ಅಮೆಜಾನ್ ದಟ್ಟಾರಣ್ಯದಲ್ಲಿ ವಿಮಾನ ಪತನ: ನಾಪತ್ತೆಯಾಗಿದ್ದ 4 ಮಕ್ಕಳು 40 ದಿನಗಳ ಬಳಿಕ ಜೀವಂತವಾಗಿ ಪತ್ತೆ!
ವಿಮಾನ ಪತನವಾಗಿ 40 ದಿನಗಳ ಬಳಿಕ ಅಮೆಜಾನ್ ದಟ್ಟಾರಣ್ಯದಿಂದ ಮಗು ಸೇರಿದಂತೆ 4 ಮಕ್ಕಳನ್ನು ಜೀವಂತವಾಗಿ ರಕ್ಷಣೆ ಮಾಡಲಾಗಿದೆ ಎಂದು ಕೊಲಂಬಿಯಾದ ಸೇನಾಪಡೆ ತಿಳಿಸಿದೆ.
Published: 10th June 2023 11:30 AM | Last Updated: 10th June 2023 05:05 PM | A+A A-

ಮಕ್ಕಳನ್ನು ರಕ್ಷಣೆ ಮಾಡಿರುವುದು.
ಕೊಲಂಬಿಯಾ: ವಿಮಾನ ಪತನವಾಗಿ 40 ದಿನಗಳ ಬಳಿಕ ಅಮೆಜಾನ್ ದಟ್ಟಾರಣ್ಯದಿಂದ ಮಗು ಸೇರಿದಂತೆ 4 ಮಕ್ಕಳನ್ನು ಜೀವಂತವಾಗಿ ರಕ್ಷಣೆ ಮಾಡಲಾಗಿದೆ ಎಂದು ಕೊಲಂಬಿಯಾದ ಸೇನಾಪಡೆ ತಿಳಿಸಿದೆ.
ಮೇ 1 ರಂದು 7 ಪ್ರಯಾಣಿಕರು ಹಾಗೂ ಒಬ್ಬ ಪೈಲಟ್ ಇದ್ದ ಸೆಸ್ನಾ ಸಿಂಗಲ್ ಎಂಜಿನ್‌ನ ಸಣ್ಣ ವಿಮಾನವೊಂದು ಎಂಜಿನ್ ವೈಫಲ್ಯದಿಂದಾಗಿ ಪತನವಾಗಿತ್ತು. ಘಟನೆಯ ಬಳಿಕ ಬದುಕುಳಿದವರಿಗಾಗಿ ತೀವ್ರ ಹುಡುಕಾಟ ನಡೆಸಲಾಗಿತ್ತು.
ಅಪಘಾತವಾಗಿ 2 ವಾರಗಳ ಬಳಿಕ ಅಮೆಜಾನ್ ದಟ್ಟ ಕಾಡಿನಲ್ಲಿ ಪತನವಾಗಿದ್ದ ವಿಮಾನವನ್ನು ಕಂಡುಹಿಡಿಯಲಾಗಿದ್ದು, ಮೂವರು ವಯಸ್ಕರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆದರೆ ಅವರೊಂದಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 4 ಮಕ್ಕಳ ಪತ್ತೆ ಮಾತ್ರ ಎಲ್ಲಿಯೂ ಸಿಕ್ಕಿರಲಿಲ್ಲ.
ನಾಪತ್ತೆಯಾಗಿದ್ದವರಲ್ಲಿ 13, 9, 4 ವರ್ಷ ಹಾಗೂ 11 ತಿಂಗಳ ಮಕ್ಕಳು ಸೇರಿದ್ದರು. ಎಲ್ಲಾ ಮಕ್ಕಳೂ ಒಡಹುಟ್ಟಿದವರಾಗಿದ್ದರು. ಕಾರ್ಯಾಚರಣೆ ವೇಳೆ ಕಾಡಿನಲ್ಲಿ ಮಕ್ಕಳ ಹೆಜ್ಜೆ ಗುರುತು, ಅರ್ಧ ತಿಂದ ಹಣ್ಣುಗಳು ಸೇರಿದಂತೆ ಹಲವು ಕುರುಹುಗಳು ಪತ್ತೆಯಾಗಿತ್ತು. ಹೀಗಾಗಿ ಮಕ್ಕಳು ಬದುಕಿರುವ ನಿರೀಕ್ಷೆಯಲ್ಲಿ ಹುಡುಕಾಟವನ್ನು ತೀವ್ರಗೊಳಿಸಲಾಗಿತ್ತು.
ಮಕ್ಕಳನ್ನು ಪತ್ತೆಹಚ್ಚಲು ಕಾಡಿನಲ್ಲಿ ನಾಯಿಗಳು, 150 ಸೈನಿಕರು ಹುಡುಕಾಟ ನಡೆಸಿದರು. ಸ್ಥಳೀಯ ಬುಡಕಟ್ಟಿನ ಹತ್ತಾರು ಸ್ವಯಂಸೇವಕರೂ ಕಾರ್ಯಾಚರಣೆಯಲ್ಲಿ ಸಹಾಯ ಮಾಡಿದರು. ಬದುಕುಳಿದಿರೋ ಮಕ್ಕಳು ಮುಂದೆ ಸಾಗದಂತೆ ತಡೆಯಲು ಕಾಡಿನಾದ್ಯಂತ ಧ್ವನಿ ಸುರುಳಿಗಳನ್ನು ಪ್ರಸಾರ ಮಾಡಲಾಗಿತ್ತು.
ಹಸಿವಿನಿಂದ ಅವರು ಸಾಯಬಾರದು ಎಂಬ ಕಾರಣಕ್ಕೆ ಆಹಾರ, ನೀರಿನ ಬಾಟಲಿಗಳನ್ನು ಹೆಲಿಕಾಪ್ಟರ್ ಮೂಲಕ ಮೇಲಿನಿಂದ ಕಾಡಿನೊಳಗಡೆ ಎಸೆಯಲಾಗಿತ್ತು. 40 ದಿನಗಳ ಬಳಿಕ ಕೊನೆಗೂ ಮಕ್ಕಳು ಜೀವಂತವಾಗಿ ಪತ್ತೆಯಾಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೋ ಪೆಟ್ರೋ, ಇದೊಂದು ವಿಸ್ಮಯಕಾರಿ ಘಟನೆಯಾಗಿದೆ. ಹುಡುಕಾಟದ 40 ದಿನಗಳ ಬಳಿಕ ಸೇನಾಪಡೆ ಹಾಗೂ ಸ್ಥಳೀಯ ಜನರು ಮಕ್ಕಳನ್ನು ಪತ್ತೆ ಮಾಡಿದ್ದಾರೆ. ಕಷ್ಟದ ಪರಿಸ್ಥಿತಿಯಲ್ಲಿಯೂ ಮಕ್ಕಳು ಧೈರ್ಯದಿಂದ ಬದುಕುಳಿಯುವ ಮಾರ್ಗಗಳನ್ನು ಕಂಡುಹಿಡಿದಿರುವುದನ್ನು ಇತಿಹಾಸ ನೆನಪಿನಲ್ಲಿಟ್ಟುಕೊಳ್ಳುತ್ತದೆ ಎಂದು ಹೇಳಿದ್ದಾರೆ.