ಸರ್ಕಾರ ರಚನೆಗೆ ನವಾಜ್‌ ಷರೀಫ್-‌ಬಿಲಾವಲ್‌ ಭುಟ್ಟೋ ಒಪ್ಪಂದ; ತೆರೆಮರೆಯಲ್ಲಿ ಇಮ್ರಾನ್ ಖಾನ್ ಸಾಹಸ

ಸಾರ್ವತ್ರಿಕ ಚುನಾವಣಾ ಫಲಿತಾಂಶ ಪಾಕಿಸ್ತಾನದಲ್ಲಿ ರಾಜಕೀಯ ಕೋಲಾಹಲ ಸೃಷ್ಟಿ ಮಾಡಿದ್ದು, ಸರ್ಕಾರ ರಚನೆಗೆ ನವಾಜ್‌ ಷರೀಫ್-‌ಬಿಲಾವಲ್‌ ಭುಟ್ಟೋ ಕಸರತ್ತು ಮುಂದುವರೆಸಿದ್ದಾರೆ.
ಇಮ್ರಾನ್ ಖಾನ್ (ಸಂಗ್ರಹ ಚಿತ್ರ)
ಇಮ್ರಾನ್ ಖಾನ್ (ಸಂಗ್ರಹ ಚಿತ್ರ)
Updated on

ಲಾಹೋರ್: ಸಾರ್ವತ್ರಿಕ ಚುನಾವಣಾ ಫಲಿತಾಂಶ ಪಾಕಿಸ್ತಾನದಲ್ಲಿ ರಾಜಕೀಯ ಕೋಲಾಹಲ ಸೃಷ್ಟಿ ಮಾಡಿದ್ದು, ಸರ್ಕಾರ ರಚನೆಗೆ ನವಾಜ್‌ ಷರೀಫ್-‌ಬಿಲಾವಲ್‌ ಭುಟ್ಟೋ ಕಸರತ್ತು ಮುಂದುವರೆಸಿದ್ದಾರೆ.

ಪಾಕಿಸ್ತಾನದ ಪಾರ್ಲಿಮೆಂಟ್‌ ಚುನಾವಣೆಯ ಫಲಿತಾಂಶವನ್ನು ಅಲ್ಲಿನ ಚುನಾವಣಾ ಆಯೋಗ ಇನ್ನೂ ಪ್ರಕಟಿಸಿಲ್ಲ. ಆದರೆ ಮಾಜಿ ಪ್ರಧಾನಿಗಳಾದ ನವಾಜ್‌ ಷರೀಫ್ (Nawaz Sharif) ಹಾಗೂ ಇಮ್ರಾನ್‌ ಖಾನ್‌ ಇಬ್ಬರೂ ಗೆಲವು ತಮ್ಮದೇ ಎಂದು ಘೋಷಿಸಿಕೊಂಡಿದ್ದಾರೆ. ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಮೂರನೇ ಎರಡರಷ್ಟು ಬಹುಮತದೊಂದಿಗೆ ಗೆದ್ದಿದೆ.

ಆದರೆ ಇತ್ತ ಪಾಕಿಸ್ತಾನ ಸೇನೆ ಬೆಂಬಲಿತ ಪಿಎಂಎಲ್ಎನ್ ಪಕ್ಷ ಇತರೆ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸುವ ಹರಸಾಹಸ ಮಾಡುತ್ತಿದೆ. ಇದಕ್ಕೆ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಪುತ್ರ ಬಿಲಾವಲ್ ಭುಟ್ಟೋ ಅವರ ಪಕ್ಷದೊಂದಿಗೆ ಸೇರಿ ಸರ್ಕಾರ ಮಾಡುವ ಕಸರತ್ತು ಮಾಡುತ್ತಿದ್ದಾರೆ. ಆದರೆ ಅವರಿಗೆ ಮತ್ತಷ್ಟು ಸದಸ್ಯರ ಬೆಂಬಲದ ಅಗತ್ಯವಿದ್ದು, ಇದಕ್ಕಾಗಿ ಇಮ್ರಾನ್ ಖಾನ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳನ್ನು ಸೆಳೆಯುವ ಕಾರ್ಯ ಮಾಡುತ್ತಿದ್ದಾರೆ ಎನ್ನಲಾಗಿದೆ.

ನವಾಜ್ ಷರೀಫ್ ಅವರ ಸಹೋದರ ಶೆಹಬಾಜ್ ಷರೀಫ್ ಅವರು ಪಾಕಿಸ್ತಾನ ಪೀಪಲ್ಸ್‌ ಪಾರ್ಟಿಯ (ಪಿಪಿಪಿ) ಬಿಲಾವಲ್ ಭುಟ್ಟೋ ಜರ್ದಾರಿ ಅವರೊಂದಿಗೆ ಸಮ್ಮಿಶ್ರ ಸರ್ಕಾರ ರಚಿಸಲು ಕೈಜೋಡಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಬಿಲಾವಲ್‌ ಭುಟ್ಟೋ ಅವರ ಪಿಪಿಪಿ 54 ಸ್ಥಾನಗಳನ್ನು ಗೆದ್ದುಕೊಂಡಿದೆ. ಕ್ರಿಮಿನಲ್ ಅಪರಾಧಗಳ ಕಾರಣದಿಂದ ಗುರುವಾರದ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹಗೊಂಡು ಜೈಲಿನಲ್ಲಿರುವ ಖಾನ್ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳು ಶುಕ್ರವಾರ ನಡೆದ ಮತ ಎಣಿಕೆಯಲ್ಲಿ ಮುನ್ನಡೆ ಸಾಧಿಸಿದ್ದಾರೆ. ಇದು ಮತ್ತೆ ಪ್ರಧಾನಿಯಾಗುವ ನವಾಜ್‌ ಷರೀಫ್ ಅವರ ಯೋಜನೆಗಳನ್ನು ತಲೆಕೆಳಗೆ ಮಾಡಿದೆ. 

