
ಕರಾಚಿ: ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನ ಪ್ರಾಂತ್ಯದ ಮಸೀದಿಯೊಂದರ ಬಳಿ ಶುಕ್ರವಾರ ಪ್ರವಾದಿ ಮುಹಮ್ಮದ್ ಅವರ ಜನ್ಮದಿನದ ಅಂಗವಾಗಿ ರ‍್ಯಾಲಿ ನಡೆಸಲು ಜನರು ಸೇರಿದ್ದಾಗ ನಡೆದ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ ಕನಿಷ್ಠ 52 ಜನರು ಸಾವಿಗೀಡಾಗಿದ್ದಾರೆ ಮತ್ತು 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಮಸ್ತುಂಗ್ ಜಿಲ್ಲೆಯ ಮದೀನಾ ಮಸೀದಿ ಬಳಿ ಸ್ಫೋಟ ಸಂಭವಿಸಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.
ರ‍್ಯಾಲಿ ನಡೆಯುವ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಮಸ್ತುಂಗ್‌ನ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ನವಾಜ್ ಗಶ್ಕೋರಿ ಕೂಡ ಸ್ಫೋಟದಲ್ಲಿ ಸಾವಿಗೀಡಾಗಿದ್ದಾರೆ.
ಪ್ರವಾದಿ ಮುಹಮ್ಮದ್ ಅವರ ಜನ್ಮದಿನದ ಈದ್ ಮಿಲಾದುನ್ ನಬಿಯನ್ನು ಆಚರಿಸಲು ಜನರು ಒಂದೆಡೆ ಸೇರಿದ್ದಾಗ ಪ್ರಬಲ ಸ್ಫೋಟ ಸಂಭವಿಸಿದೆ.
ನಗರದ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಮೊಹಮ್ಮದ್ ಜಾವೇದ್ ಲೆಹ್ರಿ ಅವರು, ಆತ್ಮಾಹುತಿ ಬಾಂಬ್ ದಾಳಿಯಿಂದ ಸ್ಫೋಟ ಸಂಭವಿಸಿದ್ದು, ಡಿಎಸ್‌ಪಿ ಅವರ ಕಾರಿನ ಪಕ್ಕದಲ್ಲಿಯೇ ಆತ್ಮಾಹುತಿ ಬಾಂಬ್ ಅನ್ನು ಸ್ಫೋಟಿಸಿಕೊಳ್ಳಲಾಯಿತು. ಸದ್ಯ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿಯನ್ನು ವಿಧಿಸಲಾಗಿದ್ದು, ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಹೇಳಿದರು.
ಸ್ಫೋಟದಲ್ಲಿ ಕನಿಷ್ಠ 52 ಜನರು ಸಾವಿಗೀಡಾಗಿದ್ದಾರೆ ಮತ್ತು 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಶಾಹೀದ್ ನವಾಬ್ ಘೌಸ್ ಬಕ್ಷ್ ರೈಸಾನಿ ಸ್ಮಾರಕ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸಯೀದ್ ಮಿರ್ವಾನಿ ಹೇಳಿದ್ದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ.
ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ಬಲೂಚಿಸ್ತಾನದ ಮಧ್ಯಂತರ ಮಾಹಿತಿ ಸಚಿವ ಜಾನ್ ಅಚಕ್ಝೈ ಅವರು ರಕ್ಷಣಾ ತಂಡಗಳನ್ನು ಮಸ್ತುಂಗ್‌ಗೆ ಕಳುಹಿಸಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಕ್ವೆಟ್ಟಾಕ್ಕೆ ವರ್ಗಾಯಿಸಲಾಗುತ್ತಿದೆ ಮತ್ತು ಎಲ್ಲಾ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿಯನ್ನು ವಿಧಿಸಲಾಗಿದೆ ಎಂದು ಹೇಳಿದರು.
'ಶತ್ರುಗಳು ವಿದೇಶದ ಬೆಂಬಲದೊಂದಿಗೆ ಬಲೂಚಿಸ್ತಾನದಲ್ಲಿ ಧಾರ್ಮಿಕ ಸಹಿಷ್ಣುತೆ ಮತ್ತು ಶಾಂತಿಯನ್ನು ನಾಶಮಾಡಲು ಬಯಸಿದ್ದಾರೆ'. 'ಸ್ಫೋಟವು ಅಸಹನೀಯವಾಗಿದೆ'. ಸ್ಫೋಟಕ್ಕೆ ಕಾರಣರಾದವರನ್ನು ಬಂಧಿಸುವಂತೆ ನಿಯೋಜಿತ ಮುಖ್ಯಮಂತ್ರಿ ಅಲಿ ಮರ್ದಾನ್ ಡೊಮ್ಕಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಅವರು ಹೇಳಿದರು.
ಈಮಧ್ಯೆ, ಹಂಗಾಮಿ ಆಂತರಿಕ ಸಚಿವ ಸರ್ಫ್ರಾಜ್ ಅಹ್ಮದ್ ಬುಗ್ತಿ ಸ್ಫೋಟವನ್ನು ತೀವ್ರವಾಗಿ ಖಂಡಿಸಿದ್ದಾರೆ.
Advertisement