16.5 ಲಕ್ಷ ಕೋಟಿ ರೂ ಮೌಲ್ಯದ ಆಸ್ತಿ ಕಳೆದುಕೊಂಡ ಎಲಾನ್‌ ಮಸ್ಕ್‌, ನಷ್ಟದಲ್ಲೂ ದಾಖಲೆ!

ಒಂದು ವರ್ಷದ ಹಿಂದಷ್ಟೇ ಆಸ್ತಿ ಗಳಿಕೆಯಲ್ಲಿ ಅಮೆಜಾನ್‌ ಮುಖ್ಯಸ್ಥ ಜೆಫ್‌ ಬಿಜೋಸ್‌ ರನ್ನು ಹಿಂದಿಕ್ಕಿ ದಾಖಲೆ ಬರೆದಿದ್ದ ಟೆಸ್ಲಾ-ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ಇದೀಗ ಇದಕ್ಕೆ ತದ್ವಿರುದ್ಧ ದಾಖಲೆಯೊಂದನ್ನು ನಿರ್ಮಿಸಿದ್ದು, ವರ್ಷಾರಂಭದಲ್ಲೇ ಬರೊಬ್ಬರಿ 16.5 ಲಕ್ಷ ಕೋಟಿ ರೂ ಮೌಲ್ಯದ ಆಸ್ತಿ ಕಳೆದುಕೊಂಡಿದ್ದಾರೆ.
ಎಲಾನ್ ಮಸ್ಕ್
ಎಲಾನ್ ಮಸ್ಕ್

ವಾಷಿಂಗ್ಟನ್: ಒಂದು ವರ್ಷದ ಹಿಂದಷ್ಟೇ ಆಸ್ತಿ ಗಳಿಕೆಯಲ್ಲಿ ಅಮೆಜಾನ್‌ ಮುಖ್ಯಸ್ಥ ಜೆಫ್‌ ಬಿಜೋಸ್‌ ರನ್ನು ಹಿಂದಿಕ್ಕಿ ದಾಖಲೆ ಬರೆದಿದ್ದ ಟೆಸ್ಲಾ-ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ಇದೀಗ ಇದಕ್ಕೆ ತದ್ವಿರುದ್ಧ ದಾಖಲೆಯೊಂದನ್ನು ನಿರ್ಮಿಸಿದ್ದು, ವರ್ಷಾರಂಭದಲ್ಲೇ ಬರೊಬ್ಬರಿ 16.5 ಲಕ್ಷ ಕೋಟಿ ರೂ ಮೌಲ್ಯದ ಆಸ್ತಿ ಕಳೆದುಕೊಂಡಿದ್ದಾರೆ.

ಹೌದು.. ಟೆಸ್ಲಾ ಮುಖ್ಯಸ್ಥ ಎಲಾನ್‌ ಮಸ್ಕ್‌ 2021ರ ಜನವರಿಯಲ್ಲಿ 200 ಬಿಲಿಯನ್‌ ಡಾಲರ್‌ಗಿಂತ ಹೆಚ್ಚಿನ ಮೊತ್ತದ ಆಸ್ತಿ ಸಂಪಾದಿಸುವುದರೊಂದಿಗೆ ಮಾನವ ಇತಿಹಾಸದಲ್ಲೇ ಈ ಮಟ್ಟದ ಆಸ್ತಿ ಸಂಪಾದಿಸಿದ ಕೇವಲ ಎರಡನೇ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅವರಿಗೂ ಕೆಲವೇ ತಿಂಗಳು ಮೊದಲು ಅಮೆಜಾನ್‌ನ ಜೆಫ್‌ ಬಿಜೋಸ್‌ ಈ ದಾಖಲೆ ಬರೆದಿದ್ದರು. ಇದೀಗ ಇದೇ ಎಲಾನ್‌ ಮಸ್ಕ್‌ ತಮ್ಮದೇ ಆದ ಹೊಸ ದಾಖಲೆಯನ್ನು ಬರೆದಿದ್ದಾರೆ. ತಮ್ಮ ನಿವ್ವಳ ಮೌಲ್ಯದಿಂದ 200 ಬಿಲಿಯನ್‌ ಡಾಲರ್‌ ಆಸ್ತಿ ಕಳೆದುಕೊಂಡ ಇತಿಹಾಸದ ಏಕೈಕ ವ್ಯಕ್ತಿ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ.

