
ಕಠ್ಮಂಡು: ನೇಪಾಳದ ಖ್ಯಾತ ಪರ್ವತಾರೋಹಿ ಕಮಿ ರೀಟಾ ಶೆರ್ಪಾ ಬರೊಬ್ಬರಿ 29ನೇ ಬಾರಿಗೆ ಮೌಂಟ್ ಎವರೆಸ್ಟ್ ಏರಿ ತನ್ನದೇ ದಾಖಲೆಯನ್ನು ಮುರಿದಿದ್ದಾರೆ.
ಹೌದು.. ವಿಶ್ವದ ಅತಿ ಎತ್ತರದ ಮೌಂಟ್ ಎವರೆಸ್ಟ್ ಶಿಖರವನ್ನುನೇಪಾಳದ ಹಿರಿಯ ಪರ್ವತಾರೋಹಿ ಕಮಿ ರಿಟಾ ಶೆರ್ಪಾ ಅವರು 29ನೇ ಬಾರಿಗೆ ಏರುವ ಮೂಲಕ ಭಾನುವಾರ ತಮ್ಮದೇ ದಾಖಲೆಯನ್ನು ಮುರಿದು ಹೊಸ ಇತಿಹಾಸ ನಿರ್ಮಿಸಿದ್ದಾರೆ.
54 ವರ್ಷ ವಯಸ್ಸಿನ ಕಾಮಿ ಅವರು ನೇಪಾಳದ ಸ್ಥಳೀಯ ಕಾಲಮಾನ ಬೆಳಿಗ್ಗೆ 7.25 ಗಂಟೆಗೆ, 8,849 ಮೀಟರ್ ಎತ್ತರದ ಶಿಖರವನ್ನು ಏರಿ ಈ ದಾಖಲೆ ನಿರ್ಮಿಸಿದ್ದಾರೆ ಎಂದು ನೇಪಾಳ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ರಾಕೇಶ್ ಗುರೂಂಗ್ ತಿಳಿಸಿದ್ದಾರೆ.
ಮೂಲಗಳ ಪ್ರಕಾರ, Seven Summit Treks ಸಂಸ್ಥೆ ಆಯೋಜಿಸಿದ್ದ ಈ ಪರ್ವತಾರೋಹಣದಲ್ಲಿ ಕಮಿ ರಿಟಾ ಶೆರ್ಪಾ ಸೇರಿದಂತೆ ಒಟ್ಟು 20 ಮಂದಿ ಪರ್ವತಾರೋಹಿಗಳು ಪಾಲ್ಗೊಂಡಿದ್ದರು. ಅಮೆರಿಕ, ಕೆನಡಾ, ಕಜಕಿಸ್ತಾನದ ಪರ್ವತಾರೋಹಿಗಳ ಜೊತೆಗೆ ನೇಪಾಳದವರೇ ಆದ 13 ಮಂದಿ ತಂಡದಲ್ಲಿದ್ದರು. ಭಾನುವಾರ ಈ ತಂಡ ಯಶಸ್ವಿಯಾಗಿ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದೆ.
ಇನ್ನು ಕಮಿ ರಿಟಾ ಶೆರ್ಪಾ ಅವರು ಮೌಂಟ್ ಎವರೆಸ್ಟ್ ಶಿಖರವನ್ನು ಮೊದಲ ಬಾರಿಗೆ 1994ರಲ್ಲಿ ಏರಿದ್ದರು. ಅಂದಿನಿಂದ ಇಂದಿನವರೆಗೂ ಅವರು ಬರೊಬ್ಬರಿ 29 ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ್ದಾರೆ. ಕಳೆದ ವರ್ಷ ಒಂದೇ ಋತುವಿನಲ್ಲಿ ಸತತವಾಗಿ ಎರಡು ಬಾರಿ ಶಿಖರವನ್ನು ಏರಿದ್ದರು. ಈಗ 29ನೇ ಬಾರಿಗೆ ಶಿಖರ ಏರುವ ಮೂಲಕ ಗರಿಷ್ಠ ಬಾರಿ ಶಿಖರವನ್ನು ಏರಿದ ದಾಖಲೆಯನ್ನು ಬರೆದಿದ್ದಾರೆ.
ಅಂದಹಾಗೆ ಕಮಿ ರಿಟಾ ಶೆರ್ಪಾ ಅವರು ‘ಸೆವೆನ್ ಸಮಿತ್ ಟ್ರೆಕ್ಸ್’ ಸಂಸ್ಥೆಯ ಹಿರಿಯ ಗೈಡ್ ಕೂಡ ಆಗಿದ್ದು, 1970ರ ಜನವರಿ 17ರಂದು ಜನಿಸಿದ ಅವರು, ಪರ್ವತಾರೋಹಣದ ಪ್ರಯಾಣವನ್ನು 1992ರಲ್ಲಿ ಆರಂಭಿಸಿದ್ದರು. ಕಮಿ ರಿಟಾ ಶೆರ್ಪಾ ಮೌಂಟ್ ಎವರೆಸ್ಟ್ ಅಲ್ಲದೆ ಅವರು ಮೌಂಟ್ ಕೆ2, ಚೊ ಒಯು, ಲೋತ್ಸೆ ಮತ್ತು ಮನಾಸ್ಲು ಶಿಖರಗಳನ್ನೂ ಯಶಸ್ವಿಯಾಗಿ ಏರಿದ್ದಾರೆ.
Advertisement