Syria civil war: ಮತ್ತೊಂದು ನಗರ ಕಳೆದುಕೊಂಡ ಅಸ್ಸಾದ್ ಸರ್ಕಾರ, ಹಮಾ-ಅಲೆಪ್ಪೊ ಬಳಿಕ ದಾರಾ ನಗರವೂ ಬಂಡುಕೋರರ ವಶಕ್ಕೆ...!

2011ರಲ್ಲಿ ಶಾಲೆಯ ಗೋಡೆಗಳ ಮೇಲೆ ಅಸ್ಸಾದ್ ವಿರೋಧಿ ಗೀಚುಬರಹಗಳನ್ನ ಬರೆದ ಹಿನ್ನಲೆಯೆಲ್ಲಿ ಕೆಲ ಯುವಕರನ್ನು ಬಂಧಿಸಲಾಗಿತ್ತು.
Syrian opposition fighters take to the streets in the aftermath of the opposition's takeover of Hama, Syria, Friday, Dec. 6, 2024.
ಶುಕ್ರವಾರ, ಡಿಸೆಂಬರ್ 6, 2024 ರಂದು ಸಿರಿಯಾದ ಹಮಾವನ್ನು ಪ್ರತಿಪಕ್ಷಗಳು ಸ್ವಾಧೀನಪಡಿಸಿಕೊಂಡ ನಂತರ ಸಿರಿಯನ್ ವಿರೋಧಿ ಹೋರಾಟಗಾರರು ಬೀದಿಗಿಳಿದಿದ್ದಾರೆ.
Updated on

ಹಮಾ: ಸಿರಿಯಾದಲ್ಲಿ ಕಳೆದ 13 ವರ್ಷಗಳಿಂದ ಅಂತರ್ಯುದ್ಧ ನಡೆಯುತ್ತಿದ್ದು, ಕಳೆದ ಕೆಲದಿನಗಳಿಂದ ಈ ಯುದ್ಧ ಮತ್ತಷ್ಟು ಪಡೆದುಕೊಂಡಿದೆ. ಸದ್ಯದ ಬೆಳವಣಿಗೆ ಪ್ರಕಾರ, ಹಮಾ, ಅಲೆಪ್ಪೊ ನಗರದ ಬಳಿಕ ದಾರಾ ನಗರವನ್ನೂ ಬಂಡುಕೋರರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ದಾರಾ ನಗರದ ಮೇಲೆ ವಿವಿಧ ದಿಕ್ಕುಗಳಿಂದ ಅಧಿಕ ಸಂಖ್ಯೆಯಲ್ಲಿ ಭಯೋತ್ಪಾದಕ ಸಂಘಟನೆಗಳು ಪ್ರಾರಂಭಿಸಿದ ಹಿಂಸಾತ್ಮಕ ಮತ್ತು ಸತತ ದಾಳಿಗಳನ್ನು ಹಿಮ್ಮೆಟ್ಟಿಸುವಲ್ಲಿ ಸರ್ಕಾರದ ಸಶಸ್ತ್ರ ಪಡೆಗಳು ವಿಫಲವಾಗಿದ್ದು, ಇದು ಬಶರ್ ಅಲ್ ಅಸ್ಸಾದ್ ನೇತೃತ್ವದ ಸರ್ಕಾರ ಭಾರೀ ಹೊಡೆತ ನೀಡಿದಂತಾಗಿದೆ.

2011ರಲ್ಲಿ ಶಾಲೆಯ ಗೋಡೆಗಳ ಮೇಲೆ ಅಸ್ಸಾದ್ ವಿರೋಧಿ ಗೀಚುಬರಹಗಳನ್ನ ಬರೆದ ಹಿನ್ನಲೆಯೆಲ್ಲಿ ಕೆಲ ಯುವಕರನ್ನು ಬಂಧಿಸಲಾಗಿತ್ತು. ಬಂಧಿತ ಯುವತರಿಗೆ ಸರ್ಕಾರ ಹಿಂಸೆ ನೀಡುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಸಿರಿಯಾದವಲ್ಲಿ ಆಂತರಿಕ ಯುದ್ಧ ಆರಂಭವಾಗಿತ್ತು. ಪ್ರಸ್ತುತ ಬಂಡುಕೋರರು ವಶಕ್ಕೆ ಪಡೆದಿರುವ ದಾರಾ ನಗರ ಹವ್ರಾನ್ ಪ್ರದೇಶದ ಮುಖ್ಯ ಪಟ್ಟಣವಾಗಿದ್ದು, ಈ ನಗರವನ್ನು 'the cradle of the revolution' ಎಂದು ಕರೆಯಲಾಗುತ್ತದೆ. ಈ ಪ್ರಾಂತ್ಯವು ಜೋರ್ಡಾನ್‌ನ ಗಡಿಯಾಗಿದೆ. ಈ ಹಿಂದೆ ಬಂಡುಕೋರರು ಹಮಾ, ಅಲೆಪ್ಪೊ ನಗರಗಳ ಮೇಲೆ ಹಿಡಿತ ಸಾಧಿಸಿದ್ದರು. ಇದೀಗ ದಾರಾ ನಗರದ ಮೇಲೂ ಹಿಡಿತ ಸಾಧಿಸಿರುವುದು, ಅಸ್ಸಾದ್ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗುವಂತೆ ಮಾಡಿದೆ.

