ಟ್ವಿಟರ್ ಸಿಬ್ಬಂದಿಗಳಿಗೆ ಮಸ್ಕ್ ಮತ್ತೊಂದು ಶಾಕ್; ಸ್ವಚ್ಛತಾ ಸಿಬ್ಬಂದಿ ವಜಾ; ಕಚೇರಿಗೆ ತಮ್ಮ ದುಡ್ಡಲ್ಲೇ ಟಾಯ್ಲೆಟ್ ಟಿಶ್ಯೂ ತರುತ್ತಿರುವ ಉದ್ಯೋಗಿಗಳು!

ಟ್ವಿಟರ್ (Twitter) ಸಂಸ್ಥೆಯನ್ನು ಸ್ವಾಧೀನ ಪಡಿಸಿಕೊಂಡ ಬಳಿಕ ಅಲ್ಲಿನ ಸಿಬ್ಬಂದಿಗಳಿಗೆ ಶಾಕ್ ಮೇಲೆ ಶಾಕ್ ನೀಡುತ್ತಿರುವ ಎಲಾನ್ ಮಸ್ಕ್ (Elon Musk)  ಅಡುಗೆ ಮನೆ ರದ್ದುಗೊಳಿಸಿದ ಬೆನ್ನಲ್ಲೇ ಇದೀಗ ಕಚೇರಿಯ ಸ್ವಚ್ಛತಾ ಸಿಬ್ಬಂದಿಗಳನ್ನು ವಜಾ ಮಾಡಿ ಮತ್ತೊಂದು ಶಾಕ್ ನೀಡಿದ್ದಾರೆ.
ಎಲೋನ್ ಮಸ್ಕ್
ಎಲೋನ್ ಮಸ್ಕ್

ವಾಷಿಂಗ್ಟನ್: ಟ್ವಿಟರ್ (Twitter) ಸಂಸ್ಥೆಯನ್ನು ಸ್ವಾಧೀನ ಪಡಿಸಿಕೊಂಡ ಬಳಿಕ ಅಲ್ಲಿನ ಸಿಬ್ಬಂದಿಗಳಿಗೆ ಶಾಕ್ ಮೇಲೆ ಶಾಕ್ ನೀಡುತ್ತಿರುವ ಎಲಾನ್ ಮಸ್ಕ್ (Elon Musk)  ಅಡುಗೆ ಮನೆ ರದ್ದುಗೊಳಿಸಿದ ಬೆನ್ನಲ್ಲೇ ಇದೀಗ ಕಚೇರಿಯ ಸ್ವಚ್ಛತಾ ಸಿಬ್ಬಂದಿಗಳನ್ನು ವಜಾ ಮಾಡಿ ಮತ್ತೊಂದು ಶಾಕ್ ನೀಡಿದ್ದಾರೆ.