ಇಮ್ರಾನ್ ಖಾನ್ ಹತ್ಯೆಗೆ ಸೇನೆ ಸಂಚು?
ಏತನ್ಮಧ್ಯೆ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ (Imran Khan) ಅವರನ್ನು ಕೊಲ್ಲಲು ಪಾಕ್‌ ಮಿಲಿಟರಿ ಸಂಚು ನಡೆಸಿದೆ ಎಂದು ಇಮ್ರಾನ್‌ ಸಹೋದರಿ ಗಂಭೀರ ಆರೋಪ ಮಾಡಿದ್ದು, ಸೇನೆಯು ಅವರನ್ನು ಕೊಲ್ಲಲು ಬಯಸುತ್ತಿರುವ ಕಾರಣ ನಾವು ಅವರ ಸುರಕ್ಷತೆಯ ಬಗ್ಗೆ ಭಯಪಡುತ್ತೇವೆ ಎಂದು ಇಮ್ರಾನ್‌ ಕುಟುಂಬ ತಿಳಿಸಿದೆ.

ಸೇನಾ ನೆಲೆಗಳ ಮೇಲಿನ ದಾಳಿಗೆ ಸಂಬಂಧಿಸಿದ 12 ಪ್ರಕರಣಗಳಲ್ಲಿ ಜೈಲು ಅನುಭವಿಸುತ್ತಿರುವ ಇಮ್ರಾನ್ ಖಾನ್‌ಗೆ ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ಶನಿವಾರ ಜಾಮೀನು ಮಂಜೂರು ಮಾಡಿದೆ. ಖಾನ್ ಅವರು ಇತರ ಹಲವು ಪ್ರಕರಣಗಳಲ್ಲಿ ಅಪರಾಧಿಯಾಗಿರುವುದರಿಂದ ಜೈಲಿನಲ್ಲೇ ಇರುತ್ತಾರೆ.

“ಪಿಟಿಐ ಚುನಾವಣೆಯಲ್ಲಿ ಮೂರನೇ ಎರಡರಷ್ಟು ಬಹುಮತದೊಂದಿಗೆ ಗೆದ್ದಿದೆ. ನಮ್ಮ ಕೈಯಲ್ಲಿ ಫಲಿತಾಂಶಗಳಿವೆ. ಆದರೆ ಇಮ್ರಾನ್ ಖಾನ್ ಅವರ ಜೀವದ ಬಗ್ಗೆ ಭಯಪಡುತ್ತೇವೆ. ಸೇನೆಯು ಅವರನ್ನು ಕೊಲ್ಲಲು ಬಯಸುತ್ತದೆ” ಎಂದು ಅವರ ಸಹೋದರಿ ಅಲೀಮಾ ಖಾನ್ ತಿಳಿಸಿದರು.

ಇಮ್ರಾನ್ ಖಾನ್ ಅವರ ಪಕ್ಷವನ್ನು ಚುನಾವಣೆಯಲ್ಲಿ ನಿರ್ಬಂಧಿಸಲಾಗಿದೆ. ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಕೂಡ ಪಕ್ಷದ ಚಿಹ್ನೆಯಾದ ಕ್ರಿಕೆಟ್ ಬ್ಯಾಟ್ ಅನ್ನು ಬಳಸದಂತೆ ನಿರ್ಬಂಧಿಸಲಾಗಿದೆ. ಆ ಹಿನ್ನಡೆಗಳ ಹೊರತಾಗಿಯೂ ದೇಶದ 266 ರಾಷ್ಟ್ರೀಯ ಅಸೆಂಬ್ಲಿ ಕ್ಷೇತ್ರಗಳಲ್ಲಿ ಖಾನ್ ಅವರ PTI ಬೆಂಬಲಿತ ಅಭ್ಯರ್ಥಿಗಳು 99 ಸ್ಥಾನಗಳನ್ನು ಗೆದ್ದಿದ್ದಾರೆ. ಷರೀಫ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್ ಪಕ್ಷ 71 ಸ್ಥಾನಗಳನ್ನು ಹೊಂದಿದೆ. ಒಬ್ಬ ಅಭ್ಯರ್ಥಿಯ ಹತ್ಯೆಯಿಂದಾಗಿ ಒಂದು ಕ್ಷೇತ್ರದಲ್ಲಿ ಚುನಾವಣೆಯನ್ನು ಮುಂದೂಡಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com