ಟೆಹರಾನ್: ಇರಾನ್ ನಲ್ಲಿ ನಡೆಯುತ್ತಿರುವ ಹಿಜಾಬ್ ವಿರೋಧಿ ಪ್ರತಿಭಟನೆ ಇದೀಗ ಮತ್ತೊಂದು ಹಂತಕ್ಕೇರಿದ್ದು, 'ಕೂದಲು ಕಾಣುತ್ತಿದೆ ಮುಚ್ಚಿಕೋ' ಎಂದು ನೈತಿಕ ಪೊಲೀಸರು ಥಳಿಸಿದ್ದಕ್ಕೆ ವಿಶ್ವವಿದ್ಯಾಲಯ ವಿದ್ಯಾರ್ಥಿನಿಯೊಬ್ಬಳು ಸಾರ್ವಜನಿಕವಾಗಿ ಬಟ್ಟೆಯನ್ನೇ ಬಿಚ್ಚಿ ನಿಂತು ಪ್ರತಿಭಟಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.
ಹೌದು.. ಮಹಿಳೆಯರ ಉಡುಪುಗಳ ಬಗ್ಗೆ ಕಠಿಣ ಕಾನೂನುಗಳಿರುವ ದೇಶ ಎಂದರೆ ಅದು ಇರಾನ್. ಇರಾನ್‌ನಲ್ಲಿ, ಮಹಿಳೆಯರು ತಲೆಗೆ ಸ್ಕಾರ್ಫ್ ಮತ್ತು ಮೈ ಪೂರ್ತಿ ಮುಚ್ಚುವ ಸಂಪೂರ್ಣ ಸಡಿಲವಾದ ಬಟ್ಟೆಗಳನ್ನು ಧರಿಸಬೇಕು.
ಇಷ್ಟೆಲ್ಲಾ ಕಾನೂನು ಇದ್ದರೂ ಮಹಿಳೆಯೊಬ್ಬರು ಕಾನೂನು ಉಲ್ಲಂಘಿಸಿ ಸಾರ್ವಜನಿಕ ಸ್ಥಳದಲ್ಲೇ ಬಟ್ಟೆ ಬಿಚ್ಚಿ ಪ್ರತಿಭಟನೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಆ ಮೂಲಕ ಇರಾನ್ ನಲ್ಲಿ ಮತ್ತೊಂದು ಸುತ್ತು ಹಿಜಾಬ್ ವಿರೋಧಿ ಪ್ರತಿಭಟನೆಗೆ ನಾಂದಿ ಹಾಡಿದೆ.
ಇರಾನ್ ರಾಜಧಾನಿ ಟೆಹ್ರಾನ್ ನ ಇಸ್ಲಾಮಿಕ್ ಆಜಾದ್ ವಿಶ್ವವಿದ್ಯಾಲಯದಲ್ಲಿ ಈ ಘಟನೆ ನಡೆದಿದ್ದು, ವಿವಿ ಆವರಣದಲ್ಲಿ ವಿದ್ಯಾರ್ಥಿನಿಯೊಬ್ಬಳು ತಲೆಗೆ ಸ್ಕಾರ್ಫ್ ಸರಿಯಾಗಿ ಧರಿಸಿಲ್ಲ ಎಂದು ಸ್ಥಳದಲ್ಲಿದ್ದ ನೈತಿಕ ಪೊಲೀಸರು ಆಕೆ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಆಕೆಯ ಹಣೆಗೆ ಬಲವಾದ ಪೆಟ್ಟು ಬಿದ್ದಿದ್ದು, ಇದರಿಂದ ಆಕ್ರೋಶಗೊಂಡ ಆಕೆ ನೋಡ ನೋಡುತ್ತಲೇ ಘೋಷಣೆಗಳನ್ನು ಕೂಗುತ್ತಾ ತಾನು ಧರಿಸಿದ್ದ ಬಟ್ಟೆಗಳನ್ನು ಬಿಚ್ಚಿ ಪ್ರತಿಭಟನೆ ನಡೆಸಿದ್ದಾಳೆ. ಅಲ್ಲದೆ ಅರೆನಗ್ನಾವಸ್ಥೆಯಲ್ಲೇ ಅಲ್ಲಿ ತಿರುಗಾಡಿದ್ದು, ಆಕೆಯನ್ನು ನೈತಿಕ ಪೊಲೀಸರು ಥಳಿಸಿ ಬಂಧಿಸಿದ್ದಾರೆ.
2022ರಿಂದಲೂ ಪ್ರತಿಭಟನೆ
ಇನ್ನು ಇರಾನ್ ನಲ್ಲಿ ಮಹಿಳೆಯರ ವಸ್ತ್ರ ಸಂಹಿತೆ ವಿಚಾರವಾಗಿ 2022ರಲ್ಲಿ ವ್ಯಾಪಕ ಪ್ರತಿಭಟನೆ ನಡೆದಿತ್ತು. ಅಂದು ಇಂತಹುದೇ ವಿಚಾರವಾಗಿ ನೈತಿಕ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಮಹ್ಸಾ ಅಮಿನಿಯ ಜೈಲಿನಲ್ಲೇ ನಿಗೂಢವಾಗಿ ಸಾವನ್ನಪ್ಪಿದ್ದಳು. ಈ ಸಾವನ್ನು ವಿರೋಧಿಸಿ ಇರಾನ್ ನಾದ್ಯಂತ ವ್ಯಾಪಕ ಪ್ರತಿಭಟನೆ ನಡೆದಿತ್ತು.
ಈ ಪ್ರತಿಭಟನೆಯ ವೇಳೆ ಮಹಿಳೆಯರು ತಮ್ಮ ಹಿಜಾಬ್‌ಗಳನ್ನು ತೆಗೆದಿದ್ದಲ್ಲದೆ, ಅವುಗಳನ್ನು ಸುಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಈ ಚಳುವಳಿ ಶಾಂತವಾಯಿತು. ಈ ಚಳವಳಿಯಲ್ಲಿ 551 ಪ್ರತಿಭಟನಾಕಾರರು ಕೊಲ್ಲಲ್ಪಟ್ಟರು ಮತ್ತು ಸಾವಿರಾರು ಮಂದಿಯನ್ನು ಬಂಧಿಸಲಾಗಿತ್ತು.
Advertisement