ವೆಚ್ಚಕಡಿತ ನೀತಿಯನ್ನು ಈಗ ಮಸ್ಕ್ ತಮ್ಮ ಕಚೇರಿಯಲ್ಲಿ (Office) ಅಳವಡಿಸಿದ್ದು, ಇದೀಗ ಈ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಸಂಸ್ಥೆಯು ಸ್ವಚ್ಛತಾ ನಿರ್ವಹಣಾ ಸಿಬ್ಬಂದಿಯನ್ನು ಉದ್ಯೋಗದಿಂದ (Employees) ತೆಗೆದುಹಾಕಿದ್ದು ಈ ಹಿನ್ನೆಲೆಯಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ (San Francisco) ಉಳಿದ ಉದ್ಯೋಗಿಗಳು ತಮ್ಮದೇ ವೆಚ್ಚದಲ್ಲಿ ಟಾಯ್ಲೆಟ್ ಪೇಪರ್‌ಗಳನ್ನು ತರುವ ಪರಿಸ್ಥಿತಿ ಎದುರಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ನಿರ್ವಹಣಾ ಕೆಲಸಗಾರರು ಹೆಚ್ಚಿನ ಪಾವತಿಗೆ ಆಗ್ರಹಿಸಿ ಧರಣಿ ಮಾಡಿದ್ದರಿಂದ ಸಂಸ್ಥೆಯು ಅವರನ್ನು ಕೈಬಿಟ್ಟಿದೆ. ಸಂಸ್ಥೆಯಲ್ಲಿ ನಿರ್ವಹಣಾಕಾರರು, ಸ್ವಚ್ಛತಾ ಕೆಲಸಗಾರರು ಇಲ್ಲದೇ ಇರುವುದರಿಂದ ಕಚೇರಿಯು ಕೊಳಕಾಗಿದೆ ಹಾಗೂ ಅಸ್ತವ್ಯಸ್ತಗೊಂಡಿದೆ ಒಂದು ರೀತಿಯಲ್ಲಿ ಟ್ವಿಟರ್ ಕಚೇರಿಯೇ ಕೊಳಕಾಗಿದೆ ಎಂದು ಸುದ್ದಿಮೂಲಗಳಿಂದ ತಿಳಿದು ಬಂದಿದೆ.

ವೆಚ್ಚಕಡಿತದ ನೀತಿಯ ಭಾಗವಾಗಿ ಕ್ರಮ
ಸಂಸ್ಥೆಯು ತೀವ್ರ ನಷ್ಟ ಅನುಭವಿಸುತ್ತಿದ್ದು, ಈ ಹಿನ್ನೆಲೆ ಎಲಾನ್ ಮಸ್ಕ್ ಒಂದೊಂದೇ ಹಂತಗಳನ್ನು ಜಾರಿಗೆ ತರುತ್ತಿದ್ದಾರೆ. ದರ ಕಡಿತದ ಹೆಸರಿನಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಿದ್ದು, ಹೆಚ್ಚುವರಿ ಕೆಲಸ ಮಾಡುವಂತೆ ಉದ್ಯೋಗಿಗಳನ್ನು ನಿರ್ಬಂಧಿಸಿದ್ದು, ಕಚೇರಿಯಲ್ಲೇ ನಿದ್ರಿಸಲು ಉದ್ಯೋಗಿಗಳಿಗೆ ಸೌಲಭ್ಯ ಕಲ್ಪಿಸಲಾಗಿದೆ. 

ಟಾಯ್ಲೆಟ್ ಟಿಶ್ಯೂ ತರುತ್ತಿರುವ ಉದ್ಯೋಗಿಗಳು!
ಸ್ವಚ್ಛತಾ ಕೆಲಸಗಾರರು ಸಂಸ್ಥೆಯಲ್ಲಿ ಇಲ್ಲದೇ ಇರುವುದರಿಂದ ಮತ್ತು ಸ್ವಚ್ಛತೆಗಳನ್ನು ನಿರ್ವಹಿಸಲು ಸಿಬ್ಬಂದಿ ಕೊರತೆ ಇರುವುದರಿಂದ ಕೆಲವು ಸಿಬ್ಬಂದಿ ತಮ್ಮದೇ ಟಾಯ್ಲೆಟ್ ಟಿಶ್ಯೂಗಳನ್ನು ಕಚೇರಿಗೆ ತರುತ್ತಿದ್ದಾರೆ ಎನ್ನಲಾಗಿದೆ.

ಮಾಲೀಕನ ಮೇಲೆಯೇ ದೂರು ದಾಖಲಿಸಿದ ಸಿಬ್ಬಂದಿ
ಹೀಗೆ ಟ್ವಿಟರ್‌ನ ಸ್ವಾಧೀನದ ನಂತರ ಎಲೋನ್ ಹಲವಾರು ಟೀಕೆಗಳಿಗೆ ಗುರಿಯಾಗಿದ್ದಾರೆ. ಜೊತೆಗೆ ಟ್ವಿಟರ್‌ನಿಂದ ವಜಾಗೊಂಡಿರುವ ಉದ್ಯೋಗಿಗಳು ತಮಗೆ ಪರಿಹಾರವನ್ನು ನೀಡಿಲ್ಲವೆಂದು ಎಲೋನ್ ಮೇಲೆ ಕೇಸ್ ಕೂಡ ದಾಖಲಿಸಿದ್ದಾರೆ.

