
ಯುನೈಟೆಡ್ ನೇಷನ್ಸ್: ಗಾಜಾದಲ್ಲಿ ಕೆಲಸ ಮಾಡುತ್ತಿದ್ದ ವಿಶ್ವಸಂಸ್ಥೆಯ ಭಾರತೀಯ ಸಿಬ್ಬಂದಿಯೊಬ್ಬರು ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ರಫಾದಲ್ಲಿ ಭಾರತೀಯ ಮೂಲದ ವಿಶ್ವಸಂಸ್ಥೆಯ ಸಿಬ್ಬಂದಿ ಪ್ರಯಾಣಿಸುತ್ತಿದ್ದ ವಾಹನದ ಮೇಲೆ ದಾಳಿ ನಡೆಸಲಾಗಿದೆ. ಮೃತ ಸಿಬ್ಬಂದಿ ವಿಶ್ವಸಂಸ್ಥೆಯ ಸುರಕ್ಷತೆ ಮತ್ತು ಭದ್ರತಾ ಇಲಾಖೆಯ(DSS) ಸದಸ್ಯರಾಗಿದ್ದರು. ಮೃತರ ಗುರುತು ಇನ್ನೂ ಬಹಿರಂಗಪಡಿಸಲಾಗಿಲ್ಲವಾದರೂ ಅವರು ಭಾರತೀಯ ಮೂಲದವರು ಮತ್ತು ಭಾರತೀಯ ಸೇನೆಯ ಮಾಜಿ ಸಿಬ್ಬಂದಿ ಎಂದು ಮೂಲಗಳು ತಿಳಿಸಿವೆ.
ಅಕ್ಟೋಬರ್ 7 ರ ಭಯೋತ್ಪಾದಕ ದಾಳಿಯ ನಂತರ ಇಸ್ರೇಲ್-ಹಮಾಸ್ ಸಂಘರ್ಷ ಆರಂಭವಾದ ನಂತರ ರಫಾದಲ್ಲಿ ಮೃತಪಟ್ಟ ಮೊದಲ ಭಾರತೀಯ ಸಿಬ್ಬಂದಿ ಇವರಾಗಿದ್ದಾರೆ.
ರಫಾದ ಯುರೋಪಿಯನ್ ಆಸ್ಪತ್ರೆಗೆ ಪ್ರಯಾಣಿಸುತ್ತಿದ್ದಾಗ ವಿಶ್ವಸಂಸ್ಥೆಯ ಸಿಬ್ಬಂದಿ ಇದ್ದ ವಾಹನದ ಮೇಲೆ ದಾಳಿ ನಡೆದಿದೆ. ದಾಳಿಯಲ್ಲಿ ಅವರ ಜತೆಗಿದ್ದ ಮತ್ತೊಬ್ಬ ಡಿಎಸ್ಎಸ್ ಸಿಬ್ಬಂದಿ ಗಾಯಗೊಂಡಿದ್ದಾರೆʼʼ ಎಂದು ವರದಿಯೊಂದು ತಿಳಿಸಿದೆ.
ವಿಶ್ವಸಂಸ್ಥೆಯ ಸುರಕ್ಷತಾ ಮತ್ತು ಭದ್ರತಾ ಇಲಾಖೆಯ ಸಿಬ್ಬಂದಿಯೊಬ್ಬರು ಸೋಮವಾರ ಬೆಳಗ್ಗೆ ರಾಫಾದ ಯುರೋಪಿಯನ್ ಆಸ್ಪತ್ರೆಗೆ ಪ್ರಯಾಣಿಸುತ್ತಿದ್ದಾಗ ಮೃತಪಟ್ಟಿದ್ದಾರೆ ಎನ್ನುವ ವಿಚಾರ ತಿಳಿದು ತೀವ್ರ ದುಃಖವಾಗಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ಎಕ್ಸ್ ನಲ್ಲಿ ಆಘಾತ ವ್ಯಕ್ತಪಡಿಸಿದ್ದಾರೆ.
Advertisement