ಕ್ಯಾನ್‌ಬೆರಾ: ಅಮೆರಿಕದ ಅಧ್ಯಕ್ಷೀಯ ಚುನಾವಣೆ ಅಂತಿಮ ಘಟ್ಟ ತಲುಪಿದ್ದು, ಭಾರತೀಯ ಕಾಲಮಾನ ಪ್ರಕಾರ ಮಂಗಳವಾರ ಸಂಜೆ 4ಕ್ಕೆ ಕೊನೆಯ ಮತದಾನ ಆರಂಭಗೊಂಡಿದೆ. ಇದು ಬುಧವಾರ ಬೆಳಗ್ಗೆ 4-30ಕ್ಕೆ ಮುಗಿಯಲಿದ್ದು, ನಾಳೆ ಬೆಳಗ್ಗೆ 11-30ಕ್ಕೆ ಕೊನೆಯ ಹಂತದ ಮತದಾನ ಪೂರ್ಣಗೊಳ್ಳಲಿದೆ.
ಈ ಹಿಂದೆ ನಡೆದಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾನ ನಡೆದ ದಿನ ರಾತ್ರಿ ಅಥವಾ ಮರು ದಿನ ಬೆಳಗ್ಗೆ ವಿಜೇತ ಅಭ್ಯರ್ಥಿಯ ಹೆಸರು ಘೋಷಣೆಯಾಗಿತ್ತು. ಆದರೆ, ಈ ಬಾರಿ ಅಮೆರಿಕದ ಹಲವು ಪ್ರಾಂತ್ಯಗಳಲ್ಲಿ ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಹಾಗೂ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ನಡುವೆ ತೀವ್ರ ಪೈಪೋಟಿ ನಡೆದಿರುವ ಕಾರಣ ಮತ ಎಣಿಕೆ ಪ್ರಕ್ರಿಯೆ ಸ್ವಲ್ವ ಸಮಯ ಹಿಡಿಯುವ ಹಾಗೂ ಗೆಲುವಿನ ಅಂತರ ತೀರಾ ಕಡಿಮೆಯಾದಲ್ಲಿ ಮರು ಎಣಿಕೆಯ ಸಾಧ್ಯತೆಯಿದೆ ಎನ್ನಲಾಗಿದೆ.
ಈ ಮಧ್ಯೆ ಅಮೆರಿಕ ಅಧ್ಯಕ್ಷೀಯ ಚುನಾವಣೆ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ಕಳೆದ ಐದು ಅಧ್ಯಕ್ಷರ ಅವಧಿಯಲ್ಲಿ ಭಾರತ ಅಮೆರಿಕದೊಂದಿಗಿನ ತನ್ನ ಬಾಂಧವ್ಯದಲ್ಲಿ ಸ್ಥಿರವಾದ ಪ್ರಗತಿಯನ್ನು ಕಂಡಿದೆ ಮತ್ತು ಯುಎಸ್ ಚುನಾವಣೆ ಫಲಿತಾಂಶ ಲೆಕ್ಕಿಸದೇ ಅಮೆರಿಕದೊಂದಿಗೆ ಸಂಬಂಧವನ್ನು ಮಾತ್ರ ಬೆಳೆಸಲಾಗುವುದು ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾದ ವಿದೇಶಾಂಗ ವ್ಯವಹಾರಗಳ ಸಚಿವ ಪೆನ್ನಾ ವಾಂಗ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೈಶಂಕರ್, ಯುಎಸ್, ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್‌ಗಳನ್ನು ಒಳಗೊಂಡಿರುವ Quad ಭವಿಷ್ಯದ ಬಗ್ಗೆ ಆಶಾವಾದವನ್ನು ವ್ಯಕ್ತಪಡಿಸಿದರು.
ಅಮೆರಿಕದ 47 ನೇ ಅಧ್ಯಕ್ಷರನ್ನು ಆಯ್ಕೆ ಮಾಡಲು ಲಕ್ಷಾಂತರ ಅಮೆರಿಕನ್ನರು ಮಂಗಳವಾರ ಮತದಾನ ಕೇಂದ್ರಗಳತ್ತ ಸಾಗಿದರು. ಡೆಮಾಕ್ರಟಿಕ್ ಅಭ್ಯರ್ಥಿ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ರಿಪಬ್ಲಿಕನ್ ನಾಯಕ ಮತ್ತು ಮಾಜಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಬ್ಬರದ ಪ್ರಚಾರ ನಡೆಸುವ ಮೂಲಕ ವಿವಿಧ ಮಾಧ್ಯಮಗಳು ನಡೆಸಿದ ಸಮೀಕ್ಷೆಗಳಲ್ಲಿ ಉಭಯ ನಾಯಕರ ನಡುವೆ ತೀವ್ರ ಪೈಪೋಟಿ ಕಂಡುಬರುವ ಸಾಧ್ಯತೆಯಿದೆ.
ಹಿಂದೆ ಅಧ್ಯಕ್ಷರಾಗಿದ್ದ ಟ್ರಂಪ್ ಸೇರಿದಂತೆ ಕಳೆದ ಐದು ಬಾರಿಯ ಅಧ್ಯಕ್ಷರ ಅವಧಿಯಲ್ಲಿ ಅಮೆರಿಕ ಜೊತೆಗಿನ ನಮ್ಮ ಸಂಬಂಧದಲ್ಲಿ ಸ್ಥಿರವಾದ ಪ್ರಗತಿ ನೋಡಿದ್ದೇವೆ. ಹೀಗಾಗಿ ಯಾವುದೇ ತೀರ್ಪು ಬಂದರೂ, ಅಮೆರಿಕದೊಂದಿಗೆ ನಮ್ಮ ಸಂಬಂಧ ಮಾತ್ರ ಬೆಳೆಯುತ್ತದೆ ಎಂಬ ವಿಶ್ವಾಸವಿದೆ ಎಂದು ಜೈಶಂಕರ್ ತಿಳಿಸಿದರು.
ಈ ಮಧ್ಯೆ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ಗೆಲ್ಲಲಿ ಎಂದು ಹಾರೈಸಿ ತಮಿಳುನಾಡಿನ ತುಳಸೇಂದ್ರಪುರದಲ್ಲಿ ವಿಶೇಷ ಪೂಜೆ ನಡೆಯಿತು. ಗ್ರಾಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ಪೂಜೆಯಲ್ಲಿ ಸ್ಥಳೀಯರು ಹಾಗೂ ಕೆಲವು ಪ್ರವಾಸಿಗರು ಪಾಲ್ಗೊಂಡರು. ಕಮಲಾ ಹ್ಯಾರಿಸ್ ಅವರ ಅಜ್ಜ ಪಿ. ವಿ. ಗೋಪಾಲನ್ ( ತಾಯಿ ಡಾ.ಶ್ಯಾಮಲಾ ಗೋಪಾಲನ್ ಅವರ ತಂದೆ) ತುಳಸೇಂದ್ರಪುರ ಗ್ರಾಮದವರು.
Advertisement