ಭಯೋತ್ಪಾದಕರು ಮಸೀದಿಯನ್ನು ಕಮಾಂಡ್ ಸೆಂಟರ್ ಆಗಿ ಬಳಸುತ್ತಿದ್ದರು: ಮಸೀದಿ ಮೇಲಿನ ವೈಮಾನಿಕ ದಾಳಿ ಕುರಿತು ಇಸ್ರೇಲ್ ಸ್ಪಷ್ಟನೆ

ಹಮಾಸ್ ಉಗ್ರರು ತಮ್ಮ ದಾಳಿಗೆ ಮಸೀದಿಯನ್ನು ಕಮಾಂಡ್ ಸೆಂಟರ್ ಆಗಿ ಬಳಕೆ ಮಾಡುತ್ತಿದ್ದರು. ಹೀಗಾಗಿಯೇ ಮಸೀದಿ ಮೇಲೆ ವೈಮಾನಿಕ ದಾಳಿ ನಡೆಸಿ ಭಯೋತ್ಪಾಕರನ್ನು ಹತ್ಯೆ ಮಾಡಲಾಯಿತು ಎಂದು ಇಸ್ರೇಲ್ ಸ್ಪಷ್ಟನೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಜೆರುಸಲೇಂ: ಹಮಾಸ್ ಉಗ್ರರು ತಮ್ಮ ದಾಳಿಗೆ ಮಸೀದಿಯನ್ನು ಕಮಾಂಡ್ ಸೆಂಟರ್ ಆಗಿ ಬಳಕೆ ಮಾಡುತ್ತಿದ್ದರು. ಹೀಗಾಗಿಯೇ ಮಸೀದಿ ಮೇಲೆ ವೈಮಾನಿಕ ದಾಳಿ ನಡೆಸಿ ಭಯೋತ್ಪಾಕರನ್ನು ಹತ್ಯೆ ಮಾಡಲಾಯಿತು ಎಂದು ಇಸ್ರೇಲ್ ಸ್ಪಷ್ಟನೆ ನೀಡಿದೆ.

ಗಾಜಾದ ವೆಸ್ಟ್​ ಬ್ಯಾಂಕ್​ನ ಜೆನಿನ್ ನಗರದಲ್ಲಿರುವ ಅಲ್​-ಅನ್ಸಾರ್ ಮಸೀದಿ ಸಂಕೀರ್ಣದ ಮೇಲೆ ಇಸ್ರೇಲ್ ಸೇನಾಪಡೆ ವೈಮಾನಿ ದಾಳಿ ನಡೆಸಿತ್ತು.

ಈ ದಾಳಿ ಕುರಿತು ಹೇಳಿಕೆ ನೀಡಿರುವ ಇಸ್ರೇಲ್ ಸೇನಾಪಡೆ, ವೆಸ್ಟ್ ಬ್ಯಾಂಕ್‌ನ ಜೆನಿನ್‌ನಲ್ಲಿರುವ ಅಲ್-ಅನ್ಸಾರ್ ಮಸೀದಿ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್ ಮತ್ತು ಇಸ್ಲಾಮಿಕ್ ಜಿಹಾದ್‌ನ ಉಗ್ರರನ್ನು ಹತ್ಯೆ ಮಾಡಲಾಗಿದೆ. ಉಗ್ರರು ಈ ಮಸೀದಿಯನ್ನು ದಾಳಿಗಳನ್ನು ಯೋಜಿಸಲು ಕಮಾಂಡ್ ಸೆಂಟರ್ ಆಗಿ ಬಳಸುತ್ತಿದ್ದರು. ಹಾಗಾಗಿ ಮಸೀದಿಯನ್ನು ಹೊಡೆದುರುಳಿಸಲಾಗಿದೆ ಎಂದು ಹೇಳಿದೆ.

ದಾಳಿಯಲ್ಲಿ ಹತ್ಯೆಯಾದ ಉಗ್ರರು ಕಳೆದ ತಿಂಗಳಿನಿಂದ ಹಲವಾರು ಭಯೋತ್ಪಾದಕ ದಾಳಿಗಳನ್ನು ನಡೆಸಿದ್ದು, ಸದ್ಯದ ಪರಿಸ್ಥಿತಿಯಲ್ಲೂ ಹಲವೆಡೆ ದಾಳಿ ನಡೆಸಲು ಯೋಜನೆ ರೂಪಿಸಿದ್ದರು ಎಂದು ತಿಳಿಸಿದೆ.

