದೆ. ಲೆಬನಾನ್ ಸಹ ಇಸ್ರೇಲ್ ಮೇಲೆ ಹಲವಾರು ರಾಕೆಟ್​ಗಳನ್ನು ಹಾರಿಸಿತು ಮತ್ತು ಇಸ್ರೇಲ್ ಸೈನ್ಯವು ಪ್ರತಿದಾಳಿ ನಡೆಸಿತು ಅಂತಹ ಪರಿಸ್ಥಿತಿಯಲ್ಲಿ ಲೆಬನಾನ್ ಹಾಗೂ ಇಸ್ರೇಲ್ ಗಡಿಯಲ್ಲಿ ವಿಶ್ವಸಂಸ್ಥೆಯ ಶಾಂತಿ ಸ್ಥಾಪನೆ ಪಡೆ ನಿಯೋಜಿಸಲಾಗಿದೆ.

ಅದರಲ್ಲಿ ಭಾರತೀಯ ಸೈನಿಕರೂ ಕೂಡ ಇದ್ದಾರೆ. ಈ ನಿಯೋಜನೆಯು ಯುಎನ್ ಶಾಂತಿಪಾಲನಾ ಕಾರ್ಯಾಚರಣೆಗಳಿಗೆ ಕೊಡುಗೆ ನೀಡುವ ಮೂಲಕ ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವ ಭಾರತದ ಬದ್ಧತೆಯ ಭಾಗವಾಗಿದೆ. ಇಸ್ರೇಲ್ ಪ್ಯಾಲೆಸ್ಟೀನಿಯನ್ ಗುಂಪು ಹಮಾಸ್​ ನಡುವಿನ ಸಂಘರ್ಷದ ಮಧ್ಯೆ ಇಸ್ರೇಲ್ ಲೆಬನಾನ್​​ನ ಹಿಜ್ಬುಲ್ಲಾದಿಂದ ಬೆದರಿಕೆ ಎದುರಿಸುತ್ತಿದೆ.

ಗಾಜಾ ಆಸ್ಪತ್ರೆ ಮೇಲೆ ವೈಮಾನಿಕ ದಾಳಿ, 200 ಸಾವು
ಮತ್ತೊಂದೆಡೆ ಹಮಾಸ್ ಉಗ್ರರು ಅಡಗಿರುವ ಗಾಜಾಪಟ್ಟಿ ಮೇಲೆ ಇಸ್ರೇಲ್ ವೈಮಾನಿಕ ದಾಳಿ ಮುಂದುವರೆದಿದ್ದು, ಇತ್ತ ಗಾಜಾಪಟ್ಟಿಯಲ್ಲಿರುವ ಆಸ್ಪತ್ರೆ ಮೇಲೆ ಇಸ್ರೇಲ್ ಯುದ್ಧ ವಿಮಾನಗಳು ಹಾರಿಸಿದ ಬಾಂಬ್ ಸ್ಫೋಟವಾಗಿದೆ. ಪರಿಣಾಮ 200 ಮಂದಿ ಸಾವನ್ನಪ್ಪಿದ್ದಾರೆ ಎಂದು ಗಾಜಾ ವಕ್ತಾರರು ತಿಳಿಸಿದ್ದಾರೆ.

ಮಂಗಳವಾರ ಗಾಜಾ ಆರೋಗ್ಯ ಸಚಿವಾಲಯವು 10 ದಿನಗಳ ಭಾರೀ ಬಾಂಬ್ ದಾಳಿಯಿಂದ ಸ್ಥಳಾಂತರಗೊಂಡ 200 ರಿಂದ 300 ಜನರು ಸ್ಥಳಾಂತರಗೊಂಡಿದ್ದಾರೆ. ಸೆಂಟ್ರಲ್ ಗಾಜಾದಲ್ಲಿರುವ ಅಹ್ಲಿ ಅರಬ್ ಆಸ್ಪತ್ರೆ ಕಾಪೌಂಡ್ ನಲ್ಲಿ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು ಈ ವೇಳೆ ಕನಿಷ್ಠ 200 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ ನೂರಾರು ಸಂತ್ರಸ್ತರು ಇನ್ನೂ ಅವಶೇಷಗಳ ಅಡಿಯಲ್ಲಿದ್ದಾರೆ. ಇದು "ಯುದ್ಧ ಅಪರಾಧ" ಎಂದು ಗಾಜಾ ಆರೋಪಿಸಿದೆ. ಅಲ್ಲದೆ ಇಸ್ರೇಲ್ ವೈಮಾನಿಕ ದಾಳಿಗಳಿಂದಾಗಿ ಆಸ್ಪತ್ರೆಗಳು ಕುಸಿಯುವ ಹಂತದಲ್ಲಿದ್ದು, ಗಾಜಾ ನಗರದ ಅಲ್-ಶಿಫಾ ಆಸ್ಪತ್ರೆಯಲ್ಲಿ 30,000 ಕ್ಕೂ ಹೆಚ್ಚು ಜನರು ಆಶ್ರಯ ಪಡೆದಿದ್ದಾರೆ. ಈ ಕಟ್ಟಡ ಕೂಡ ವೈಮಾನಿಕ ದಾಳಿಗೆ ತುತ್ತಾಗುವ ಭೀತಿಯಲ್ಲಿದೆ ಎಂದು ಹೇಳಿದೆ.

ತನಿಖೆ ನಡೆಸುತ್ತೇವೆ ಎಂದ ಇಸ್ರೇಲ್
ಇನ್ನು ಗಾಜಾದಲ್ಲಿನ ಆಸ್ಪತ್ರೆ ಮೇಲಿನ ವೈಮಾನಿಕ ದಾಳಿ ಕುರಿತು ಪ್ರತಿಕ್ರಿಯೆ ನೀಡಿರುವ ಇಸ್ರೇಲ್, ಯಾವುದೇ ರೀತಿಯ ನಿರಾಶ್ರಿತ ಶಿಬಿರಗಳು ಮತ್ತು ಆಸ್ಪತ್ರೆಗಳ ಮೇಲೆ ಇಸ್ರೇಲ್ ಸೇನೆ ದಾಳಿ ಮಾಡುತ್ತಿಲ್ಲ. ಆದರೆ ಗಾಜಾ ಆರೋಪ ನಿರಾಧಾರವಾಗಿದ್ದು, ಆದಾಗ್ಯೂ ಈ ಕುರಿತು ತನಿಖೆ ನಡೆಸುವುದಾಗಿ ಇಸ್ರೇಲ್ ವಕ್ತಾರರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com