
ಪ್ಯಾರಿಸ್: ಒಲಿಂಪಿಕ್ಸ್ 2024 ಗೆ ವಿದ್ಯುಕ್ತ ಚಾಲನೆ ಸಿಗುವುದಕ್ಕೂ ಮುನ್ನ ಫ್ರಾನ್ಸ್ ನ ಹೈ-ಸ್ಪೀಡ್ ರೈಲು ಜಾಲದ ಮೇಲೆ ದಾಳಿ ನಡೆದಿದೆ.
ರೈಲು ಜಾಲದ ಮೇಲೆ ದಾಳಿಗಳು ಮತ್ತು ಇತರ 'ದುರುದ್ದೇಶಪೂರಿತ ಕೃತ್ಯಗಳಿಂದಾಗಿ ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು ಎಂದು ದೇಶದ ರೈಲು ವ್ಯವಸ್ಥೆ ನಿರ್ವಹಿಸುವ ಇಲಾಖೆ ತಿಳಿಸಿದೆ.
ದೇಶದ ಪಶ್ಚಿಮ, ಉತ್ತರ ಹಾಗೂ ಪೂರ್ವ ಭಾಗಗಳ ಟಿಜಿವಿ ಹೈಸ್ಪೀಡ್ ರೈಲು ನೆಟ್ವರ್ಕ್ ವ್ಯವಸ್ಥೆಗೆ ಅಡಚಣೆ ಉಂಟಾಗಿದ್ದು, ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.
ಈ ಕೃತ್ಯದ ಹಿಂದೆ 'ಸಂಯೋಜಿತ ದುರುದ್ದೇಶಪೂರಿತ ಯೋಜನೆಗಳಿದ್ದು ಕಳೆದ ರಾತ್ರಿ ಹಲವಾರು TGV ಲೈನ್‌ಗಳನ್ನು ಗುರಿಯಾಗಿಸಿಕೊಳ್ಳಲಾಗಿತ್ತು, ಫ್ರಾನ್ಸ್ ನ ಜನತೆಗೆ ಅನಾನುಕೂಲ ಉಂಟು ಮಾಡಿರುವ ಕ್ರಿಮಿನಲ್ ಕ್ರಮಗಳನ್ನು ನಾನು ಬಲವಾಗಿ ಖಂಡಿಸುತ್ತೇನೆ. ಟ್ರಾಫಿಕ್ ಸ್ಥಿತಿಯನ್ನು ಸಾಧ್ಯವಾದಷ್ಟು ಬೇಗ ಪುನಃಸ್ಥಾಪಿಸಿದ #SNCF ತಂಡಗಳಿಗೆ ದೊಡ್ಡ ಧನ್ಯವಾದಗಳು,' ಎಂದು ದೇಶದ ಸಾರಿಗೆ ಸಚಿವ ಪ್ಯಾಟ್ರಿಸ್ ವರ್ಗ್ರಿಯೆಟ್ ಎಕ್ಸ್‌ನಲ್ಲಿ ಹೇಳಿದ್ದಾರೆ.
ದೇಶದ ಕ್ರೀಡಾ ಸಚಿವ ಅಮೆಲಿ ಔಡಿಯಾ-ಕ್ಯಾಸ್ಟೆರಾ ದಾಳಿಯನ್ನು ಖಂಡಿಸಿದ್ದು 'ಕ್ರೀಡಾಕೂಟದ ವಿರುದ್ಧದ ಕೃತ್ಯ ಫ್ರಾನ್ಸ್ ವಿರುದ್ಧದ ಕೃತ್ಯವಾಗಿದೆ. ನಿಮ್ಮ ದೇಶದ ವಿರುದ್ಧವಾದ ಕೃತ್ಯವಾಗಿದೆ ಎಂದು ಹೇಳಿದ್ದಾರೆ.
ಪ್ರಯಾಣಿಕರು, ಒಲಂಪಿಕ್ ಅಥ್ಲೀಟ್‌ಗಳು ಮತ್ತು ಸಾರ್ವಜನಿಕರ ಮೇಲೆ ಈ ಕೃತ್ಯದಿಂದ ಉಂಟಾದ ಪರಿಣಾಮವನ್ನು ಪರಿಶೀಲಿಸಲಾಗುತ್ತಿದೆ ಮತ್ತು 'ಸ್ಪರ್ಧೆ ನಡೆಯುತ್ತಿರುವ ಪ್ರದೇಶಗಳಿಗೆ ಎಲ್ಲಾ ನಿಯೋಗಗಳ ಸುಗಮ ಸಾರಿಗೆ' ಭರವಸೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಅಟ್ಲಾಂಟಿಕ್, ಉತ್ತರ ಮತ್ತು ಪೂರ್ವ ಪ್ರದೇಶದಲ್ಲಿ ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ ಎಂದು ರೈಲು ನಿರ್ವಾಹಕ ಎಸ್‌ಎನ್‌ಸಿಎಫ್ ತಿಳಿಸಿದ್ದಾರೆ.
Advertisement