
ನವದೆಹಲಿ: ಖಲಿಸ್ತಾನಿ ಹೋರಾಟಗಾರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ವಿಚಾರವಾಗಿ ಭಾರತದ ವಿರುದ್ಧದ ಕೆಂಡ ಉಗುಳುತ್ತಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಮತ್ತೆ ಜಾಗತಿಕ ಮಟ್ಟದಲ್ಲಿ ಅಪಮಾನಕ್ಕೀಡಾಗಿದ್ದು, ಭಾರತಕ್ಕೆ ತಾವು ಕೊಟ್ಟಿದ್ದು ಗುಪ್ತಚರ ವರದಿಯೇ ಹೊರತು ಸಾಕ್ಷ್ಯಾಧಾರಗಳಲ್ಲ ಎಂದು ಖುದ್ಧ ತಾವೇ ಒಪ್ಪಿಕೊಂಡಿದ್ದಾರೆ.
ಹೌದು.. ಖಲಿಸ್ತಾನಿ ಬಂಡುಕೋರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ರಾಯಭಾರ ಅಧಿಕಾರಿಗಳು, ಗುಪ್ತಚರ ಅಧಿಕಾರಿಗಳ ಕೈವಾಡವಿದೆ. ಈ ಸಂಬಂಧ ಭಾರತ ಸರ್ಕಾರಕ್ಕೆ ಎಲ್ಲ ಮಾಹಿತಿ ನೀಡಿದ್ದೇವೆ ಎಂದು ಹೇಳಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಇದೀಗ ತಮ್ಮ ವರಸೆ ಬದಲಿಸಿದ್ದು, 'ಭಾರತಕ್ಕೆ ತಾವು ಕೊಟ್ಟಿದ್ದು ಗುಪ್ತಚರ ವರದಿಯೇ ಹೊರತು ಸಾಕ್ಷ್ಯಾಧಾರಗಳಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಕೆನಡಾದ ಫೆಡರಲ್ ಚುನಾವಣಾ ಪ್ರಕ್ರಿಯೆಗಳು ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳಲ್ಲಿ ವಿದೇಶಿ ಹಸ್ತಕ್ಷೇಪದ ಕುರಿತು ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ ಮಾತನಾಡಿದ ಕೆನಡಾ ಪ್ರಧಾನಿ ಟ್ರೂಡೊ,'ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಅಧಿಕಾರಿಗಳ ಕೈವಾಡದ ಕುರಿತ ತಮ್ಮ ಹೇಳಿಕೆಗಳು ನಿರ್ಣಾಯಕ ಪುರಾವೆಗಳಿಗಿಂತ ಅಥವಾ ಸಾಕ್ಷ್ಯಾಧಾರಗಳಿಗಿಂತ ಗುಪ್ತಚರವನ್ನು ಆಧರಿಸಿ ಹೇಳಿದ್ದಾಗಿತ್ತು ಎಂದು ಬಹಿರಂಗಪಡಿಸಿದ್ದಾರೆ.
ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಸರ್ಕಾರಿ ಏಜೆಂಟರ ಕೈವಾಡದ ಕುರಿತು ಕೆನಡಾದ ಬಳಿ ಯಾವುದೇ "ಕಠಿಣ ಪುರಾವೆ"ಗಳು ಇಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆನಡಾದಿಂದ ಗುಪ್ತಚರ ಮಾಹಿತಿ ಇತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲು ಕೆನಡಾ ಸರ್ಕಾರಕ್ಕೆ ಇದೊಂದೇ ಸಾಕಿತ್ತು ಎಂದು ಟ್ರೂಡೋ ಹೇಳಿದ್ದಾರೆ.
ಟ್ರೂಡೋ ಆರೋಪಿಸಿರುವಂತೆ 'ಭಾರತೀಯ ರಾಜತಾಂತ್ರಿಕರು ಮೋದಿ ಸರ್ಕಾರವನ್ನು ಟೀಕಿಸುವ ಕೆನಡಿಯನ್ನರ ಮಾಹಿತಿಯನ್ನು ಸಂಗ್ರಹಿಸುವಲ್ಲಿ ತೊಡಗಿದ್ದಾರೆ. ಈ ಡೇಟಾವನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸೇರಿದಂತೆ ಭಾರತೀಯ ಹಿರಿಯ ಅಧಿಕಾರಿಗಳು ಮತ್ತು ಕ್ರಿಮಿನಲ್ ಸಂಸ್ಥೆಗಳಿಗೆ ರವಾನಿಸಲಾಗಿದೆ ಎಂದು ವರದಿಯಾಗಿದೆ. ಸಂಘಟಿತ ಅಪರಾಧದಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಕುಖ್ಯಾತವಾಗಿರುವ ಬಿಷ್ಣೋಯ್ ಗ್ಯಾಂಗ್, ದಕ್ಷಿಣ ಏಷ್ಯಾದ ಸಮುದಾಯವನ್ನು ಗುರಿಯಾಗಿಸುವ ಹಿಂಸಾಚಾರಕ್ಕೆ, ನಿರ್ದಿಷ್ಟವಾಗಿ ಕೆನಡಾದಲ್ಲಿ ಖಲಿಸ್ತಾನಿ ಪರ ಕಾರ್ಯಕರ್ತರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮೋದಿ ಸರ್ಕಾರದ ಕಟ್ಟರ್ ವಿರೋಧಿಯಾಗಿದ್ದ ನಿಜ್ಜರ್
ಇನ್ನು ಕೆನಡಾದಲ್ಲಿ ನಿಗೂಢವಾಗಿ ಹತ್ಯೆಯಾದ ಹರ್ದೀಪ್ ಸಿಂಗ್ ನಿಜ್ಜರ್ ಖಲಿಸ್ತಾನಿ ಹೋರಾಟಗಾರನಾಗಿದ್ದು, ಭಾರತದ ಪ್ರಧಾನಿ ಮೋದಿ ಸರ್ಕಾರದ ಕಟ್ಟರ್ ವಿರೋಧಿಯಾಗಿದ್ದ. ಅಲ್ಲದೆ ಭಾರತದ ವಿರುದ್ಧವೂ ಕೆನಡಾದಲ್ಲಿ ಸಾಕಷ್ಟು ಪ್ರತಿಭಟನೆ ಮತ್ತು ಭಾರತ ವಿರೋಧಿ ಸಂಚುಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.
Advertisement