ಮಾಲೆ: ಮಾಲ್ಡೀವ್ಸ್ ನಿಂದ ಮಾರ್ಚ್ 15ರೊಳಗೆ ಭಾರತ ತನ್ನ ಸೇನೆಯನ್ನು ವಾಪಸ್ ಕರೆಯಿಸಿಕೊಳ್ಳಬೇಕು ಎಂದು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝಿ ಕೋರಿರುವುದಾಗಿ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ಎರಡು ತಿಂಗಳ ಹಿಂದೆಯೇ ಮುಯಿಝಿ ಈ ಕುರಿತು ಪ್ರಸ್ತಾಪಿಸಿದ್ದರು ಎನ್ನಲಾಗಿದೆ.
ಇತ್ತೀಚಿನ ಸರ್ಕಾರಿ ಅಂಕಿಅಂಶಗಳ ಪ್ರಕಾರ, ಮಾಲ್ಡೀವ್ಸ್‌ನಲ್ಲಿ 88 ಭಾರತೀಯ ಸೇನಾ ಸಿಬ್ಬಂದಿ ಇದ್ದಾರೆ. ಮಾರ್ಚ್ 15 ರೊಳಗೆ ತನ್ನ ಮಿಲಿಟರಿ ಸಿಬ್ಬಂದಿಯನ್ನು ಹಿಂತೆಗೆದುಕೊಳ್ಳುವಂತೆ ಅಧ್ಯಕ್ಷ ಮುಯಿಝು ಭಾರತವನ್ನು ಔಪಚಾರಿಕವಾಗಿ ಕೇಳಿಕೊಂಡಿದ್ದಾರೆ ಎಂದು ಅಧ್ಯಕ್ಷರ ಕಚೇರಿಯ ಸಾರ್ವಜನಿಕ ನೀತಿ ಕಾರ್ಯದರ್ಶಿ ಅಬ್ದುಲ್ಲಾ ನಜೀಮ್ ಇಬ್ರಾಹಿಂ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು ಎಂದು ಸನ್ ಆನ್ ಲೈನ್ ಪತ್ರಿಕೆ ವರದಿ ಮಾಡಿದೆ.
"ಭಾರತೀಯ ಸೇನಾ ಸಿಬ್ಬಂದಿ ಮಾಲ್ಡೀವ್ಸ್‌ನಲ್ಲಿ ಉಳಿಯಲು ಸಾಧ್ಯವಿಲ್ಲ. ಇದು ಅಧ್ಯಕ್ಷ ಡಾ. ಮೊಹಮದ್ ಮುಯಿಝು ಅವರ ಆಡಳಿತದ ನೀತಿಯಾಗಿದೆ ಎಂದು ಅವರು ಹೇಳಿದ್ದಾರೆ. ದ್ವೀಪರಾಷ್ಟ್ರದಿಂದ ಸೇನೆ ಹಿಂತೆಗೆದುಕೊಳ್ಳುವ ಬಗ್ಗೆ ಮಾತುಕತೆ ನಡೆಸಲು ಭಾರತ- ಮಾಲ್ಡೀವ್ಸ್ ಉನ್ನತ ಮಟ್ಟದ ಸಮಿತಿ ರಚಿಸಿತ್ತು. ಮಾಲೆಯಲ್ಲಿರುವ ವಿದೇಶಾಂಗ ಸಚಿವಾಲಯದ ಪ್ರಧಾನ ಕಛೇರಿಯಲ್ಲಿ ಭಾನುವಾರ ಬೆಳಗ್ಗೆ ಸಮಿತಿ ಸಭೆ ನಡೆದಿದ್ದು, ಭಾರತದ ಹೈಕಮಿಷನರ್ ಮುನು ಮಹಾವರ್ ಕೂಡ ಭಾಗವಹಿಸಿದ್ದರು ಎಂದು ವರದಿ ತಿಳಿಸಿದೆ.
ನಜೀಮ್ ಸಭೆ ನಡೆದಿರುವುದನ್ನು ದೃಢಪಡಿಸಿದ್ದು, ಭಾರತ ಮಾರ್ಚ್ 15 ರೊಳಗೆ ತನ್ನ ಸೇನೆ ವಾಪಾಸ್ ಕರೆಯಿಸಿಕೊಳ್ಳಬೇಕೆಂದು ಕೋರುವುದು ಸಭೆಯ ಕಾರ್ಯಸೂಚಿಯಾಗಿತ್ತು ಎಂದು ತಿಳಿಸಿದರು. ಮಾಧ್ಯಮ ವರದಿ ಕುರಿತು ಭಾರತ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಲಕ್ಷ್ಮದ್ವೀಪ ಭೇಟಿ ಹಾಗೂ ಭಾರತ ಕುರಿತು ಮಾಲ್ಡೀವ್ಸ್ ಸರಕ್ರಾದ ಮೂವರು ಸಚಿವರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಇದು ಉಭಯ ದೇಶಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿತ್ತು. ಈ ಬೆಳವಣಿಗೆ ನಡುವೆ ಈಗ ಮಾಲ್ಡೀವ್ಸ್ ಸರ್ಕಾರ, ದ್ವೀಪರಾಷ್ಟ್ರದಿಂದ ಸೇನೆ ವಾಪಸಾತಿಗೆ ಭಾರತವನ್ನು ಕೋರಿದೆ.
Advertisement