
ನ್ಯೂಯಾರ್ಕ್: ಹಷ್ ಮನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ದೋಷಿ ಎಂದು ನ್ಯೂಯಾರ್ಕ್ ನ್ಯಾಯಾಲಯ ಘೋಷಿಸಿದೆ. ಅಪರಾಧ ಪ್ರಕರಣವೊಂದರಲ್ಲಿ ಶಿಕ್ಷೆಗೊಳಗಾದ ಮೊದಲ ಅಮೆರಿಕಾ ಮಾಜಿ ಅಧ್ಯಕ್ಷ ಎಂಬ ಅಪಖ್ಯಾತಿಗೆ ಟ್ರಂಪ್ ಒಳಗಾಗಿದ್ದಾರೆ.
ಅಮೆರಿಕದಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿರುವಾಗ ಡೊನಾಲ್ಡ್ ಟ್ರಂಪ್ ಅಪರಾಧಿ ಎಂದು ಸಾಬೀತಾಗಿದ್ದು, ಈ ಮೂಲಕ ಭಾರೀ ಮುಖಭಂಗ ಅನುಭವಿಸಿದ್ದಾರೆ.
ನ್ಯೂಯಾರ್ಕ್ ನ್ಯಾಯಾಲಯದ ನ್ಯಾಯಾಧೀಶರು ಡೊನಾಲ್ಡ್ ಟ್ರಂಪ್ ಅವರನ್ನು ಪೋರ್ನ್ ತಾರೆ ಸ್ಟಾರ್ಮಿ ಡೇನಿಯಲ್ಸ್ ಅವರೊಂದಿಗೆ ಸಂಬಂಧ ಮರೆಮಾಚಲು ಹಣ ನೀಡಿದ ಪ್ರಕರಣ ಸೇರಿದಂತೆ 34 ಪ್ರಕರಣಗಳಲ್ಲಿ ಅಪರಾಧಿ ಎಂದು ತೀರ್ಪು ನೀಡಿದ್ದಾರೆ.
12 ಸದಸ್ಯರ ತೀರ್ಪುಗಾರರು ಎರಡು ದಿನಗಳ ಕಾಲ 11 ಗಂಟೆಗಳಿಗೂ ಹೆಚ್ಚು ಕಾಲ ಪ್ರಕರಣದ ಬಗ್ಗೆ ಚರ್ಚಿಸಿ ಸರ್ವಾನುಮತದ ತೀರ್ಪನ್ನು ಪ್ರಕಟಿಸಿದ್ದಾರೆ.
ಪ್ರತಿ ಪ್ರಕರಕ್ಕೂ 4 ವರ್ಷಗಳ ಕಾಲ ಶಿಕ್ಷೆಯಾಗುವ ಸಾಧ್ಯತೆಯಿದೆ. ಆದರೆ. ಶಿಕ್ಷೆಯ ವಿರುದ್ಧ ಟ್ರಂಪ್ ಮೇಲ್ಪನವಿ ಸಲ್ಲಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಜಾಮೀನು ಇಲ್ಲದೆ ಬಿಡುಗಡೆಯಾಗಿರುವ 77 ವರ್ಷದ ರಿಪಬ್ಲಿಕನ್ ನಾಯಕ ಈಗ ಅಪರಾಧಿಯಾಗಿದ್ದಾರೆ. ಆದಾಗ್ಯೂ, ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ಸೆಣಸಲು ಟ್ರಂಪ್‌ಗೆ ಯಾವುದೇ ರೀತಿಯ ನಿರ್ಬಂಧವಿಲ್ಲ. ಅಲ್ಲದೆ ಟ್ರಂಪ್ ಸದ್ಯಕ್ಕೆ ಜೈಲಿಗೆ ಹೋಗುವ ಸಾಧ್ಯತೆಯಿಲ್ಲ ಎನ್ನಲಾಗುತ್ತಿದೆ.
ಆರೋಪದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಟ್ರಂಪ್, ನಾನು ಈ ಪ್ರಕರಣದಲ್ಲಿ ಅಮಾಯಕನಾಗಿದ್ದೇನೆ. ನಿಜವಾದ ತೀರ್ಪು ಮತದಾರರಿಂದ ಬರಲಿದೆ. ಈ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲಾಗಿದ್ದು, ನಾನು ಈ ತೀರ್ಪನ್ನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
ಅಧ್ಯಕ್ಷ ಜೋ ಬೈಡನ್ ಮಾತನಾಡಿ, ಯಾರೂ ಕಾನೂನಿಗಿಂತ ಮೇಲಲ್ಲ ಎಂಬುದನ್ನು ತೀರ್ಪು ತೋರಿಸಿದೆ. ನಮ್ಮ ಪ್ರಜಾಪ್ರಭುತ್ವಕ್ಕೆ ಟ್ರಂಪ್ ಒಡ್ಡುವ ಬೆದರಿಕೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದ್ದಾರೆ.
ಸ್ಟಾರ್ಮಿ ಜೊತೆಗೆ 2006 ರಲ್ಲಿ ಟ್ರಂಪ್ ಲೈಂಗಿಕ ಸಂಬಂಧ ಹೊಂದಿದ್ದರು. ಈ ಸಂಬಂಧ ಮೌನವಾಗಿರಲು ಸ್ಟಾರ್ಮಿ ಅವರಿಗೆ ಟ್ರಂಪ್ ತಮ್ಮ ವಕೀಲರ ಮೂಲಕ ಹಣ ನೀಡಿದ್ದರು ಎಂಬ ಆರೋಪ ಇತ್ತು. ಈ ಸಂಬಂಧ ವಿಚಾರಣೆ ಮಾಜಿ ಅಧ್ಯಕ್ಷ ಎದುರಿಸುತ್ತಿದ್ದರು.
Advertisement