ಗಾಜಾ ಮೇಲೆ ಭಾರೀ ವಾಯುದಾಳಿ: ಇಂಟರ್ ನೆಟ್, ಮೊಬೈಲ್ ಸೇವೆ ಸ್ಥಗಿತ; ಪತ್ರಕರ್ತರ ಸುರಕ್ಷತೆ ಖಾತರಿಪಡಿಸಲು ಸಾಧ್ಯವಿಲ್ಲ ಎಂದ ಇಸ್ರೇಲ್

ಹಮಾಸ್ ಉಗ್ರರ ಜಾಲವನ್ನು ಧ್ವಂಸಗೊಳಿಸುವ ಉದ್ದೇಶದಿಂದ ಗಾಜಾದಲ್ಲಿ ಇಸ್ರೇಲ್ ಸೇನೆ ವೈಮಾನಿಕ ದಾಳಿಯನ್ನು ಮುಂದುವರೆಸಿದ್ದು, ಇದರ ನಡುವಲ್ಲೇ ದಾಳಿ ಸಂದರ್ಭದಲ್ಲಿ ಪತ್ರಕರ್ತರ ಸುರಕ್ಷತೆ ಖಾತರಿಪಡಿಸಲು ಸಾಧ್ಯವಿಲ್ಲ ಎಂದು ಇಸ್ರೇಲ್ ಸೇನಾಪಡೆ ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಗಳಾದ ರಾಯಿಟರ್ಸ್ ಮತ್ತು ಏಜೆನ್ಸ್ ಫ್ರಾನ್ಸ್ ಪ್ರೆಸ್‌ಗೆ ತಿಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಜೆರುಸಲೇಂ: ಹಮಾಸ್ ಉಗ್ರರ ಜಾಲವನ್ನು ಧ್ವಂಸಗೊಳಿಸುವ ಉದ್ದೇಶದಿಂದ ಗಾಜಾದಲ್ಲಿ ಇಸ್ರೇಲ್ ಸೇನೆ ವೈಮಾನಿಕ ದಾಳಿಯನ್ನು ಮುಂದುವರೆಸಿದ್ದು, ಇದರ ನಡುವಲ್ಲೇ ದಾಳಿ ಸಂದರ್ಭದಲ್ಲಿ ಪತ್ರಕರ್ತರ ಸುರಕ್ಷತೆ ಖಾತರಿಪಡಿಸಲು ಸಾಧ್ಯವಿಲ್ಲ ಎಂದು ಇಸ್ರೇಲ್ ಸೇನಾಪಡೆ ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಗಳಾದ ರಾಯಿಟರ್ಸ್ ಮತ್ತು ಏಜೆನ್ಸ್ ಫ್ರಾನ್ಸ್ ಪ್ರೆಸ್‌ಗೆ ತಿಳಿಸಿದೆ.

ಪತ್ರಕರ್ತರ ಸುರಕ್ಷತೆಯನ್ನು ಖಾತರಿಪಡಿಸುವಂತೆ ಈ ಹಿಂದೆ ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಗಳಾದ ರಾಯಿಟರ್ಸ್ ಮತ್ತು ಏಜೆನ್ಸ್ ಫ್ರಾನ್ಸ್ ಪ್ರೆಸ್‌ ಇಸ್ರೇಲ್ ಸೇನಾಪಡೆಗೆ ಮನವಿ ಮಾಡಿಕೊಂಡಿತ್ತು.

ಈ ಮನವಿಗೆ ಪ್ರತಿಕ್ರಿಯೆ ನೀಡಿ ಸುದ್ದಿಸಂಸ್ಥೆಗಳಿಗೆ ಪತ್ರ ಬರೆದಿರುವ ಇಸ್ರೇಲ್ ರಕ್ಷಣಾ ಪಡೆ, ಐಡಿಎಫ್ ಗಾಜಾದಾದ್ಯಂತ ಹಮಾಸ್ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದೆ. ಹಮಾಸ್ ಉಗ್ರರು ಉದ್ದೇಶಪೂರ್ವಕವಾಗಿ ಪತ್ರಕರ್ತರು, ನಾಗರೀಕರಿರುವ ಸ್ಥಳದಲ್ಲಿ ನೆಲೆಯೂರುತ್ತಿದ್ದಾರೆ. ಉಗ್ರರು ಅಡಗಿ ಕುಳಿತಿರುವ ಸ್ಥಳಗಳಲ್ಲಿ ತೀವ್ರ ರೀತಿಯಲ್ಲಿ ದಾಳಿ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಕಟ್ಟಡಗಳಿಗೆ ಹಾನಿಯುಂಟಾಗಬಹುದು. ಹಮಾಸ್ ಉಗ್ರರು ಹಾಸಿರುವ ರಾಕೆಟ್ ಗಳು ಕೂಡ ಪತ್ರಕರ್ತರ ಸಾವಿಗೆ ಕಾರಣವಾಗಬಹುದು. ಹೀಗಾಗಿ ಪತ್ರಕರ್ತರ ಸುರಕ್ಷತೆ ಖಾತರಿಪಡಿಸಲು ಸಾಧ್ಯವಿಲ್ಲ ಎಂದು ಹೇಳಿದೆ ಎಂದು ತಿಳಿದುಬಂದಿದೆ.

