ಬೈರೂತ್: ಇಸ್ರೇಲ್ ಮತ್ತು ಮಧ್ಯ ಪ್ರಾಚ್ಯ ರಾಷ್ಟ್ರಗಳ ನಡುವಿನ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿದ್ದು, ಇಸ್ರೇಲಿ ಪಡೆಗಳು ಬೈರುತ್‌ನಲ್ಲಿರುವ ಹಿಜ್ಬೊಲ್ಲಾದ ಗುಪ್ತಚರ ಪ್ರಧಾನ ಕಚೇರಿಯನ್ನು ಗುರಿಯಾಗಿಟ್ಟುಕೊಂಡು ಗುರುವಾರ ವೈಮಾನಿಕ ದಾಳಿ ನಡೆಸಿದೆ.
ಹತ್ಯೆಗೀಡಾದ ಹಿಜ್ಬೊಲ್ಲಾ ಬಂಡುಕೋರ ಸಂಘಟನೆಯ ನಾಯಕ ಹಸನ್ ನಸ್ರಲ್ಲಾನ ಸೋದರ ಸಂಬಂಧಿ ಹಾಗೂ ಆತನ ಉತ್ತರಾಧಿಕಾರಿ ಎಂದು ಹೇಳಲಾಗುತ್ತಿರುವ ಹಶೆಮ್ ಸಫೀದ್ದೀನ್ ಗುರಿಯಾಗಿಸಿಕೊಂಡು ಇಸ್ರೇಲ್ ಪಡೆಗಳು ಭಾರಿ ಬಾಂಬ್ ದಾಳಿ ನಡೆಸಿವೆ.
ಇಸ್ರೇಲಿ ಪಡೆಗಳು ದಕ್ಷಿಣ ಉಪನಗರದ ದಹಿಯೆಹ್ನಲ್ಲಿ ದಾಳಿ ನಡೆಸಿದ್ದು, ಈ ಪ್ರದೇಶ ಹಿಜ್ಬೊಲ್ಲಾದ ಭದ್ರಕೋಟೆಯಾಗಿತ್ತು ಎನ್ನಲಾಗಿದೆ. ದಾಳಿಗೂ ಮುನ್ನ ಸ್ಥಳೀಯ ನಿವಾಸಿಗಳನ್ನು ಸ್ಥಳಾಂತರಗೊಳ್ಳುವಂತೆ ಮನವಿ ಮಾಡಿಕೊಂಡಿತ್ತು. ಇದರೊಂದಿಗೆ ತನ್ನ ಪ್ರಮುಖ ಗುರಿ ಹಶೆಮ್ ಸಫೀದ್ದೀನ್ ಎಂಬುದನ್ನು ಸ್ಪಷ್ಟವಾಗಿ ತಿಳಿಸಿತ್ತು.
ಹತ್ಯೆಯಾದ ಹಸನ್ ನಸ್ರಲ್ಲಾ ಅಂತಿಮ ಯಾತ್ರೆಗೆ ಲೆಬನಾನ್ ತಯಾರಿ ನಡೆಸುತ್ತಿರುವ ಸಂದರ್ಭದಲ್ಲೇ ಇಸ್ರೇಲ್ ದಾಳಿ ನಡೆಸಿದ್ದು, ಇದು ಹಿಜ್ಬುಲ್ಲಾದ ಬಂಡುಕೋರರಿಗೆ ಆಘಾತವನ್ನುಂಟು ಮಾಡಿದೆ. ವರದಿಗಳ ಪ್ರಕಾರ ಇಸ್ರೇಲ್ ದಾಳಿಯಲ್ಲಿ ಹಶೀಂ ಸೈಫುದ್ದೀನ್ ಮೃತಪಟ್ಟಿದ್ದಾನೆಂದು ತಿಳಿದುಬಂದಿದ್ದು, ಆದರೆ, ಲೆಬನಾನ್ ಅಥವಾ ಹಿಜ್ಬುಲ್ಲಾ ಇನ್ನೂ ದೃಢೀಕರಿಸಿಲ್ಲ.
ಏತನ್ಮಧ್ಯೆ ಇಸ್ರೇಲ್ ಮೇಲೆ ಕೆಲ ದಿನಗಳ ಹಿಂದೆ ನಡೆದ ವೈಮಾನಿಕ ದಾಳಿಯನ್ನು ತಾನೇ ನಡೆಸಿದ್ದು ಎಂದು ಹಿಜ್ಬೊಲ್ಲಾ ಹೊಣೆ ಹೊತ್ತುಕೊಂಡಿದೆ.
ಈ ಬೆಳವಣಿಗೆಗಳ ಮಧ್ಯೆ ಶ್ವೇತಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರು, ಇಂದು ಒಂದು ಸಂಪೂರ್ಣ ಯುದ್ಧ ಅಲ್ಲ. ಪರಿಸ್ಥಿತಿಯನ್ನು ನಾವು ತಪ್ಪಿಸಬಹುದು ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಹಶೆಮ್ ಸಫೀದ್ದೀನ್ ಯಾರು?
2017ರಲ್ಲಿ ಹಶೆಮ್ ಸಫೀದ್ದೀನ್ನನ್ನು ಅಮೆರಿಕ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಎಂದು ಘೋಷಿಸಿತ್ತು. ಹಶೀಂ ಹಿಜ್ಬುಲ್ಲಾ ಅವರ ರಾಜಕೀಯ ವ್ಯವಹಾರಗಳ ಸಮಿತಿ ಮತ್ತು ಜಿಹಾದ್ ಕೌನ್ಸಿಲ್‌ನ ಪ್ರಮುಖ ಸದಸ್ಯರಾಗಿದ್ದರು.
ಏತನ್ಮಧ್ಯೆ ಹಿಜ್ಬೊಲ್ಲಾದ ಮತ್ತೊಬ್ಬ ಹಿರಿಯ ನಾಯಕ ಮೊಹಮ್ಮದ್ ಅನಿಸಿನ್ನು ಕೊಂದಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆ. ಅನಿಸಿ ಹಿಜ್ಬೊಲ್ಲಾದ ಕ್ಷಿಪಣಿಗಳ ಉಸ್ತುವಾರಿ ವಹಿಸಿದ್ದ.
Advertisement