ನ್ಯೂ ಹ್ಯಾಂಪ್ ಶೈರ್: ಜಗತ್ತಿನಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆ 2024ರ ಮೊದಲ ಫಲಿತಾಂಶ ಪ್ರಕಟವಾಗಿದೆ. ಹೌದು. ಅಮೆರಿಕದ ನ್ಯೂ ಹ್ಯಾಂಪ್‌ಶೈರ್ ರಾಜ್ಯದ ಒಂದು ಸಣ್ಣ ಪಟ್ಟಣವಾದ ಡಿಕ್ಸ್‌ವಿಲ್ಲೆ ನಾಚ್ ನ ಮತದಾನ ಮುಗಿದಿದ್ದು, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಮತ್ತು ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ತಲಾ ಮೂರು ಮತಗಳನ್ನು ಪಡೆದಿದ್ದಾರೆ.
ಡಿಕ್ಸ್‌ವಿಲ್ಲೆ ನಾಚ್ ನಲ್ಲಿ ಆರು ನೋಂದಾಯಿತ ಮತದಾರರು ಮಧ್ಯರಾತ್ರಿಯಲ್ಲಿ ಮತದಾನ ಮಾಡಿದರು. ಇಲ್ಲಿ ಈ ಸಂಪ್ರದಾಯ 1960ಕ್ಕೂ ಹಿಂದಿನಿಂದಲೂ ಮುಂದುವರೆದುಕೊಂಡು ಬಂದಿದೆ.
ಈ ವಿಶಿಷ್ಟ ಮತದಾನದಲ್ಲಿ ಕಮಲಾ ಹ್ಯಾರಿಸ್ ಮತ್ತು ಡೊನಾಲ್ಡ್ ಟ್ರಂಪ್ ಇಬ್ಬರೂ ತಲಾ ಮೂರು ಮತಗಳನ್ನು ಪಡೆದಿದ್ದರಿಂದ ಶ್ವೇತಭವನದ ರೇಸ್ ನಲ್ಲಿ ಉಭಯ ನಾಯಕರಲ್ಲಿ ಪೈಪೋಟಿ ಕಂಡುಬರುತ್ತಿರುವುದನ್ನು ಈ ಮತದಾನ ಪ್ರತಿಬಿಂಬಿಸಿತು. ಗಡಿಯಾರ ಹನ್ನೆರಡು ಹೊಡೆಯುತ್ತಿದ್ದಂತೆ ಮತದಾನದ ಫಲಿತಾಂಶ ಹೊರಬಿದ್ದರು. ಪತ್ರಕರ್ತರು ಈ ಕ್ಷಣಕ್ಕೆ ಸಾಕ್ಷಿಸಿದರು.
100 ಕ್ಕಿಂತ ಕಡಿಮೆ ನಿವಾಸಿಗಳನ್ನು ಹೊಂದಿರುವ ಮುನ್ಸಿಪಾಲಿಟಿಗಳಲ್ಲಿ ಮಧ್ಯರಾತ್ರಿಯಲ್ಲಿ ಮತದಾನ ಕೇಂದ್ರಗಳನ್ನು ತೆರೆಯಲು ಮತ್ತು ಎಲ್ಲಾ ನೋಂದಾಯಿತ ಮತದಾರರು ಮತದಾನ ಮಾಡಿದ ಅವುಗಳನ್ನು ಮುಚ್ಚಲು ನ್ಯೂ ಹ್ಯಾಂಪ್‌ಶೈರ್‌ನ ಚುನಾವಣಾ ಕಾನೂನುಗಳು ಅನುವು ಮಾಡಿಕೊಡುತ್ತದೆ.
ಡಿಕ್ಸ್‌ವಿಲ್ಲೆ ನಾಚ್‌ನ ನಿವಾಸಿಗಳು 2020 ರ ಚುನಾವಣೆಯಲ್ಲಿ ಜೋ ಬೈಡನ್ ಸರ್ವಾನುಮತದಿಂದ ಮತ ಹಾಕಿದ್ದರು. ಈ ಮೂಲಕ ಬೈಡನ್ ಸಂಪ್ರದಾಯ ಪ್ರಾರಂಭವಾದಾಗಿನಿಂದ ಎಲ್ಲಾ ಮತಗಳನ್ನು ಪಡೆದ ಎರಡನೇ ಅಭ್ಯರ್ಥಿಯಾಗಿ ಇತಿಹಾಸ ನಿರ್ಮಿಸಿದ್ದರು.
Advertisement