ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ: ಜೈಲಿನಿಂದಲೇ ಅಂಚೆ ಮತಪತ್ರದ ಮೂಲಕ ಇಮ್ರಾನ್ ಖಾನ್ ಮತ ಚಲಾವಣೆ

ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಪಾಕಿಸ್ತಾನದಲ್ಲಿ ಗುರುವಾರ ಸಾರ್ವತ್ರಿಕ ಚುನಾವಣೆ ಆರಂಭಗೊಂಡಿದ್ದು, ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್ ಸೇರಿದಂತೆ ಇತರ ಪ್ರಮುಖ ಬಂಧಿತ ರಾಜಕೀಯ ವ್ಯಕ್ತಿಗಳು ಅಂಚೆ ಮತಪತ್ರದ ಮೂಲಕ ಜೈಲಿನಿಂದಲೇ ಮತ ಚಲಾಯಿಸಿದ್ದಾರೆ ಎಂದು ವರದಿಗಳಿಂದ ತಿಳಿದುಬಂದಿದೆ.
ಇಮ್ರಾನ್ ಖಾನ್.
ಇಮ್ರಾನ್ ಖಾನ್.

ಇಸ್ಲಾಮಾಬಾದ್‌: ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಪಾಕಿಸ್ತಾನದಲ್ಲಿ ಗುರುವಾರ ಸಾರ್ವತ್ರಿಕ ಚುನಾವಣೆ ಆರಂಭಗೊಂಡಿದ್ದು, ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್ ಸೇರಿದಂತೆ ಇತರ ಪ್ರಮುಖ ಬಂಧಿತ ರಾಜಕೀಯ ವ್ಯಕ್ತಿಗಳು ಅಂಚೆ ಮತಪತ್ರದ ಮೂಲಕ ಜೈಲಿನಿಂದಲೇ ಮತ ಚಲಾಯಿಸಿದ್ದಾರೆ ಎಂದು ವರದಿಗಳಿಂದ ತಿಳಿದುಬಂದಿದೆ.

ಅಂಚೆ ಮೂಲಕ ಮತ ಚಲಾಯಿಸಿದ ರಾಜಕೀಯ ನಾಯಕರಲ್ಲಿ ಮಾಜಿ ವಿದೇಶಾಂಗ ಸಚಿವ ಶಾ ಮಹಮ್ಮದ್‌ ಖುರೇಷಿ, ಪಂಜಾಬ್ ಮಾಜಿ ಮುಖ್ಯಮಂತ್ರಿ ಚೌಧರಿ ಪರ್ವೇಜ್ ಇಲಾಹಿ, ಅವಾಮಿ ಮುಸ್ಲಿಂ ಲೀಗ್ ಮುಖ್ಯಸ್ಥ ಶೇಖ್ ರಶೀದ್ ಮತ್ತು ಮಾಜಿ ಸಚಿವ ಫವಾದ್ ಚೌಧರಿ ಅವರು ಸೇರಿದ್ದಾರೆ ಎಂದು ಅಡಿಯಾಲಾ ಜೈಲಿನ ಮೂಲಗಳು ತಿಳಿಸಿವೆ.

ಗಣಕೀಕೃತ ರಾಷ್ಟ್ರೀಯ ಗುರುತಿನ ಚೀಟಿ(ಸಿಎನ್‌ಐಸಿ) ಹೊಂದದೆ ಇರುವ ಕಾರಣ ಅಡಿಯಾಲಾ ಜೈಲಿನಲ್ಲಿರುವ 7 ಸಾವಿರ ಕೈದಿಗಳಲ್ಲಿ 100ಕ್ಕಿಂತಲೂ ಕಡಿಮೆ ಕೈದಿಗಳು ಮತ ಚಲಾಯಿಸಲು ಅರ್ಹತೆ ಪಡೆದಿದ್ದರು ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರ ಬೆಳಿಗ್ಗೆ 8 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಿ ಸಂಜೆ 5 ಗಂಟೆಗೆ ಮುಕ್ತಾಯಗೊಳ್ಳಲಿದೆ. ಚುನಾವಣೆ ಇರುವ ಕಾರಣ ದೇಶದಾದ್ಯಂತ ಸಾರ್ವತ್ರಿಕ ರಜೆ ಘೋಷಿಸಲಾಗಿದೆ.

ಪಾಕಿಸ್ತಾನ ಚುನಾವಣಾ ಆಯೋಗದ ಪ್ರಕಾರ, ‘4,807 ಪುರುಷರು, 312 ಮಹಿಳೆಯರು ಮತ್ತು ಇಬ್ಬರು ಲಿಂಗತ್ವ ಅಲ್ಪಸಂಖ್ಯಾತರು ಸೇರಿ 5,121 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.

ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಜೈಲಿನಲ್ಲಿ ಇರುವ ಕಾರಣ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಅವರ ಪಾಕಿಸ್ತಾನ್‌ ಮುಸ್ಲಿಂ ಲೀಗ್‌–ನವಾಜ್(ಪಿಎಂಎಲ್‌–ಎನ್‌)  ಪಕ್ಷವು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ಹೆಚ್ಚಾಗಿದೆ. 74 ವರ್ಷದ ಷರೀಫ್‌ ದಾಖಲೆಯ ನಾಲ್ಕನೇ ಬಾರಿಗೆ ಪ್ರಧಾನಿ ಪಟ್ಟಕ್ಕೇರುವ ಉಮೇದಿನಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com