ಅಮೆರಿಕ ಅಧ್ಯಕ್ಷೀಯ ಚುನಾವಣೆ 2024: ನಿಕ್ಕಿ ಹ್ಯಾಲೆ ಸ್ಪರ್ಧೆ, ಭಾರತ ಮೂಲದ ವಿವೇಕ್ ರಾಮಸ್ವಾಮಿ ಕೂಡ ಕಣದಲ್ಲಿ?

ಅಮೆರಿಕ ಅಧ್ಯಕ್ಷೀಯ ಚುನಾವಣೆ 2024ರಲ್ಲಿ ನಾನೂ ಕೂಡ ಸ್ಪರ್ಧಿ ಎಂದು ಸೌತ್ ಕರೊಲಿನಾದ ಮಾಜಿ ಗವರ್ನರ್, ವಿಶ್ವಸಂಸ್ಥೆಯ ಮಾಜಿ ರಾಯಭಾರಿ ನಿಕ್ಕಿ ಹ್ಯಾಲೆ ಹೇಳಿದ್ದಾರೆ.
ನಿಕ್ಕಿ ಹ್ಯಾಲೆ ಮತ್ತು ವಿವೇಕ್ ರಾಮಸ್ವಾಮಿ
ನಿಕ್ಕಿ ಹ್ಯಾಲೆ ಮತ್ತು ವಿವೇಕ್ ರಾಮಸ್ವಾಮಿ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆ 2024ರಲ್ಲಿ ನಾನೂ ಕೂಡ ಸ್ಪರ್ಧಿ ಎಂದು ಸೌತ್ ಕರೊಲಿನಾದ ಮಾಜಿ ಗವರ್ನರ್, ವಿಶ್ವಸಂಸ್ಥೆಯ ಮಾಜಿ ರಾಯಭಾರಿ ನಿಕ್ಕಿ ಹ್ಯಾಲೆ ಹೇಳಿದ್ದಾರೆ.

51 ವರ್ಷದ ನಿಕ್ಕಿ ಹ್ಯಾಲೆ ಮಂಗಳವಾರ ಈ ಕುರಿತು ಅಧಿಕೃತ ಘೋಷಣೆ ಮಾಡಿದ್ದು, ಅಮೆರಿಕದ ಅಧ್ಯಕ್ಷೀಯ ಸ್ಥಾನದ ಚುನಾವಣೆಗೆ ತಾವು ಸ್ಪರ್ಧಿಸುವುದಾಗಿ ಹೇಳಿದ್ದಾರೆ.  ಈ ಮೂಲಕ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿಯಾಗಿ 2024ರಲ್ಲಿ ಮತ್ತೊಮ್ಮೆ ಸ್ಪರ್ಧೆ ಮಾಡಲು ಬಯಸಿರುವ 76 ವರ್ಷದ ಡೊನಾಲ್ಡ್ ಟ್ರಂಪ್ ಅವರಿಗೆ ನಿಕ್ಕಿ ಹ್ಯಾಲೆ ಮೊದಲ ‌ಸ್ಪರ್ಧಿಯಾಗಿದ್ದಾರೆ.  

ವಿಡಿಯೊ ಸಂದೇಶದಲ್ಲಿ ತಮ್ಮ ಸ್ಪರ್ಧೆಯನ್ನು ಪ್ರಕಟಿಸಿದ ಅವರು, ದೇಶದ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಹೊಸ ಪೀಳಿಗೆಯ ನಾಯಕತ್ವ ಅಗತ್ಯವಿದೆ. ಹೀಗಾಗಿ ತಾವು ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ.

ಟ್ರಂಪ್ ನೇತೃತ್ವದ ಸಂಪುಟದಲ್ಲಿ ಅಧಿಕಾರಿಯಾಗಿದ್ದ ಅವರು, ತಾವು ಟ್ರಂಪ್‌ ಅವರಿಗೆ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಯಾಗುವುದಿಲ್ಲ ಎಂದು ಹಿಂದೆ ಹೇಳಿದ್ದರು.

