
ಪ್ಯಾರಿಸ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ತೆರಿಗೆ ಹೆಚ್ಚಳಕ್ಕೆ ಜಗತ್ತಿನಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವಂತೆಯೇ ಇತ್ತ ಅಮೆರಿಕದ ಪರಮಾಪ್ತ ರಾಷ್ಟ್ರಗಳೇ ಈ ಕ್ರಮವನ್ನು ಟೀಕಿಸಿವೆ.
ಹೌದು.. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆರಿಗೆ ಹೆಚ್ಚಳ ಕ್ರಮದ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ತೀವ್ರ ಕುಸಿತ ಉಂಟಾಗಿದ್ದು, ಜಗತ್ತಿನಾದ್ಯಂತ ಷೇರುಮಾರುಕಟ್ಟೆಗಳು ತೀವ್ರ ಕುಸಿತ ಕಾಣುತ್ತಿವೆ.
ಈ ಬೆಳವಣಿಗೆ ಬೆನ್ನಲ್ಲೇ ಚೀನಾ ದೇಶ ಅಮೆರಿಕದ ವಿರುದ್ಧ ಕ್ರಮ ಕೈಗೊಂಡಿದ್ದು ಅಮೆರಿಕ ಉತ್ಪನ್ನಗಳ ಮೇಲೆ ಶೇ.34ರಷ್ಟು ಸುಂಕ ವಿಧಿಸುತ್ತೇವೆ ಎಂದು ಘೋಷಿಸಿದೆ.
ಇದೀಗ ಚೀನಾ ಹಾದಿಯಲ್ಲೇ ಯೂರೋಪಿಯನ್ ಒಕ್ಕೂಟ ಸಾಗಿದ್ದು, ಟ್ರಂಪ್ ಸುಂಕ ಏರಿಕೆಯನ್ನು ಖಂಡಿಸಿದ್ದು ಮಾತ್ರವಲ್ಲದೇ ತನ್ನ ತೆರಿಗೆ ಪರಿಷ್ಕರಣೆ ಮಾಡುವ ಕುರಿತು ಗಂಭೀರ ಚಿಂತನೆಯಲ್ಲಿದೆ.
ಸ್ನೇಹಕ್ಕಿಂತ ದೇಶ ಮುಖ್ಯ
ಅಮೆರಿಕದ ಸುಂಕ ಹೆಚ್ಚಳಕ್ಕೆ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿರುವ ಅಮೆರಿಕದ ಆಪ್ತ ರಾಷ್ಟ್ರಗಳಾದ ಫ್ರಾನ್ಸ್ ಮತ್ತು ಜರ್ಮನಿ ಸ್ನೇಹಕ್ಕಿಂತ ದೇಶ ಮುಖ್ಯ ಎಂದು ಹೇಳಿವೆ. ಅಮೆರಿಕ ಮೂಲದ ತಂತ್ರಜ್ಞಾನ ಕಂಪನಿಗಳ ಮೇಲೆ ತೆರಿಗೆ ವಿಧಿಸುವ ಮೂಲಕ ಯುರೋಪಿಯನ್ ಒಕ್ಕೂಟ ಪ್ರತಿಕ್ರಿಯಿಸಬಹುದು ಎಂದು ಫ್ರಾನ್ಸ್ ಮತ್ತು ಜರ್ಮನಿ ತಿಳಿಸಿವೆ.
'ಕ್ರೂರ ಮತ್ತು ಆಧಾರರಹಿತ..ಯಾವುದನ್ನೂ ತಳ್ಳಿಹಾಕಲಾಗುವುದಿಲ್ಲ: ಮ್ಯಾಕ್ರನ್ ಕಿಡಿ
ಅಮೆರಿಕ ಸುಂಕ ಏರಿಕೆ ಕ್ರಮವನ್ನು 'ಕ್ರೂರ ಮತ್ತು ಆಧಾರರಹಿತ' ಎಂದು ಖಂಡಿಸಿರುವ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, 'ಸುಂಕ ಏರಿಕೆ ಕ್ರೂರ ಮತ್ತು ಆಧಾರರಹಿತ.. ಅಮೆರಿಕದಲ್ಲಿ ಫ್ರೆಂಚ್ ಹೂಡಿಕೆಗಳನ್ನು ಸ್ಥಗಿತಗೊಳಿಸಬಹುದು. ಎಲ್ಲ ಆಯ್ಕೆಗಳೂ ಇವೆ. ಯಾವುದನ್ನೂ ತಳ್ಳಿಹಾಕಲಾಗುವುದಿಲ್ಲ ಎಂಬ ಯೂರೋಪಿಯನ್ ನಾಯಕರ ಮಾತನ್ನು ನಾನು ಒಪ್ಪುತ್ತೇನೆ ಎಂದು ಹೇಳಿದರು.
