
ಮಾಸ್ಕೋ: 2022 ರಲ್ಲಿ ಉಕ್ರೇನ್ ಮೇಲೆ ರಷ್ಯಾ ಆಕ್ರಮಣದ ಆರಂಭಿಕ ಹಂತದಲ್ಲಿ ಇಸ್ತಾನ್‌ಬುಲ್‌ನಲ್ಲಿ ಎರಡು ದೇಶಗಳು ಒಪ್ಪಿಕೊಂಡಿದ್ದ ಶಾಂತಿ ಒಪ್ಪಂದದ ಕರಡು ಆಧಾರದ ಮೇಲೆ ಉಕ್ರೇನ್‌ನೊಂದಿಗೆ ಮಾತುಕತೆಗೆ ಸಿದ್ಧ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಗುರುವಾರ ಹೇಳಿದ್ದಾರೆ.
ವ್ಲಾಡಿವೋಸ್ಟಾಕ್ ನಗರದಲ್ಲಿ ನಡೆದ ರಷ್ಯಾದ ಪೂರ್ವ ಆರ್ಥಿಕ ವೇದಿಕೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಪುಟಿನ್, ರಷ್ಯಾ ಮಾತುಕತೆಗೆ ಸಿದ್ಧವಾಗಿದೆ. ಆದರೆ 2022 ರಲ್ಲಿ ಇಸ್ತಾನ್‌ಬುಲ್‌ನಲ್ಲಿ ಸ್ಥಗಿತಗೊಂಡ ಶಾಂತಿ ಒಪ್ಪಂದವನ್ನು ಆಧರಿಸಿ ಮತ್ತೆ ಮಾತುಕತೆ ನಡೆಸಬೇಕು. ಅದರ ನಿಯಮಗಳನ್ನು ಎಂದಿಗೂ ಸಾರ್ವಜನಿಕಗೊಳಿಸಲಾಗಿಲ್ಲ ಎಂದಿದ್ದಾರೆ.
"ನಾವು ಅವರೊಂದಿಗೆ ಮಾತುಕತೆ ನಡೆಸಲು ಸಿದ್ಧರಿದ್ದೇವೆ? ನಾವು ಎಂದಿಗೂ ಶಾಂತಿ ಮಾತುಕತೆ ನಡೆಸಲು ನಿರಾಕರಿಸಿಲ್ಲ. ಆದರೆ ಕೆಲವು ಅಲ್ಪಕಾಲಿಕ ಬೇಡಿಕೆಗಳ ಆಧಾರದ ಮೇಲೆ ಅಲ್ಲ. ಇಸ್ತಾನ್‌ಬುಲ್‌ನಲ್ಲಿ ಒಪ್ಪಿಕೊಂಡ ಮತ್ತು ವಾಸ್ತವವಾಗಿ ಪ್ರಾರಂಭಿಸಿದ ದಾಖಲೆಗಳ ಆಧಾರದ ಮೇಲೆ" ಶಾಂತಿ ಮಾತುಕತೆ ನಡೆಸಬೇಕು ಎಂದು ಪುಟಿನ್ ಹೇಳಿದ್ದಾರೆ.
ಕುರ್ಸ್ಕ್ ಪ್ರದೇಶದ ಮೇಲೆ ಕೈವ್ ಆಕ್ರಮಣ ನಿಲ್ಲಿಸುವವರೆಗೆ ಮಾತುಕತೆ ಅಸಾಧ್ಯವೆಂದು ರಷ್ಯಾ ಈ ಹಿಂದೆ ಹೇಳಿತ್ತು.
ಉಕ್ರೇನ್ ಮೇಲೆ ಮಾಸ್ಕೋ ಆಕ್ರಮಣ ಆರಂಭಿಸಿದ ಸ್ವಲ್ಪ ಸಮಯದ ನಂತರ, 2022 ರಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವೆ ಶಾಂತಿ ಒಪ್ಪಂದ ಅಂತಿಮ ಹಂತಕ್ಕೆ ಬಂದಿತ್ತು ಎಂದು ಕ್ರೆಮ್ಲಿನ್ ಪದೇ ಪದೇ ಹೇಳಿದೆ.
"ನಾವು ಶಾಂತಿ ಒಪ್ಪಂದಕ್ಕೆ ಬರುವಲ್ಲಿ ಯಶಸ್ವಿಯಾಗಿದ್ದೇವೆ. ಡಾಕ್ಯುಮೆಂಟ್ ಅನ್ನು ಪ್ರಾರಂಭಿಸಿದ ಉಕ್ರೇನಿಯನ್ ನಿಯೋಗದ ಮುಖ್ಯಸ್ಥರ ಸಹಿ ಇದಕ್ಕೆ ಸಾಕ್ಷಿಯಾಗಿದೆ. ಇದರರ್ಥ ಉಕ್ರೇನಿಯನ್ ಈ ಶಾಂತಿ ಒಪ್ಪಂದದಿಂದ ತೃಪ್ತವಾಗಿದೆ". ಆದರೆ ಈ ಒಪ್ಪಂದ ಜಾರಿಗೆ ಮಾಡದಂತೆ ಆಜ್ಞೆ ನೀಡಿದ್ದರಿಂದ ಇದು ಜಾರಿಗೆ ಬರಲಿಲ್ಲ. ಏಕೆಂದರೆ ಯುನೈಟೆಡ್ ಸ್ಟೇಟ್ಸ್, ಯುರೋಪ್ - ಕೆಲವು ಯುರೋಪಿಯನ್ ರಾಷ್ಟ್ರಗಳ ಗಣ್ಯರು ರಷ್ಯಾದ ವ್ಯೂಹಾತ್ಮಕ ಸೋಲನ್ನು ಬಯಸಿದ್ದರು" ಎಂದು ಪುಟಿನ್ ತಿಳಿಸಿದ್ದಾರೆ.
ರಾಯಿಟರ್ಸ್ ವರದಿಯ ಪ್ರಕಾರ, ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಭಾವ್ಯ ಶಾಂತಿ ಮಾತುಕತೆಗೆ ಚೀನಾ, ಭಾರತ ಮತ್ತು ಬ್ರೆಜಿಲ್ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸಬಹುದು ಎಂದು ರಷ್ಯಾದ ಅಧ್ಯಕ್ಷರು ಹೇಳಿದ್ದಾರೆ.
ಇಸ್ತಾನ್‌ಬುಲ್‌ನಲ್ಲಿ ನಡೆದ ರಷ್ಯಾ ಮತ್ತು ಉಕ್ರೇನ್ ನಡುವಿನ ಪ್ರಾಥಮಿಕ ಶಾಂತಿ ಒಪ್ಪಂದವನ್ನು ಎಂದಿಗೂ ಕಾರ್ಯಗತಗೊಳಿಸಲಾಗಿಲ್ಲ ಎಂದು ರಷ್ಯಾದ ಅಧ್ಯಕ್ಷರು ತಿಳಿಸಿದ್ದಾರೆ.
ಗಮನಾರ್ಹ ವಿಚಾರ ಎಂದರೆ, ಬ್ರಿಕ್ಸ್ ಶೃಂಗಸಭೆಯು ರಷ್ಯಾದಲ್ಲಿ ಈ ವರ್ಷದ ಕೊನೆಯಲ್ಲಿ ಅಕ್ಟೋಬರ್ 22 ಮತ್ತು ಅಕ್ಟೋಬರ್ 24 ರ ನಡುವೆ ನಡೆಯಲಿದೆ.
Advertisement