
ಲೆಬನಾನ್: ಮಧ್ಯ ಬೈರುತ್‌ನಲ್ಲಿ ಗುರುವಾರ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 22 ಮಂದಿ ಅಸು ನೀಗಿದ್ದಾರೆ. ದಾಳಿಯಲ್ಲಿ ಡಜನ್‌ಗಟ್ಟಲೆ ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ಹೇಳಿದೆ. ಜೊತೆಗೆ ಲೆಬನಾನ್‌ನಲ್ಲಿ ಇರಾನ್ ಬೆಂಬಲಿತ ಹಿಜ್ಬುಲ್ಲಾಗಳೊಂದಿಗೆ ಇಸ್ರೇಲ್ ಸೈನಿಕರು ರಕ್ತಸಿಕ್ತ ಸಂಘರ್ಷ ಮುಂದುವರೆದಿದೆ.
ಸೆಂಟ್ರಲ್ ಬೈರುತ್‌ನ ಮೇಲಿನ ಈ ವಾಯುದಾಳಿ ಒಂದು ವರ್ಷದಲ್ಲಿ ಅತಿ ಹೆಚ್ಚು ಮಾರಣಾಂತಿಕವಾಗಿದೆ ಎಂದು ವರದಿಯಾಗಿದೆ. ಮಧ್ಯ ಬೈರುತ್ ಮೇಲೆ ಏಕಕಾಲದಲ್ಲಿ ಎರಡು ವಸತಿ ಕಟ್ಟಡಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಸೇನೆ ದಾಳಿ ನಡೆಸುತ್ತಿದೆ. ವೈಮಾನಿಕ ದಾಳಿಯಲ್ಲಿ ಎಂಟು ಅಂತಸ್ತಿನ ಕಟ್ಟಡವನ್ನು ದ್ವಂಸಗೊಳಿಸಲಾಗಿದೆ ಎಂದು ಎಪಿ ಛಾಯಾಗ್ರಾಹಕ ಹೇಳಿದ್ದಾರೆ. ಈ ನಡುವೆ ಹಿಜ್ಬುಲ್ಲಾದ ಉನ್ನತ ಭದ್ರತಾ ಅಧಿಕಾರಿ ವಫೀಕ್ ಸಫಾ ಅವರನ್ನು ಕೊಲ್ಲುವ ಪ್ರಯತ್ನ ವಿಫಲವಾಗಿದೆ ಎಂದು ಹಿಜ್ಬುಲ್ಲಾದ ಅಲ್ ಮನರ್ ಟಿವಿ ವರದಿ ಮಾಡಿದೆ. ಉದ್ದೇಶಿತ ಎರಡೂ ಕಟ್ಟಡಗಳ ಒಳಗೆ ಸಫಾ ಇರಲಿಲ್ಲ ಎಂದು ಅದು ಹೇಳಿದೆ. ಈ ವರದಿಗಳ ಬಗ್ಗೆ ಪರಿಶೀಲಿಸುತ್ತಿರುವುದಾಗಿ ಇಸ್ರೇಲಿ ಮಿಲಿಟರಿ ಹೇಳಿದೆ.
ಗುರುವಾರದ ದಾಳಿ ಹೆಜ್ಬುಲ್ಲಾ ಮತ್ತು ಇಸ್ರೇಲ್ ನಡುವಿನ ಒಂದು ವರ್ಷದ ಭೀಕರ ದಾಳಿ ಮತ್ತಷ್ಟು ತೀವ್ರತೆ ಪಡೆದುಕೊಳ್ಳುತ್ತಿದೆ ಎಂಬುದಕ್ಕೆ ಸಾಕ್ಷಿಯಾಗುತ್ತಿದೆ. ಇಸ್ರೇಲ್ ಲೆಬನಾನ್‌ನಾದ್ಯಂತ ಭಾರಿ ದಾಳಿಯ ಅಲೆಗಳನ್ನು ಸೃಷ್ಟಿಸಿದೆ. ಇನ್ನು ಹೆಜ್ಬುಲ್ಲಾ ಕೂಡಾ ಇಸ್ರೇಲ್ನ ಜನನಿಬಿಡ ಪ್ರದೇಶಗಳ ಮೇಲೆ ರಾಕೆಟ್ ದಾಳಿಯನ್ನು ನಡೆಸುತ್ತಿದೆ. ಇದು ಕೆಲವು ಸಾವುನೋವುಗಳಿಗೆ ಕಾರಣವಾಗಿದೆ.ದಾಳಿಯಿಂದ ಲೆಬನಾನ್‌ನಲ್ಲಿ ವಿಶ್ವಸಂಸ್ಥೆಯ ಶಾಂತಿ ಪಾಲಕರಿಗೆ ಅಪಾಯವುಂಟಾಗಿದ್ದು, ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆಯಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಸೆಂಟ್ರಲ್ ಬೈರೂತ್‌ನ ವಿಶ್ವಸಂಸ್ಥೆ ಶಾಂತಿಪಾಲನಾ ಪ್ರಧಾನ ಕಚೇರಿ, ಲೆಬನಾನ್ ಸೇನಾ ಟ್ಯಾಂಕರ್‌ಗಳನ್ನ ಗುರಿಯಾಗಿಸಿ ಇಸ್ರೇಲ್ ದಾಳಿ ನಡೆಸಿದೆ. ಹಿಜ್ಬುಲ್ಲಾ ಮುಖ್ಯಸ್ಥ ನಸ್ರಲ್ಲಾನನ್ನ ಹೊಡೆದುರುಳಿಸಿದ ನಂತರ ಉನ್ನತ ಅಧಿಕಾರಿಗಳ ಸರಣಿ ಹತ್ಯೆಯನ್ನೇ ಹೆಚ್ಚಾಗಿ ಗುರಿಯಾಗಿಸಿದೆ. ಆದ್ರೆ ಈ ದಾಳಿಯಲ್ಲಿ ಹಿಜ್ಬುಲ್ಲಾದ ಉನ್ನತಾಧಿಕಾರಿ ಬದುಕುಳಿದಿದ್ದಾರೆ. ಈ ದಾಳಿಯು ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆ ಮಾಡಿದೆ ಎಂದು ಸ್ಪೇನ್ ಹಾಗೂ ಇಟಲಿ ದೇಶಗಳು ಆರೋಪಿಸಿವೆ.
Advertisement