ಇತ್ತೀಚಿನ ವಾರಗಳಲ್ಲಿ ಟೆಸ್ಲಾ ಷೇರುಗಳು ತೀವ್ರ ಕುಸಿತ ಕಂಡ ಹಿನ್ನೆಲೆಯಲ್ಲಿ ಅವರ ಸಂಪತ್ತು 137 ಬಿಲಿಯನ್‌ ಡಾಲರ್‌ಗೆ ಕುಸಿತ ಕಂಡಿದೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, 51 ವರ್ಷದ ಮಸ್ಕ್ ಅವರ ಸಂಪತ್ತು ಕಳೆದವಾರ ಶೇ. 11ರಷ್ಟು ಇಳಿಕೆಯಾಗಿತ್ತು. ನವೆಂಬರ್ 4, 2021 ರಂದು ಅವರ ಸಂಪತ್ತು 340 ಬಿಲಿಯನ್‌ ಡಾಲರ್‌ಗೆ ಏರಿಕೆ ಕಂಡಿತ್ತು. ಅಷ್ಟೇ ಅಲ್ಲದೆ ಐಷಾರಾಮಿ ಸರಕುಗಳನ್ನು ಮಾರಾಟ ಮಾಡುವ ಎಲ್‌ವಿಎಂಎಚ್‌ನ ಫ್ರೆಂಚ್ ಉದ್ಯಮಿ ಬರ್ನಾರ್ಡ್ ಅರ್ನಾಲ್ಟ್ ಅವರು ಈ ತಿಂಗಳು ಆರಂಭದಲ್ಲಿ ಮಸ್ಕ್‌ ಅವರನ್ನು ಹಿಂದಿಕ್ಕುವವರೆಗೂ ಅವರು ನಂ.1 ಸ್ಥಾನದಲ್ಲಿಯೇ ಮುಂದುವರಿದಿದ್ದರು. ಇದೀಗ ಮತ್ತೆ ಮಸ್ಕ್ 200 ಬಿಲಿಯನ್ ಡಾಲರ್ ಸಂಪತ್ತು ಕಳೆದುಕೊಂಡಿದ್ದಾರೆ.

ಟೆಸ್ಲಾ ಷೇರುಗಳು ತೀವ್ರ ಕುಸಿತ ಕಂಡಿವೆ. 2022ರಲ್ಲಿ ಕಂಪನಿ ಷೇರುಗಳು ಶೇ. 65ರಷ್ಟು ಇಳಿಕೆಯಾಗಿವೆ. ಅಷ್ಟೇ ಅಲ್ಲದೆ ಮಸ್ಕ್ ತಮ್ಮ ಟ್ವಿಟರ್ ಖರೀದಿಯನ್ನು ಸರಿದೂಗಿಸಲು ಈ ವರ್ಷ ದೊಡ್ಡ ಪ್ರಮಾಣದಲ್ಲಿ ಟೆಸ್ಲಾ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಸದ್ಯ ಅವರ ಆಸ್ತಿಯಲ್ಲೂ ಟೆಸ್ಲಾದ ಪಾಲು ಬೃಹತ್‌ ಪ್ರಮಾಣದಲ್ಲಿ ಕಡಿಮೆಯಾಗಿದೆ. ಬ್ಲೂಮ್‌ಬರ್ಗ್‌ನ ಸಂಪತ್ತಿನ ಸೂಚ್ಯಂಕದ ಪ್ರಕಾರ ಅವರ ಆಸ್ತಿಯಲ್ಲಿ ಸ್ಪೇಸ್‌ ಎಕ್ಸ್‌ನ ಪಾಲು 44.8 ಬಿಲಿಯನ್‌ ಡಾಲರ್‌ ಇದ್ದರೆ, ಟೆಸ್ಲಾದಲ್ಲಿರುವ ಅವರ ಷೇರಿನ ಮೌಲ್ಯ 44 ಬಿಲಿಯನ್‌ ಡಾಲರ್‌ಗಳಷ್ಟಿದೆ. ಇತ್ತೀಚಿನ ಫೈಲಿಂಗ್ ಪ್ರಕಾರ ಎಲಾನ್‌ ಮಸ್ಕ್ ಈಗ ಸ್ಪೇಸ್‌ ಎಕ್ಸ್‌ನಲ್ಲಿ ಶೇ. 42.2ರಷ್ಟು ಷೇರನ್ನು ಹೊಂದಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com