ಇಸ್ಲಮಾಬಾದ್: ಪೆಟ್ರೋಲ್ ಬೆಲೆಯಲ್ಲಿ ಭಾರಿ ಏರಿಕೆಯಾಗುವ ವದಂತಿಗಳ ಪರಿಣಾಮವಾಗಿ ಪಾಕಿಸ್ತಾನದ ಹಲವು ಭಾಗಗಳಲ್ಲಿ ಪೆಟ್ರೋಲ್ ಪಂಪ್‌ಗಳಲ್ಲಿ ಉದ್ದನೆಯ ಸರತಿ ಸಾಲುಗಳು ಕಂಡುಬಂದವು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವರದಿಗಳ ಪ್ರಕಾರ, ಫೆಬ್ರುವರಿ 1 ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು 45 ರಿಂದ 80 ರೂಪಾಯಿಗಳವರೆಗೆ ಹೆಚ್ಚಾಗುವ ನಿರೀಕ್ಷೆಯಿದೆ ಎನ್ನಲಾಗಿತ್ತು.
ಡಾಲರ್ ಮೌಲ್ಯ ಮತ್ತು ಅಂತರರಾಷ್ಟ್ರೀಯ ಪೆಟ್ರೋಲಿಯಂ ದರಗಳಲ್ಲಿನ ಏರಿಕೆಯಿಂದಾಗಿ ತೈಲ ಬೆಲೆಗಳು ಹೆಚ್ಚಾಗುತ್ತವೆ ಎಂಬ ವರದಿಯನ್ನು ನಾವು ಸಾಮಾಜಿಕ ಮಾಧ್ಯಮದಲ್ಲಿ ನೋಡಿದ್ದೇವೆ ಎಂದು ಪೆಟ್ರೋಲ್ ಪಂಪ್‌ನಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದ ಹಾಸನ್ ಹೇಳಿದ್ದಾಗಿ ಡಾನ್ ವರದಿ ಮಾಡಿದೆ.
ಮಾಧ್ಯಮ ವರದಿಗಳ ಪ್ರಕಾರ, ಇತರ ಪ್ರದೇಶಗಳಲ್ಲಿ ಇದೇ ರೀತಿಯ ಪರಿಸ್ಥಿತಿ ಕಂಡುಬಂದಿದೆ. ಗುಜ್ರಾನ್‌ವಾಲಾದಲ್ಲಿ ಶೇ 20 ರಷ್ಟು ಪಂಪ್‌ಗಳಲ್ಲಿ ಮಾತ್ರ ಪೆಟ್ರೋಲ್ ಲಭ್ಯವಿತ್ತು, ಆದರೆ ರಹೀಮ್ ಯಾರ್ ಖಾನ್, ಬಹವಾಲ್‌ಪುರ್, ಸಿಯಾಲ್‌ಕೋಟ್ ಮತ್ತು ಫೈಸಲಾಬಾದ್‌ನಲ್ಲಿಯೂ ತೀವ್ರ ಕೊರತೆ ಉಂಟಾಗಿರುವುದಾಗಿ ವರದಿಯಾಗಿದೆ ಎಂದು ಜಿಯೋ ನ್ಯೂಸ್ ಹೇಳಿದೆ.
ಆದಾಗ್ಯೂ, ಈ ವದಂತಿಗಳು ಆಧಾರರಹಿತವಾಗಿವೆ ಮತ್ತು ಅವುಗಳನ್ನು ಗಂಭೀರವಾಗಿ ತೆಗೆದುಕೊಳ್ಳದಂತೆ ಜನರಿಗೆ ಮನವಿ ಮಾಡಿದ್ದು, ಮುಂದಿನ ಎರಡು ವಾರಗಳ ಬೆಲೆ ಪರಿಷ್ಕರಣೆಯನ್ನು ತೈಲ ಮತ್ತು ಅನಿಲ ನಿಯಂತ್ರಣ ಪ್ರಾಧಿಕಾರ ಇನ್ನೂ ಸಿದ್ಧಪಡಿಸಿಲ್ಲ ಎಂದು ಅಧಿಕಾರಿಯೊಬ್ಬರು ಡಾನ್‌ಗೆ ತಿಳಿಸಿದ್ದಾರೆ.
ರೂಪಾಯಿ ಅಪಮೌಲ್ಯ ಮತ್ತು ಅಂತರರಾಷ್ಟ್ರೀಯ ತೈಲ ಬೆಲೆಗಳ ಪ್ರಭಾವವನ್ನು ಲೆಕ್ಕ ಹಾಕಿದರೆ, ಫೆಬ್ರುವರಿ 15 ರಿಂದ ಪ್ರಾರಂಭವಾಗುವ ಹದಿನೈದು ದಿನಗಳ ಲೆಕ್ಕಾಚಾರದಲ್ಲಿ ಅದು ಪ್ರತಿಫಲಿಸುತ್ತದೆ ಎಂದು ಅವರು ಹೇಳಿದರು.
Advertisement