ಈ ನಡುವೆ ಗುರುವಾರ ಇದೇ ಮೊದಲ ಬಾರಿಗೆ ಗಾಜಾ ಗಡಿಯೊಳಗೆ ನುಗ್ಗಿರುವ ಇಸ್ರೇಲ್ ಸೇನಾ ಪಡೆ, ಭೂ ದಾಳಿ ನಡೆಸಿದ್ದು, ಕಂಡು ಕೇಳರಿಯದ ರೀತಿ ವಾಯುದಾಳಿ ನಡೆಸಿವೆ. ದಾಳಿ ಹಿನ್ನೆಲೆಯಲ್ಲಿ ಗಾಜಾದಲ್ಲಿ ಇಂಟರ್ ನೆಟ್ ಹಾಗೂ ಮೊಬೈಲ್ ಸೇವೆ ಸ್ತಬ್ಧವಾಗಿದೆ.

ಯುದ್ಧ ವಿಮಾನಗಳು ಹಾಗೂ ಡ್ರೋಣ್ ಗಳ ಕಣ್ಗಾವಲಿನಲ್ಲಿ ಗಾಜಾ ಪಟ್ಟಿ ಪ್ರದೇಶಗೊಳಗೆ ನುಗ್ಗಿದ ಇಸ್ರೇಲ್ ಯುದ್ಧ ಟ್ಯಾಂಕರ್ ಗಳು ಗಾಜಾ ಹೊರವಲಯದಲ್ಲಿನ ಹಮಾಸ್ ಉಗ್ರರ ಹಲವು ಮೂಲಸೌಕರ್ಯ ಧ್ವಂಸಗೊಳಿಸಿ ಮರಳಿವೆ.

ಕಳೆದ 24 ಗಂಟೆಗೊಳಗೆ ನಾವು ಗಾಜಾದೊಳಗೆ ನುಗ್ಗಿ 10ಕ್ಕೂ ಹೆಚ್ಚು ಉಗ್ರರ ಅಡಗುತಾಣಗಳನ್ನು ಧ್ವಂಸಗೊಳಿಸಿದ್ದೇವೆ. ಯುದ್ಧ ಟ್ಯಾಂಕರ್ ಗಳನ್ನು ಹೊಡೆದುರುಳಿಸಲು ಬಳಸುವ ಕ್ಷಿಪಣಿ ಉಡ್ಡಯನ ನೆಲೆಗಳನ್ನು  ದಾಳಿ ವೇಳೆ ಧ್ವಂಸಗೊಳಿಸಲಾಗಿದೆ. ಇದರ ಜೊತೆಗೆ ನಮ್ಮ ಯುದ್ಧ ವಿಮಾನಗಳು ಗಾಜಾ ಪಟ್ಟಣದ ಹೊರವಲಯದ ಶಿಜೈಯಾಹ್ ಪಟ್ಟಣದ ಹಲವು ಗುರುಗಳ ಮೇಲೆ ಬಾಂಬ್ ದಾಳಿ ನಡೆಸಿವೆ. ದಾಳಿಯಲ್ಲಿ ನಮ್ಮ ಯಾವುದೇ ಯೋಧರ ಸಾವಿ ಸಂಭವಿಸಿಲ್ಲ ಎಂದು ಇಸ್ರೇಲ್ ಸೇನೆ ಹೇಳಿದೆ.

ಸಮರದಲ್ಲಿ ಪ್ಯಾಲೆಸ್ತೀನಿಯರ ಸಾವಿನ ಸಂಖ್ಯೆ 7000 ದಾಟಿದ್ದು, 1400 ಇಸ್ರೇಲೀಯರು ಹಮಾಸ್ ದಾಳಿಗೆ ಬಲಿಯಾಗಿದ್ದಾರೆಂದು ವರದಿಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com