ಆದರೆ, ವೈಮಾನಿಕ ದಾಳಿಯಲ್ಲಿ ಮೃತರ ಸಂಖ್ಯೆ ಅಥವಾ ಗುರುತಿನ ವಿವರಗಳನ್ನು ಇಸ್ರೇಲ್ ಸೇನೆ ಬಹಿರಂಗಪಡಿಸಿಲ್ಲ.

ಅಕ್ಟೋಬರ್ 7ರಂದು ಇಸ್ರೇಲ್‌ ಮತ್ತು ಹಮಾಸ್‌ ಬಂಡುಕೋರರ ನಡುವೆ ಸಂಘರ್ಷವು ಆರಂಭವಾದ ನಂತರ ಈವರೆಗೆ ಗಾಜಾಪಟ್ಟಿಯಲ್ಲಿ ಸುಮಾರು 4,300 ಜನರು ಹಾಗೂ ಇಸ್ರೇಲ್‌ನಲ್ಲಿ ಸುಮಾರು 1,400 ಜನರು ಸತ್ತಿದ್ದಾರೆ.

ಇಸ್ರೇಲ್- ಪ್ಯಾಲೆಸ್ತೀನ್ ನಡುವಿನ ಸಂಘರ್ಷ ಸುಮಾರು ನೂರು ವರ್ಷಗಳಿಂದ ನಡೆಯುತ್ತಿದೆ. ವೆಸ್ಟ್ ಬ್ಯಾಂಕ್, ಗಾಜಾ ಪಟ್ಟಿ ಮತ್ತು ಗೋಲನ್ ಹೈಟ್ಸ್ ಇನ್ನಿತರ ಪ್ರದೇಶಗಳ ಮೇಲಿನ ಹಕ್ಕಿನ ಬಗ್ಗೆ ಎರಡೂ ರಾಷ್ಟ್ರಗಳ ನಡುವೆ ವಿವಾದ ಇದೆ. ಪೂರ್ವ ಜೆರುಸಲೆಮ್ ಸೇರಿ ಈ ಪ್ರದೇಶಗಳನ್ನು ಪ್ಯಾಲೆಸ್ತೀನ್ ತನ್ನದು ಎಂದು ಹೇಳಿಕೊಳ್ಳುತ್ತಿದೆ. ಆದರೆ ಇಸ್ರೇಲ್ ಜೆರುಸಲೆಮ್ ಮೇಲಿನ ಹಕ್ಕನ್ನು ಸಾಧಿಸುತ್ತಿದೆ.

ಗಾಜಾ ಪಟ್ಟಿ ಇಸ್ರೇಲ್ ಮತ್ತು ಈಜಿಪ್ಟ್ ನಡುವೆ ಇದೆ. ಈ ಸ್ಥಳವು ಪ್ರಸ್ತುತ ಹಮಾಸ್ ಉಗ್ರರ ನಿಯಂತ್ರಣದಲ್ಲಿದೆ. ಹಮಾಸ್ ಎಂಬುದು ಇದು ಇಸ್ರೇಲ್ ವಿರೋಧಿ ಗುಂಪು. ಸೆಪ್ಟೆಂಬರ್ 2005 ರಲ್ಲಿ ಇಸ್ರೇಲ್, ಗಾಜಾ ಪಟ್ಟಿಯಿಂದ ತನ್ನ ಪಡೆಗಳನ್ನು ಹಿಂತೆಗೆದುಕೊಂಡಿತು. ನಂತರ ಈ ಪ್ರದೇಶದ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸಿತು. ವೆಸ್ಟ್ ಬ್ಯಾಂಕ್ ಮತ್ತು ಗಾಜಾ ಪಟ್ಟಿಯಲ್ಲಿ ಸ್ವತಂತ್ರ ಪ್ಯಾಲೆಸ್ಟೈನ್ ರಾಜ್ಯವನ್ನು ಸ್ಥಾಪಿಸಬೇಕು ಎಂದು ಪ್ಯಾಲೆಸ್ತೀನ್ ಹೋರಾಟ ನಡೆಸುತ್ತಿದೆ.

ಅಕ್ಟೋಬರ್‌ 7ರಂದು ಹಮಾಸ್‌ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಿ, 1,200 ಮಂದಿಯನ್ನು ಹತ್ಯೆ ಮಾಡಿದ್ದರು. ಈ ದಾಳಿಗೆ ಪ್ರತೀಕಾರವಾಗಿ ಹಮಾಸ್‌ ಅನ್ನು ನಾಶಗೈಯ್ಯುವುದಾಗಿ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಘೋಷಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com