Syrian opposition fighters take to the streets in the aftermath of the opposition's takeover of Hama, Syria, Friday, Dec. 6, 2024.
ಅಲೆಪ್ಪೊದಲ್ಲಿ ರಕ್ತಪಾತ: ಸಿರಿಯಾ ಯುದ್ಧಕ್ಕೆ ರಹಸ್ಯವಾಗಿ ಕಿಚ್ಚು ಹಚ್ಚುತ್ತಿದೆಯೇ ಇಸ್ರೇಲ್? (ಜಾಗತಿಕ ಜಗಲಿ)

ಬಂಡುಕೋರರು ದಾರಾ ನಗರದ ಶೇ.90ರಷ್ಟು ಪ್ರದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಸರ್ಕಾರದ ಸಶಸ್ತ್ರ ಪಡೆಗಳು, ಹಿಂದಡಿ ಇಡಬೇಕಾಗಿ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ ಅನಿರೀಕ್ಷಿತ ಬೆಳವಣಿಗೆಯಿಂದ ಆಘಾತಕ್ಕೆ ಒಳಗಾಗಿರುವ ಸಿರಿಯಾ ಅಧ್ಯಕ್ಷ ಬಷರ್ ಅಲ್ ಅಸ್ಸಾದ್, ರಷ್ಯಾ ಮತ್ತು ಇರಾನ್ ಬೆಂಬಲದೊಂದಿಗೆ ಮತ್ತೆ ಬಂಡಾಯಗಾರರನ್ನು ಹತ್ತಿಕ್ಕುವ ದಿಕ್ಕಿನಲ್ಲಿ ಸಿದ್ಧತೆ ನಡೆಸಿದ್ದಾರೆ. ಒಂದು ಕಡೆ ರಷ್ಯಾ ದೇಶ ಉಕ್ರೇನ್ ಜೊತೆಗೆ ಯುದ್ಧದಲ್ಲಿ ತೊಡಗಿದ್ದರೆ, ಮತ್ತೊಂದು ಕಡೆ ಇರಾನ್ ದೇಶ ಲೆಬನಾನ್ ಮತ್ತು ಗಾಜಾದಲ್ಲಿ ಇಸ್ರೇಲ್ ದಾಳಿಯಿಂದ ತಾನು ಬೆಂಬಲಿಸುತ್ತಿದ್ದ ಹಿಜ್ಬುಲ್ಲಾ ಮತ್ತು ಹಮಾಸ್ ಉಗ್ರಗಾಮಿಗಳ ನಿರ್ನಾಮವನ್ನು ಎದುರಿಸುತ್ತಿದೆ.

ಉಕ್ರೇನ್ ಯುದ್ಧದಲ್ಲಿ ರಷ್ಯಾ ಏಕಾಂಗಿಯಾದಂತೆ ಗಾಜಾ ಮತ್ತು ಲೆಬನಾನ್ ಯುದ್ಧದಲ್ಲಿ ಇರಾನ್ ಒಂಟಿಯಾಗಿದೆ. ಈ ಯುದ್ಧಗಳನ್ನು ನಿಭಾಯಿಸುವುದೇ ಈ ದೇಶಗಳಿಗೆ ಕಷ್ಟ ಎನ್ನುವ ಸ್ಥಿತಿಯಲ್ಲಿ ಸಿರಿಯಾದಲ್ಲಿ ಅಸ್ಸಾದ್ ಅಧಿಕಾರಕ್ಕೆ ಕುತ್ತು ಬಂದಿದೆ.

