
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ತಮ್ಮ ಪಕ್ಷ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ರನ್ನು ಆಹ್ವಾನಿಸಿಲ್ಲ ಎಂದು ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ ಪಕ್ಷ ಸ್ಪಷ್ಟನೆ ನೀಡಿದೆ.
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‍ಖಾನ್ ಅವರ ಪಿಟಿಐ ಪಕ್ಷ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ರನ್ನು ಆಹ್ವಾನಿಸುವುದಾಗಿ ಪಕ್ಷದ ಮುಖಂಡ ನೀಡಿರುವ ಹೇಳಿಕೆಯಿಂದ ಪಿಟಿಐ ಪಕ್ಷ ಅಂತರ ಕಾಯ್ದುಕೊಂಡಿದ್ದು, ತಮ್ಮ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಜೈ ಶಂಕರ್ ರನ್ನು ಆಹ್ವಾನಿಸಿಲ್ಲ ಎಂದು ಹೇಳಿದೆ.
ಜೈಲಿನಲ್ಲಿರುವ ಇಮ್ರಾನ್‍ಖಾನ್ ಅವರ ಬಿಡುಗಡೆಗೆ ಆಗ್ರಹ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಇಸ್ಲಮಾಬಾದ್ ಹಾಗೂ ಲಾಹೋರ್ ನಲ್ಲಿ ಬ್ರಹತ್ ಪ್ರತಿಭಟನೆ ನಡೆಯಲಿದ್ದು ಇದರಲ್ಲಿ ಪಾಲ್ಗೊಳ್ಳುವಂತೆ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ರನ್ನು ಆಹ್ವಾನಿಸುವುದಾಗಿ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷದ ಮುಖಂಡ ಮುಹಮ್ಮದ್ ಆಲಿ ಸೈಫ್ ಹೇಳಿದ್ದರು ಎಂದು ವರದಿಯಾಗಿತ್ತು. ಇದು ಪಾಕಿಸ್ತಾನದಲ್ಲಿ ವ್ಯಾಪಕ ಟೀಕೆ ಮತ್ತು ಸುದ್ದಿಗೆ ಗ್ರಾಸವಾಗಿತ್ತು.
ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿರುವ ಪಿಟಿಐ, ಅಂತಹ ಯಾವುದೇ ಕಾರ್ಯ ತಮ್ಮ ಪಕ್ಷ ಮಾಡಿಲ್ಲ ಎಂದು ಹೇಳಿದೆ. ಈ ಬಗ್ಗೆ ಮಾತನಾಡಿರುವ ಪಿಟಿಐ ಪಕ್ಷದ ಅಧ್ಯಕ್ಷ ಬ್ಯಾರಿಸ್ಟರ್ ಗೋಹರ್ ಖಾನ್, 'ಪಿಟಿಐ ಪಕ್ಷದ ರಾಜಕೀಯ ಹೋರಾಟದಲ್ಲಿ ಭಾರತ ಸೇರಿದಂತೆ ಯಾವುದೇ ವಿದೇಶದ ಪಾತ್ರವಿಲ್ಲ ಎಂದಿದ್ದಾರೆ.
ಭಾರತದ ಕುರಿತಂತೆ ಪಾಕಿಸ್ತಾನದ 70 ವರ್ಷದ ನೀತಿ ಪಿಟಿಐ ಪಕ್ಷದ ಬೆನ್ನೆಲುಬಾಗಿದೆ. ಶಾಂತರೀತಿಯ ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು. ಭಾರತ ಸೇರಿದಂತೆ ಯಾವುದೇ ವಿದೇಶಿ ಗಣ್ಯರಿಗೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಪಿಟಿಐ ಆಹ್ವಾನ ನೀಡಿಲ್ಲ. ನಮ್ಮ ಆಂತರಿಕ ವಿಷಯಗಳಲ್ಲಿ ಪ್ರತಿಕ್ರಿಯೆ ನೀಡಲು ಯಾವುದೇ ವಿದೇಶಿ ಗಣ್ಯರಿಗೆ ಅವಕಾಶವಿಲ್ಲ. ಪಕ್ಷದ ಹೋರಾಟವು ಆಂತರಿಕ ಸಮಸ್ಯೆಯಾಗಿದ್ದು ಇದರಲ್ಲಿ ಜೈಶಂಕರ್ ಯಾವುದೇ ರೀತಿಯಲ್ಲಿ ಭಾಗಿಯಾಗಿಲ್ಲ. ಸೈಫ್ ಅವರ ಹೇಳಿಕೆಯು ತಪ್ಪು ಅಭಿಪ್ರಾಯವನ್ನು ಸೃಷ್ಟಿಸಿದೆ' ಎಂದು ಹೇಳಿದ್ದಾರೆ.
ಅಂದಹಾಗೆ ಪಾಕಿಸ್ತಾನ ಸರ್ಕಾರವು ಸಂವಿಧಾನಕ್ಕೆ ಬದ್ಧವಾಗಿರಬೇಕು, ನ್ಯಾಯಾಂಗದ ಸ್ವಾತಂತ್ರ್ಯವನ್ನು ರಕ್ಷಿಸಬೇಕು, ಹಣದುಬ್ಬರ ನಿಯಂತ್ರಿಸಬೇಕು ಮತ್ತು ಪಕ್ಷದ ಸಂಸ್ಥಾಪಕ ಇಮ್ರಾನ್ ಖಾನ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಪಿಟಿಐ ಪ್ರತಿಭಟನೆ ನಡೆಸುತ್ತಿದೆ.
ಏತನ್ಮಧ್ಯೆ ಅಕ್ಟೋಬರ್ 15 ಮತ್ತು 16 ರಂದು ಪಾಕಿಸ್ತಾನದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ ಸರ್ಕಾರಗಳ ಮುಖ್ಯಸ್ಥರ ಮಂಡಳಿ (ಎಸ್ಸಿಒ-ಸಿಎಚ್ಜಿ) ಸಭೆಯಲ್ಲಿ ಭಾಗವಹಿಸಲು ಜೈಶಂಕರ್ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದ್ದಾರೆ.
Advertisement