ಗಾಜಾಪಟ್ಟಿ ವಶಕ್ಕೆ ಇಸ್ರೇಲ್ ಸೇನೆಗೆ ಆದೇಶ!: ವರದಿ

ಹಮಾಸ್ ಉಗ್ರರ ದಾಳಿ ಬೆನ್ನಲ್ಲೇ ಗಾಜಾಪಟ್ಟಿ ಮೇಲೆ ದಾಳಿ ಆರಂಭಿಸಿರುವ ಇಸ್ರೇಲ್ ಸೇನೆಗೆ ಇದೀಗ ಇಡೀ ಗಾಜಾಪಟ್ಟಿಯನ್ನೇ ವಶಕ್ಕೆ ಪಡೆಯುವಂತೆ ಆದೇಶ ನೀಡಲಾಗಿದೆ.
ಗಾಜಾಪಟ್ಟಿ ವಶಕ್ಕೆ ಇಸ್ರೇಲ್ ಸೇನೆಗೆ ಆದೇಶ
ಗಾಜಾಪಟ್ಟಿ ವಶಕ್ಕೆ ಇಸ್ರೇಲ್ ಸೇನೆಗೆ ಆದೇಶ

ಟೆಲ್ ಅವೀವ್: ಹಮಾಸ್ ಉಗ್ರರ ದಾಳಿ ಬೆನ್ನಲ್ಲೇ ಗಾಜಾಪಟ್ಟಿ ಮೇಲೆ ದಾಳಿ ಆರಂಭಿಸಿರುವ ಇಸ್ರೇಲ್ ಸೇನೆಗೆ ಇದೀಗ ಇಡೀ ಗಾಜಾಪಟ್ಟಿಯನ್ನೇ ವಶಕ್ಕೆ ಪಡೆಯುವಂತೆ ಆದೇಶ ನೀಡಲಾಗಿದೆ.

ಈ ಬಗ್ಗೆ ನ್ಯೂಯಾರ್ಕ್ ಟೈಮ್ಸ್ ಭಾನುವಾರ ವರದಿ ಮಾಡಿದ್ದು, ಗಾಜಾ ನಗರವನ್ನು ವಶಪಡಿಸಿಕೊಳ್ಳಲು ಮತ್ತು ಹಮಾಸ್‌ನ ಪ್ರಸ್ತುತ ನಾಯಕತ್ವವನ್ನು ನಾಶಮಾಡಲು ಹತ್ತಾರು ಸಾವಿರ ಸೈನಿಕರೊಂದಿಗೆ ಶೀಘ್ರದಲ್ಲೇ ಗಾಜಾ ಪಟ್ಟಿಯ ಮೇಲೆ ದಾಳಿ ಮಾಡಲು ಇಸ್ರೇಲಿ ಮಿಲಿಟರಿ ಸಿದ್ಧತೆಗಳನ್ನು ಪ್ರಾರಂಭಿಸಿದೆ ಎನ್ನಲಾಗಿದೆ. ಅಂತೆಯೇ ಪ್ರಸ್ತುತ ಹಮಾಸ್ ಭಯೋತ್ಪಾದಕ ಗುಂಪಿನ ಉನ್ನತ ರಾಜಕೀಯ ಮತ್ತು ಮಿಲಿಟರಿ ಶ್ರೇಣಿಯನ್ನು ತೊಡೆದುಹಾಕುವುದು ಇಸ್ರೇಲಿ ಮಿಲಿಟರಿಯ ಮುಖ್ಯ ಗುರಿಯಾಗಿದೆ ಎಂದು ಅದು ವರದಿ ಮಾಡಿದೆ.

ಹಮಾಸ್‌ನ ಭದ್ರಕೋಟೆ ಮತ್ತು ಅತಿದೊಡ್ಡ ನಗರ ಕೇಂದ್ರವಾದ ಗಾಜಾ ನಗರವನ್ನು ಇಸ್ರೇಲ್ ವಶಪಡಿಸಿಕೊಂಡರೆ ಹಮಾಸ್‌ನ ಸಂಘಟನೆಯನ್ನು ಬುಡಸಹಿತ ನಾಶಪಡಿಸಬಹುದು ಎಂಬುದು ಇಸ್ರೇಲ್ ಸೇನೆಯ ಯೋಜನೆಯಾಗಿದೆ. ಈಗಾಗಲೇ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟ ಹಮಾಸ್ ಅನ್ನು ಭಯೋತ್ಪಾದಕ ಗುಂಪು ಎಂದು ಪರಿಗಣಿಸಲ್ಪಟ್ಟಿದ್ದು, ಇದು ಇಸ್ರೇಲ್ ಯೋಜನೆಗೆ ಬಲ ನೀಡಿದೆ.