ಹಲವಾರು ದಶಕಗಳಿಂದ ಅಸ್ಸಾದ್ ಬೆಂಬಲಿಸುತ್ತ ಬಂದಿರುವ ಈ ದೇಶಗಳಿಗೆ ಈಗ ಬಂದಿರುವ ಸ್ಥಿತಿ ಸವಾಲಿನದಾಗಿದೆ. ಮಧ್ಯ ಪ್ರಾಚ್ಯದ ಬಿಕ್ಕಟ್ಟು ಗಾಜಾದಿಂದ ಆರಂಭವಾಗಿ ಲೆಬನಾನ್‌ಗೆ ವಿಸ್ತರಿಸಿ ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ ಎನ್ನುವಾಗ ಸಿರಿಯಾಕ್ಕೂ ವಿಸ್ತರಣೆಯಾಗಿರುವುದರಿಂದ ಪರಿಸ್ಥಿತಿ ಜಟಿಲಗೊಂಡಿದೆ.

Syrian opposition fighters take to the streets in the aftermath of the opposition's takeover of Hama, Syria, Friday, Dec. 6, 2024.
ಸಿರಿಯಾದಲ್ಲಿ ಭುಗಿಲೆದ್ದ ಹಿಂಸಾಚಾರ: ಕೂಡಲೇ ದೇಶ ತೊರೆಯಿರಿ; ಭಾರತೀಯರಿಗೆ ವಿದೇಶಾಂಗ ಸಚಿವಾಲಯ ಸೂಚನೆ!

ಇಸ್ರೇಲ್ ಮತ್ತು ಲೆಬನಾನ್‌ನ ಉಗ್ರವಾದಿ ಸಂಘಟನೆ ಹಿಜ್ಬುಲ್ಲಾ ನಡುವೆ ಕದನವಿರಾಮ ಒಪ್ಪಂದವಾದ ನಂತರದ ಎರಡೇ ದಿನಗಳಲ್ಲಿ ಸಿರಿಯಾದ ಬಂಡಾಯಗಾರರು ಪ್ರಮುಖ ನಗರಗಳನ್ನು ವಶಕ್ಕೆ ಪಡೆಯುವಲ್ಲಿ ಸಫಲವಾಗಿರುವುದು ಅನೇಕ ರೀತಿಯ ಲೆಕ್ಕಾಚಾರಗಳಿಗೆ ಆವಕಾಶ ಕಲ್ಪಿಸಿದೆ.

ಈ ಹಿಂದೆ ಅಸ್ಸಾದ್ ವಿರೋಧಿ ಬಂಡಾಯಗಾರರಲ್ಲಿ ಒಗ್ಗಟ್ಟಿರಲಿಲ್ಲ. ಈ ಬಾರಿ ಅವರಲ್ಲಿ ಒಗ್ಗಟ್ಟು ಮೂಡಿದೆ. ಅಲ್ ಖೈದಾ ಸಂಘಟನೆಯ ಬೆಂಬಲಿಗರಾಗಿದ್ದವರು ಹಯಾತ್ ತೆಹರೀರ್ ವ ಅಲ್ ಶಾಮ್ ನಾಯಕ ಅಬು ಮಹಮದ್ ಅಲ್ ಜವಲಾನಿ. ಈಗ ಅವರು ಅಲ್ ಖೈದಾ ಸಂಘಟನೆಯ ಸಂಬಂಧ ಕಡಿದುಕೊಂಡಿದ್ದು ವಿವಿಧ ಬಂಡಾಯ ಸಂಘಟನೆಗಳನ್ನು ಒಗ್ಗೂಡಿಸುವಲ್ಲಿ ಸಫಲವಾಗಿದ್ದಾರೆ. ಹೀಗಾಗಿ ಯಶಸ್ವಿ ದಾಳಿ ನಡೆಸಲು ಸಾಧ್ಯವಾಗಿದೆ.

ಬಂಡಾಯಗಾರರು ನಡೆಸಿದ ಸಶಸ್ತ್ರ ದಾಳಿ ಮತ್ತು ಅಸ್ಸಾದ್ ಬೆಂಬಲಿಗ ಪಡೆಗಳು ನಡೆಸಿದ ಪ್ರತಿದಾಳಿಯಲ್ಲಿ ಈ ವರೆಗೂ ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಲಕ್ಷಾಂತರ ಜನರು ನೆರೆಯ ದೇಶಗಳಿಗೆ ವಲಸೆ ಹೋಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com