ಭಾರತ ಮೂಲದ ವಿವೇಕ್ ರಾಮಸ್ವಾಮಿ ಕೂಡ ಕಣದಲ್ಲಿ?
ಇನ್ನು ನಿಕ್ಕಿ ಹ್ಯಾಲೆ ಮಾತ್ರವಲ್ಲದೇ ಭಾರತ ಮೂಲದ ಉದ್ಯಮಿ ವಿವೇಕ್ ರಾಮಸ್ವಾಮಿ ಕೂಡ ಮುಂದಿನ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ. ಭಾರತ ಮೂಲದ ಅಮೆರಿಕದ ನಿವಾಸಿ, ಉದ್ಯಮಿ ವಿವೇಕ್‌ ರಾಮಸ್ವಾಮಿ 2024ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಚಿಂತನೆ ನಡೆಸಿದ್ದು ಈ ಬಗ್ಗೆ ಶೀಘ್ರವೇ ನಿಲುವು ಪ್ರಕಟಿಸುವ ಸಾಧ್ಯತೆ ಇದೆ. 37 ವರ್ಷದ ವಿವೇಕ್‌ ರಾಮಸ್ವಾಮಿ ಅವರು ಕೋಟ್ಯಧಿಪತಿ. ನ್ಯೂಯಾರ್ಕ್‌ ನಿಯತಕಾಲಿಕವು ಇವರನ್ನು ‘ಸಿಇಒ ಆಪ್‌ ಆ್ಯಂಟಿ ವೋಕ್‌ ಐಎನ್‌ಸಿ’ ಎಂದು ಬಣ್ಣಿಸಿತ್ತು. ಪ್ರಸ್ತುತ ಇವರು ಅಮೆರಿಕದ ಅಯೋವಾ ರಾಜ್ಯದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಸ್ಪರ್ಧೆಗೆ ಪೂರ್ವಭಾವಿಯಾಗಿ ವಸ್ತುಸ್ಥಿತಿ ಅರಿಯುವ ಯತ್ನದಲ್ಲಿದ್ದಾರೆ.

ಅವರು ಈಗ ಅಧ್ಯಕ್ಷೀಯ ಸ್ಥಾನದ ಚುನಾವಣೆ ಕುರಿತು ಗಮನಹರಿಸಿದ್ದಾರೆ. ಸದ್ಯ ಉದ್ಯಮವನ್ನು ಮುನ್ನಡೆಸುವ ಅಗತ್ಯವನ್ನು ಅವರು ಕಾಣುತ್ತಿಲ್ಲ. ಬದಲಿಗೆ, ಅಮೆರಿಕನ್ನರ ಉತ್ಸಾಹ, ಸ್ಥಳೀಯ ಸಂಸ್ಕೃತಿ ಮರುಸ್ಥಾಪನೆಗೆ ಒತ್ತು ನೀಡುವ ಅಭಿಯಾನವನ್ನು ನಡೆಸಲು ಉತ್ಸುಕರಾಗಿದ್ದಾರೆ ಎಂದು ವರದಿ ತಿಳಿಸಿದೆ. ಭಾರತದಿಂದ ವಲಸೆ ಹೋಗಿದ್ದ ದಂಪತಿ ಪುತ್ರರಾದ ವಿವೇಕ್ ಸಿನ್ಸಿನಾಟಿಯಲ್ಲಿ ಜನಿಸಿದ್ದು, ಹಾರ್ವರ್ಡ್ ಹಾಗೂ ಯಾಲೆ ಯೂನಿವರ್ಸಿಟಿಯಲ್ಲಿ ಶಿಕ್ಷಣ ಪೂರೈಸಿದ್ದಾರೆ. ಪ್ರಸ್ತುತ ಅವರು, 414 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಗೆ ಹಕ್ಕುದಾರರಾಗಿದ್ದಾರೆ. ಆರಂಭದಲ್ಲಿ ಬಯೊಟೆಕ್‌ ಕ್ಷೇತ್ರದಲ್ಲಿ ತೊಡಗಿದ್ದು, ಔಷಧ ಉತ್ಪಾದನೆಗೆ ಆದ್ಯತೆ ನೀಡಿದ್ದರು.

ಇದೀಗ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com