ಏತನ್ಮಧ್ಯೆ ಹಮಾಸ್ ನಿರ್ನಾಮಕ್ಕೆ ಇಸ್ರೇಲ್ ಸೇನೆ ಮುಂದಾಗಿರುವಂತೆಯೇ ಇತ್ತ ಹಮಾಸ್ ಬೆಂಬಲಕ್ಕೆ ಇಸ್ರೇಲ್ ನ ಬದ್ಧ ವೈರಿಗಳಾದ ಇರಾನ್ ಮತ್ತು ಅದರ ಬೆಂಬಲಿತ ಲೆಬನಾನಿನ ಮಿಲಿಷಿಯಾ, ಹಮಾಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿರುವ ಇತರೆ ಉಗ್ರ ಸಂಘಟನೆಗಳು ಕೂಡ ಇಸ್ರೇಲ್ ವಿರುದ್ಧ ತೊಡೆತಟ್ಟುವ ಸನ್ನಾಹದಲ್ಲಿವೆ. ಪ್ರಮುಖವಾಗಿ ನಿಖರ-ಮಾರ್ಗದರ್ಶಿತ ಕ್ಷಿಪಣಿಗಳು ಮತ್ತು ನೆಲದ ಪಡೆಗಳ ವ್ಯಾಪಕ ಶ್ರೇಣಿಯನ್ನು ಹೊಂದಿರುವ ಹೆಜ್ಬೊಲ್ಲಾ ಸಂಘಟನೆ ಇಸ್ರೇಲ್ ತಲೆನೋವಾಗುವ ಸಾಧ್ಯತೆ ಇದೆ. ಲೆಬನಾನಿನ ಗಡಿ ಮೂಲಕ ಹೆಜ್ಬೊಲ್ಲಾ ಸಂಘಟನೆ ಇಸ್ರೇಲ್ ಮೇಲೆ ದಾಳಿಗೆ ಮುಂದಾಗಿದೆ. ಈ ಬಗ್ಗೆ ಚಿತ್ರಣ ಅಸ್ಪಷ್ಟವಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ತಮ್ಮ ಸೈನಿಕರು ಗಾಜಾವನ್ನು ಆಕ್ರಮಿಸುತ್ತಾರೆ ಎಂದು ಇಸ್ರೇಲಿ ಮಿಲಿಟರಿ ಅಧಿಕೃತವಾಗಿ ದೃಢಪಡಿಸಿಲ್ಲ ಆದರೆ ತಮ್ಮ ಪಡೆಗಳು ನೆಲದ ಯುದ್ಧಕ್ಕೆ ತಮ್ಮ 'ಸಿದ್ಧತೆಯನ್ನು' ಹೆಚ್ಚಿಸುತ್ತಿದೆ ಎಂದು ಹೇಳಿದೆ. ಹತ್ತಾರು ಹಮಾಸ್ ಬಂದೂಕುಧಾರಿಗಳು ಗಾಜಾ ನಗರ ಮತ್ತು ಉತ್ತರ ಗಾಜಾದ ಸುತ್ತಮುತ್ತಲಿನ ಭಾಗಗಳ ಕೆಳಗೆ ನೂರಾರು ಮೈಲುಗಳಷ್ಟು ಭೂಗತ ಸುರಂಗಗಳು ಮತ್ತು ಬಂಕರ್‌ಗಳ ಒಳಗೆ ತಮ್ಮನ್ನು ತಾವು ರಕ್ಷಿಸಿಕೊಂಡು ನೆಲೆಸಿದ್ದಾರೆ. ಇಸ್ರೇಲಿ ಸೈನಿಕರು ಈ ಪೈಕಿ ಕೆಲವು ಸುರಂಗಗಳನ್ನು ಸ್ಫೋಟಿಸುವ ಮೂಲಕ ಮತ್ತು ರಸ್ತೆಬದಿಯ ಬಾಂಬ್‌ಗಳು ಮತ್ತು ಬೂಬಿ-ಟ್ರ್ಯಾಪಿಂಗ್ ಕಟ್ಟಡಗಳನ್ನು ಸ್ಫೋಟಿಸುವ ಮೂಲಕ ಹಮಾಸ್ ಉಗ್ರರ ಪ್ರಗತಿಯನ್ನು ತಡೆಯಲು ಪ್ರಯತ್ನಿಸುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಇನ್ನು ಗಾಜಾ ಪಟ್ಟಿಯಲ್ಲಿರುವ ಹಮಾಸ್ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಯುದ್ಧದ ನಡುವೆ, ಇದುವರೆಗೆ 2,329 ಜೀವಗಳು ಬಲಿಯಾಗಿದ್ದು, 9,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ, ಯುದ್ಧ ಪೀಡಿತ ಗಾಜಾವನ್ನು ತೊರೆಯಲು ವಿದೇಶಿಯರಿಗೆ ಅವಕಾಶ ನೀಡುವ ಒಪ್ಪಂದವನ್ನು ಇಸ್ರೇಲ್‌ಗೆ ತಲುಪಿಸಲಾಗಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ಶನಿವಾರ ವರದಿ ಮಾಡಿದೆ.

ಈಜಿಪ್ಟ್, ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್ ಗಾಜಾದಲ್ಲಿ ನೆಲೆಸಿರುವ ವಿದೇಶಿಯರಿಗೆ ರಫಾ ಗಡಿಯ ಮೂಲಕ ಈಜಿಪ್ಟ್‌ಗೆ ಹಾದುಹೋಗಲು ಅವಕಾಶ ಮಾಡಿಕೊಟ್ಟಿವೆ. ಇಸ್ರೇಲಿ ಪಡೆಗಳು ಹಮಾಸ್ ನಿಯಂತ್ರಿತ ಪ್ರದೇಶದಿಂದ ಹೊರಹೋಗುವ ವಿದೇಶಿಗರ ಮೇಲೆ ದಾಳಿ ಮಾಡದಿರಲು ಒಪ್ಪಿಕೊಂಡಿವೆ. ಅಲ್ಲದೇ ವಿದೇಶಿಗರು ಹೆಚ್ಚಾಗಿರುವ ಪ್ರದೇಶಗಳಿಂದ ದೂರವಿರಲು ಒಪ್ಪಿಕೊಂಡಿವೆ ಎನ್ನಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com