ಬದುಕು ಕಸಿದ ಭೂಕಂಪನ: ಟರ್ಕಿ, ಸಿರಿಯಾದಲ್ಲಿ ಸಾವಿನ ಸಂಖ್ಯೆ 28 ಸಾವಿರಕ್ಕೆ ಏರಿಕೆ, ಲಕ್ಷಾಂತರ ಮಂದಿ ನಿರಾಶ್ರಿತ!

ಕಳೆದ 100 ವರ್ಷಗಳಲ್ಲೇ ಅತ್ಯಂತ ಭೀಕರವಾದ ಭೂಕಂಪಕ್ಕೆ ತುತ್ತಾಗಿರುವ ಟರ್ಕಿ ಹಾಗೂ ಸಿರಿಯಾ ರಾಷ್ಟ್ರಗಳಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಭಾನುವಾರ ಒಟ್ಟು ಸಾವಿನ ಸಂಖ್ಯೆ 28 ಸಾವಿರಕ್ಕೆ ಏರಿಕೆಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಇಸ್ತಾಂಬುಲ್: ಕಳೆದ 100 ವರ್ಷಗಳಲ್ಲೇ ಅತ್ಯಂತ ಭೀಕರವಾದ ಭೂಕಂಪಕ್ಕೆ ತುತ್ತಾಗಿರುವ ಟರ್ಕಿ ಹಾಗೂ ಸಿರಿಯಾ ರಾಷ್ಟ್ರಗಳಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಭಾನುವಾರ ಒಟ್ಟು ಸಾವಿನ ಸಂಖ್ಯೆ 28 ಸಾವಿರಕ್ಕೆ ಏರಿಕೆಯಾಗಿದೆ.

ಈ ಪೈಕಿ ಟರ್ಕಿಯಲ್ಲಿ 24,617 ಮಂದಿ ಸಾವನ್ನಪ್ಪಿದ್ದರೆ, ಸಿರಿಯಾದಲ್ಲಿ 3,575 ಮಂದಿ ಸಾವನ್ನಪ್ಪಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.

ಟರ್ಕಿಯಲ್ಲಿ 80 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಉಭಯ ರಾಷ್ಟ್ರಗಳಲ್ಲಿ ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ.

ಟರ್ಕಿಯಲ್ಲಿ ಸುಮಾರು 12 ಸಾವಿರಕ್ಕೂ ಹೆಚ್ಚು ಕಟ್ಟಡಗಳು ಕುಸಿದಿರಬಹುದು ಎಂದು ಅಂದಾಜಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಸಿರಿಯಾದಲ್ಲಿ ಕಾರ್ಯಾಚರಣೆಯನ್ನು ಅಂತ್ಯಗೊಳಿಸಲಾಗಿದೆ ಎಂದು ಅಲ್ಲಿನ ರಕ್ಷಣಾ ಇಲಾಖೆ ಮಾಹಿತಿ ನೀಡಿದೆ.

ಉಭಯ ರಾಷ್ಟ್ರಗಳಲ್ಲಿ ಪರಿಸ್ಥಿತಿ ಕೈ ಮೀರಿದ್ದು, ನಿರಾಶ್ರಿತರ ನಿರ್ವಣೆ ಸವಾಲಾಗಿದೆ ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ. ಟರ್ಕಿಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಸಹಾಯ ಹಸ್ತ ಚಾಚಿವೆ.

ಭೂಕಂಪದ ಪರಿಣಾಮ ಈಗಾಗಲೇ ಆಂತರಿಕ ಸಂಘರ್ಷದಿಂದ ನಲುಗಿರುವ ಸಿರಿಯಾದಲ್ಲಿ ಸುಮಾರು 53 ಲಕ್ಷ ಜನರು ನಿರಾಶ್ರಿತರಾಗಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ವಿಶ್ವಸಂಸ್ಥೆಯಲ್ಲಿನ ನಿರಾಶ್ರಿತರ ಹೈ ಕಮಿಷನ್ ನ ಸಿರಿಯಾದ ಪ್ರತಿನಿಧಿ ಸಿವಾಂಕಾ ಧನಪಲ, ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈಗಾಗಲೇ ಭಾರೀ ಸ್ಥಳಾಂತರ ಪ್ರಕ್ರಿಯೆಗಳಿಂದ ತೊಂದರೆಗೆ ಸಿಲುಕಿರುವ ಸಿರಿಯಾದಲ್ಲಿ 53 ಲಕ್ಷದಷ್ಟು ಜನ ನಿರಾಶ್ರಿತರಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com