"ನಾವು ಪರಿಣಾಮಕಾರಿ ಮತ್ತು ಹೆಚ್ಚು ಪ್ರಮಾಣಾನುಗುಣವಾದದ್ದನ್ನು ಮಾಡಬೇಕು ... ಆದರೆ ಈ ವಲಯಗಳು ಈ ಸುಂಕಗಳಿಗೆ ಬಲಿಯಾಗದಂತೆ ನಾವು ದೃಢನಿಶ್ಚಯ ಹೊಂದಿದ್ದೇವೆ ಎಂದು ಇದು ಸ್ಪಷ್ಟವಾಗಿ ತೋರಿಸುತ್ತದೆ ಎಂದ ಮ್ಯಾಕ್ರನ್, ಲಭ್ಯವಿರುವ ಪರಿಕರಗಳಲ್ಲಿ, "ಯುನೈಟೆಡ್ ಸ್ಟೇಟ್ಸ್ ಯುರೋಪ್‌ನಿಂದ ಅಗಾಧವಾಗಿ ಪ್ರಯೋಜನ ಪಡೆಯುವ" ಡಿಜಿಟಲ್ ಸೇವೆಗಳ ಮೇಲಿನ ಸಂಭಾವ್ಯ ಹಸ್ತಕ್ಷೇಪದ ಬಗ್ಗೆ ಅವರು ಸ್ಪಷ್ಟವಾಗಿ ಉಲ್ಲೇಖಿಸಿದರು.
ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಹೂಡಿಕೆಗಳನ್ನು ಮುಂದುವರಿಸಿದರೆ ಅದು ತಪ್ಪು ಸಂದೇಶವನ್ನು ಕಳುಹಿಸುತ್ತದೆ ಎಂದು ವಾದಿಸಿದ ನಂತರ, ಆರ್ಥಿಕ ಸಚಿವ ಎರಿಕ್ ಲೊಂಬಾರ್ಡ್ ಫ್ರೆಂಚ್ ಕಂಪನಿಗಳು "ದೇಶಭಕ್ತಿ"ಯನ್ನು ತೋರಿಸಬೇಕೆಂದು ಒತ್ತಾಯಿಸಿದರು.
ಅಲ್ಲದೆ ಯೂರೋಪಿಯನ್ ಒಕ್ಕೂಟದ ಪ್ರತೀಕಾರವು ಟಿಟ್-ಫಾರ್-ಟ್ಯಾಟ್ ಸುಂಕಗಳನ್ನು ಒಳಗೊಂಡಿರುವುದಿಲ್ಲ. ಅದರ ಬದಲಿಗೆ ನಾವು ಇತರ ಸಾಧನಗಳನ್ನು ಬಳಸಬಹುದು ಎಂದು ಲೊಂಬಾರ್ಡ್ ಹೇಳಿದರು. ಡೇಟಾ ವಿನಿಮಯ ಮತ್ತು ತೆರಿಗೆಯನ್ನು ಬಳಸಬಹುದಾದ ಸಾಧನಗಳಾಗಿ ತೋರಿಸಿದರು.
ಪ್ರತಿಕ್ರಿಯೆ ತುಂಬಾ ಪ್ರಬಲವಾಗಿರಬಹುದು. ಆದರೆ ನಾವು ಅಮೆರಿಕ ಬಳಸಿದ ಅದೇ ತೆರಿಗೆ ಅಸ್ತ್ರಗಳನ್ನು ಬಳಸಬಾರದು. ನಾವು ಹಾಗೆ ಮಾಡಿದರೆ, ಅದು ಯುರೋಪಿನಲ್ಲಿಯೂ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಎರಿಕ್ ಲೊಂಬಾರ್ಡ್ ಹೇಳಿದರು ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಜಪಾನ್ ಮೇಲೆ ಶೇ.24ರಷ್ಟು ತೆರಿಗೆ, ಚರ್ಚೆಗೆ ಮುಂದಾದ ಇಶಿಬಾ
ಈ ನಡುವೆ ಸುಂಕ ಏರಿಕೆ ವಿವಾದದ ನಡುವೆಯೇ ಜಪಾನ್ ಮೇಲೆ ಅಮೆರಿಕ ಶೇ.24ರಷ್ಟು ಸುಂಕ ಹೇರಿದ್ದು ಈ ಸಂಬಂಧ ಜಪಾನ್ ಪ್ರಧಾನಿ ಶಿಗೆರು ಇಶಿಬಾ ಅಮೆರಿಕದೊಂದಿಗೆ ಚರ್ಚೆಗೆ ಮುಂದಾಗಿದ್ದಾರೆ. ಜಪಾನಿನ ಉತ್ಪನ್ನಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ಹೇರಿರುವ ಶೇ.24ರಷ್ಟು ಸಂಕದ ವಿಚಾರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಮಹತ್ವದ ಸಭೆ ನಡೆಸಲು ಮುಂದಾಗಿದ್ದಾರೆ.
Advertisement