ಒಟ್ಟಾವ: ಕೆನಡಾದ ಬ್ರಾಂಪ್ಟನ್ ನಲ್ಲಿ ಹಿಂದೂ ದೇವಾಲಯದ ಎದುರು ನಡೆದ ಖಲಿಸ್ತಾನಿ ಪರ ಪ್ರತಿಭಟನೆಯಲ್ಲಿ ಪಾಲ್ಗೊಂಡ ಆರೋಪದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರನ್ನು ಕೆನಡಾ ಸರ್ಕಾರ ಅಮಾನತು ಮಾಡಿದೆ.
ಬ್ರಾಂಪ್ಟನ್‌ನಲ್ಲಿರುವ ಹಿಂದೂ ದೇವಾಲಯದ ಹೊರಗೆ ಈ ಪೊಲೀಸ್ ಅಧಿಕಾರಿ ಖಲಿಸ್ತಾನ್ ಪರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಬೆನ್ನಲ್ಲೇ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.
ಅಮಾನತುಗೊಂಡ ಪೀಲ್ ಪ್ರಾದೇಶಿಕ ಪೊಲೀಸ್ ಅಧಿಕಾರಿಯನ್ನು ಹರೀಂದರ್ ಸೋಹಿ ಎಂದು ಗುರುತಿಸಲಾಗಿದೆ. ಸೋಹಿ ಖಲಿಸ್ತಾನ್ ಧ್ವಜವನ್ನು ಹಿಡಿದುಕೊಂಡಿರುವುದು ಮತ್ತು ಇತರರು ಭಾರತ ವಿರೋಧಿ ಘೋಷಣೆಗಳನ್ನು ಕೂಗುತ್ತಿರುವ ವಿಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಸಮುದಾಯದ ಸುರಕ್ಷತೆ ಮತ್ತು ಪೊಲೀಸ್ ಕಾಯಿದೆಯ ಪ್ರಕಾರ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆಯ ಘಟನಾವಳಿಗಳ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ತನಿಖೆ ಪೂರ್ಣಗೊಳ್ಳುವವರೆಗೆ ಮಕ್ಕಶ್ಚು ಮಾಹಿತಿಗಳನ್ನು ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಭಾರತೀಯ ಕಾನ್ಸುಲರ್ ಅಧಿಕಾರಿಗಳು ಭಾನುವಾರ ಹಿಂದೂ ಸಭಾ ಮಂದಿರ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹಿಂಸಾಚಾರ ನಡೆದಿದ್ದು, ಘಟನೆ ಬೆನ್ನಲ್ಲೇ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೀಲ್ ಪ್ರಾದೇಶಿಕ ಪೊಲೀಸ್ ಇಲಾಖೆ ಹೇಳಿಕೆ ನೀಡಿದೆ.
ವಿದೇಶಾಂಗ ಇಲಾಖೆ ಖಂಡನೆ
ಇನ್ನು ಘಟನೆಗೆ ಭಾರತದ ವಿದೇಶಾಂಗ ವಕ್ತಾರ ರಣಧೀರ್ ಜೈಸ್ವಾಲ್ ಅವರು ಖಂಡನೆ ವ್ಯಕ್ತಪಡಿಸಲಿದ್ದು, ಉಗ್ರವಾದಿಗಳು ಮತ್ತು ಪ್ರತ್ಯೇತಾವಾದಿಗಳು ನಡೆಸಿದ ಹಿಂಸಾಚಾರವನ್ನು ಭಾರತ ಖಂಡಿಸುತ್ತದೆ ಎಂದು ಹೇಳಿದ್ದಾರೆ.
ಕೆನಡಾ ತನ್ನಲ್ಲಿನ ಎಲ್ಲಾ ಪೂಜಾ ಸ್ಥಳಗಳಗೆ ರಕ್ಷಣೆ ನೀಡಬೇಕು ಹಾಗೂ ಹಿಂಸಾಕೋರರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.
ಕೆನಾಡಾದಲ್ಲಿನ ಭಾರತೀಯರ ಸುರಕ್ಷತೆ ಬಗ್ಗೆ ಭಾರತ ಸರ್ಕಾರಕ್ಕೆ ಕಳವಳವಿದೆ. ಅಲ್ಲಿನ ಭಾರತೀಯ ದೂತಾವಾಸ ಅಧಿಕಾರಿಗಳು ಯಾವುದೇ ಬೆದರಿಕೆ, ಕಿರುಕುಳ, ಹಿಂಸೆಗೆ ಬಗ್ಗದೇ ನಮ್ಮವರಿಗೆ ಕಾನ್ಸುಲರ್ ಸೇವೆ ಒದಗಿಸಲಿದ್ದಾರೆಂದು ಹೇಳಿದರು.
ಈ ದಾಳಿಯನ್ನು ಕೆನಡಾದ ಭಾರತೀಯ ರಾಯಭಾರ ಕಚೇರಿ ಕೂಡ ಕಟುನುಡಿಗಳಲ್ಲಿ ಖಂಡಿಸಿದೆ. ಹಿಂದೂಗಳ ಸಭೆಗೆ ಭಾರತ ವಿರೋಧಿ ಶಕ್ತಿಗಳು ಹಿಂಸಾತ್ಮಕ ರೀತಿಯಲ್ಲಿ ಅಡ್ಡಿಪಡಿಸಿದ್ದು ನಾವು ನೋಡಿದ್ದೇವೆ. ಇಂತಹ ಘಟನೆಗಳು ಕಾರ್ಯಕ್ರಮ ಆಯೋಜಿಸಿದ್ದ ಭಾರತೀಯ ನಾಗರೀಕರ ಸುರಕ್ಷತೆ ಕುರಿತು ಕಳವಳ ಹುಟ್ಟುಹಾಕಿದೆ. ಇದು ಖಂಡನಾರ್ಹ ಎಂದು ಹೇಳಿದೆ.
Advertisement