ನಮ್ಮ ನಡುವಿನ ನಂಬಿಕೆ ಕೊನೆಗೊಂಡಿದೆ. ಇದು ಯುದ್ಧದ ಸಮಯದಲ್ಲಿ ಒಳ್ಳೆಯದಲ್ಲ ಎಂದು ಹೇಳಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರನ್ನು ವಜಾಗೊಳಿಸಿದ್ದು ವಿದೇಶಾಂಗ ಸಚಿವ ಇಸ್ರೇಲ್ ಕಾಟ್ಜ್ ರಕ್ಷಣಾ ಸಚಿವರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಅದೇ ಸಮಯದಲ್ಲಿ, ಗಿಡಿಯಾನ್ ಸಾರ್ ಈಗ ಇಸ್ರೇಲ್ನ ವಿದೇಶಾಂಗ ಸಚಿವರಾಗಿರುತ್ತಾರೆ. ಮಂಗಳವಾರ ರಾತ್ರಿ 8 ಗಂಟೆಗೆ ನೆತನ್ಯಾಹು ಅವರ ಕಚೇರಿಯಿಂದ ಗ್ಯಾಲಂಟ್ ಅವರಿಗೆ ಪತ್ರವನ್ನು ಹಸ್ತಾಂತರಿಸಲಾಯಿತು. ಈ ಪತ್ರವನ್ನು ಸ್ವೀಕರಿಸಿದ 48 ಗಂಟೆಗಳ ನಂತರ ತಮ್ಮ ಅಧಿಕಾರಾವಧಿ ಕೊನೆಗೊಳ್ಳಲಿದೆ ಎಂದು ಬರೆದಿದ್ದು ರಕ್ಷಣಾ ಸಚಿವರಾಗಿ ನಿಮ್ಮ ಸೇವೆಗೆ ನಾನು ಧನ್ಯವಾದ ಎಂದು ಹೇಳಿದ್ದಾರೆ.
ಗ್ಯಾಲಂಟ್ ಕ್ಯಾಬಿನೆಟ್ ವಿರುದ್ಧ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಯೋವ್ ಗ್ಯಾಲಂಟ್ ಅವರನ್ನು ಹುದ್ದೆಯಿಂದ ತೆಗೆದುಹಾಕುವ ಬಗ್ಗೆ ವೀಡಿಯೊ ಸಂದೇಶದ ಮೂಲಕ ನೆತನ್ಯಾಹು ತಿಳಿಸಿದರು. ಯುದ್ಧದ ಆರಂಭದಲ್ಲಿ, ನಮ್ಮ ನಡುವೆ ನಂಬಿಕೆ ಇತ್ತು. ನಾವು ಒಟ್ಟಿಗೆ ಕೆಲಸ ಮಾಡಿದ್ದೇವೆ. ಆದರೆ ಕಳೆದ ಕೆಲವು ತಿಂಗಳುಗಳಲ್ಲಿ ನಮ್ಮ ನಡುವಿನ ಈ ನಂಬಿಕೆಯು ಕುಸಿಯುತ್ತಿದೆ. ನಾವು ಯುದ್ಧದ ಹಲವು ಅಂಶಗಳಲ್ಲಿ ಪರಸ್ಪರ ಒಮ್ಮತವಿರಲಿಲ್ಲ. ಸಚಿವ ಸಂಪುಟದ ಒಪ್ಪಿಗೆಯಿಲ್ಲದ ಇಂತಹ ನಿರ್ಧಾರಗಳು ಮತ್ತು ಹೇಳಿಕೆಗಳನ್ನು ಅವರು ಹಲವು ಬಾರಿ ನೀಡಿದ್ದಾರೆ ಎಂದು ನೆತನ್ಯಾಹು ಹೇಳಿದರು.
ರಕ್ಷಣಾ ಸಚಿವ ಸ್ಥಾನದಿಂದ ಕೆಳಗಿಳಿದ ನಂತರ, ದೇಶವನ್ನು ರಕ್ಷಿಸುವುದು ನನ್ನ ಜೀವನದ ಗುರಿಯಾಗಿದೆ. "ಇಸ್ರೇಲ್ನ ಭದ್ರತೆ ಯಾವಾಗಲೂ ನನ್ನ ಜೀವನದ ಗುರಿಯಾಗಿದೆ ಮತ್ತು ಭವಿಷ್ಯದಲ್ಲಿ ನಾನು ರಕ್ಷಿಸಲು ಸಿದ್ಧನಾಗಿರುತ್ತೇನೆ ಎಂದು ಭಾವುಕರಾದ ಗ್ಯಾಲಂಟ್ ಪತ್ರಿಕಾಗೋಷ್ಠಿಯಲ್ಲಿ ಅಕ್ಟೋಬರ್ 7ರ ದಾಳಿಯಲ್ಲಿ ಅಪಹರಣಕ್ಕೊಳಗಾಗಿದ್ದವರನ್ನು ಬಿಡುಗಡೆ ಮಾಡಬೇಕು ಮತ್ತು ಯುದ್ಧದ ಕುರಿತು ತನಿಖಾ ಆಯೋಗ ರಚಿಸಬೇಕೆಂಬ ಬೇಡಿಕೆಯೇ ನನ್ನ ವಜಾಕ್ಕೆ ಕಾರಣ ಎಂದರು.
ಮುಂಬರುವ ವರ್ಷಗಳಲ್ಲಿ ಇಸ್ರೇಲ್ ಹಲವು ಸಂಕಷ್ಟಗಳನ್ನು ಎದುರಿಸಲಿದೆ ಎಂದು ಗ್ಯಾಲಂಟ್ ಹೇಳಿದ್ದಾರೆ. ಅಂತಹ ಸಂದರ್ಭಗಳಲ್ಲಿ ನಮಗೆ ಯಾವುದೇ ಆಯ್ಕೆ ಇರುವುದಿಲ್ಲ. ದೇಶದ ಎಲ್ಲಾ ನಾಗರಿಕರು ಒಗ್ಗೂಡಿ ಸೈನ್ಯದಲ್ಲಿ ಸೇವೆ ಸಲ್ಲಿಸಬೇಕು. ಇದರಿಂದ ನಾವು ಇಸ್ರೇಲ್ ಅನ್ನು ರಕ್ಷಿಸುವ ಧ್ಯೇಯದಲ್ಲಿ ಯಶಸ್ವಿಯಾಗಬಹುದು ಎಂದರು.
ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಮ್ಮ ರಕ್ಷಣಾ ಸಚಿವರನ್ನು ವಜಾಗೊಳಿಸಿರುವುದನ್ನು ವಿರೋಧಿಸಿ ಸಾವಿರಾರು ಇಸ್ರೇಲಿಗರು ಪ್ರತಿಭಟನೆ ನಡೆಸಿದ್ದು ಗಾಜಾದಲ್ಲಿ ಸಿಲುಕಿರುವ ಒತ್ತೆಯಾಳುಗಳನ್ನು ಮನೆಗೆ ಕರೆತರಲು ಸರ್ಕಾರವು ತನ್ನ ಶಕ್ತಿಮೀರಿ ಪ್ರಯತ್ನಿಸಬೇಕು ಎಂದು ಒತ್ತಾಯಿಸಿದರು.
Advertisement