ಸ್ಯಾಕ್ರಮೆಂಟೊ ಕಚೇರಿ ಬಂದ್, ಮನೆಯಿಂದಲೇ ಕೆಲಸ ಮಾಡುತ್ತಿರುವ ಸಿಬ್ಬಂದಿ
ಇನ್ನು ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊದಲ್ಲಿರುವ ಟ್ವಿಟರ್‌ನ ಡೇಟಾ ಕೇಂದ್ರಗಳಲ್ಲಿ ಒಂದನ್ನು ಮುಚ್ಚುವ ನಿರ್ಧಾರವನ್ನು ಎಲೋನ್ ಮಸ್ಕ್ ತಾಳಿದ್ದು, ದರ ಕಡಿತದ ಕ್ರಮವಾಗಿ ಉಲ್ಲೇಖಗೊಂಡಿದೆ. ಹೀಗೆ ಮಾಡುವುದರಿಂದ ಟ್ವಿಟರ್‌ನ ಕಾರ್ಯಕ್ಷಮತೆಯ ಮೇಲೆ ಪರಿಣಾಮವುಂಟಾಗುತ್ತದೆ ಎಂಬುದಾಗಿ ಉದ್ಯೋಗಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಈ ಡೇಟಾ ಸೆಂಟರ್ ಸಾಮಾಜಿಕ ತಾಣದ ನೆಟ್‌ವರ್ಕ್ ಅನ್ನು ಚಾಲನೆಯಲ್ಲಿರಿಸಿರುವ ಮೂರು ನಿರ್ಣಾಯಕ ಸರ್ವರ್ ಸೌಲಭ್ಯಗಳಲ್ಲಿ ಒಂದಾಗಿದೆ. ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿರುವಂತೆ ಸರ್ವರ್‌ಗಳನ್ನು ಕಳೆದುಕೊಳ್ಳುವುದರಿಂದ ಹಲವಾರು ಸಮಸ್ಯೆಗಳನ್ನು ಸಂಸ್ಥೆಗೆ ಉಂಟಾಗಬಹುದು ಎಂದು ತಿಳಿಸಿದೆ. ಆದರೆ ಇಲ್ಲಿ ಹಣ ಉಳಿಸುವುದು ಹೆಚ್ಚು ಮುಖ್ಯವಾಗಿದೆ ಎಂಬುದು ಮಸ್ಕ್ ಯೋಜನೆಯಾಗಿದೆ ಎಂದು ತಿಳಿದು ಬಂದಿದೆ.

ಬಾಡಿಗೆ ಹಣ ಉಳಿತಾಯ
ಸಂಸ್ಥೆಯು ಸಿಯಾಟಲ್ ಕಟ್ಟದಲ್ಲಿ ಬಾಡಿಗೆ ಪಾವತಿಸಿರುವುದನ್ನು ಸಂಪೂರ್ಣವಾಗಿ ನಿಲ್ಲಿಸಿರುವುದರಿಂದ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ತಿಳಿಸಿದೆ. ಸುದ್ದಿ ಮಾಧ್ಯಮಗಳ ಪ್ರಕಾರ ಟ್ವಿಟರ್ ಸದ್ಯಕ್ಕೆ ನ್ಯೂಯಾರ್ಕ್ ನಗರ ಮತ್ತು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಮಾತ್ರ ಕಚೇರಿಗಳನ್ನು ಹೊಂದಿದೆ ಎಂದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com