
ಬೀಜಿಂಗ್/ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾದ ರಫ್ತುಗಳ ಮೇಲೆ ಶೇ.104 ರಷ್ಟು ಸುಂಕ ವಿಧಿಸುತ್ತಿದ್ದು, ಇದಕ್ಕೆ ಪ್ರತಿಯಾಗಿ ಚೀನಾ, ಅಮೆರಿಕದಿಂದ ಬರುವ ಎಲ್ಲಾ ಸರಕುಗಳ ಮೇಲಿನ ಸುಂಕವನ್ನು ಶೇ.84ಕ್ಕೆ ಹೆಚ್ಚಿಸಿದೆ.
ಚೀನಾ ಈ ಮುಂಚೆ ಅಮೆರಿಕದ ಸರಕುಗಳ ಮೇಲೆ ಶೇ.34 ರಷ್ಟು ಸುಂಕ ವಿಧಿಸುವುದಾಗಿ ಹೇಳಿತ್ತು. ಇದೀಗ ಅದನ್ನು ಶೇ.84ಕ್ಕೆ ಹೆಚ್ಚಿಸುವ ಮೂಲಕ ಅಮೆರಿಕಕ್ಕೆ ತಿರುಗೇಟು ನೀಡಿದೆ. ಈ ಹೊಸ ಸುಂಕ ಗುರುವಾರ ಮಧ್ಯಾಹ್ನ 12:01 ರಿಂದ ಜಾರಿಗೆ ಬರಲಿದೆ ಎಂದು ಚೀನಾ ಹಣಕಾಸು ಸಚಿವಾಲಯ ಪ್ರಕಟಣೆಲ್ಲಿ ತಿಳಿಸಿದೆ.
ಕಳೆದ ವಾರ, ಚೀನಾ ಎಲ್ಲಾ ಅಮೆರಿಕದ ಸರಕುಗಳ ಮೇಲೆ ಶೇ.34 ರಷ್ಟು ಸುಂಕ ವಿಧಿಸುವುದಾಗಿ ಹೇಳಿತ್ತು.
"ಯುನೈಟೆಡ್ ಸ್ಟೇಟ್ಸ್ ಚೀನಾ ವಿರುದ್ಧ ಸುಂಕ ಏರಿಕೆ ಮಾಡುವ ಮೂಲಕ ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡುತ್ತಿದೆ ಮತ್ತು ಚೀನಾದ ಕಾನೂನುಬದ್ಧ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ತೀವ್ರವಾಗಿ ಉಲ್ಲಂಘಿಸುತ್ತಿದೆ" ಎಂದು ಸಚಿವಾಲಯ ಹೇಳಿದೆ.
ವಾಷಿಂಗ್ಟನ್‌ನ ಕ್ರಮಗಳು "ಬಹುಪಕ್ಷೀಯ ನಿಯಮ ಆಧಾರಿತ ವ್ಯಾಪಾರ ವ್ಯವಸ್ಥೆಯನ್ನು ತೀವ್ರವಾಗಿ ಹಾನಿಗೊಳಿಸುತ್ತವೆ" ಎಂದು ಚೀನಾ ಹೇಳಿದೆ.
ಚೀನಾದ ಪ್ರತೀಕಾರದ ಸುಂಕಕ್ಕೆ ಟ್ರಂಪ್ ತಕ್ಷಣ ಪ್ರತಿಕ್ರಿಯಿಸಿಲ್ಲ. ಆದರೆ ಸುಂಕಗಳನ್ನು ತಪ್ಪಿಸಿಕೊಳ್ಳಲು ಕಂಪನಿಗಳು ಅಮೆರಿಕಕ್ಕೆ ಸ್ಥಳಾಂತರಗೊಳ್ಳಲು ಪ್ರಾರಂಭಿಸಬೇಕು ಎಂದು ಕರೆ ನೀಡಿದ್ದಾರೆ.
"ನಿಮ್ಮ ಕಂಪನಿಯನ್ನು ಆಪಲ್‌ನಂತೆ ಅಮೆರಿಕಕ್ಕೆ ಸ್ಥಳಾಂತರಿಸಲು ಇದು ಉತ್ತಮ ಸಮಯ ಮತ್ತು ಇತರ ಹಲವು ಕಂಪನಿಗಳು ದಾಖಲೆ ಸಂಖ್ಯೆಯಲ್ಲಿ ಹೀಗೆ ಮಾಡುತ್ತಿವೆ" ಎಂದು ಅಮೆರಿಕದ ಅಧ್ಯಕ್ಷರು ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ಪ್ರತಿಸುಂಕ ನೀತಿಯಿಂದ ಭಾರತ ಸೇರಿದಂತೆ ವಿಶ್ವದ 50 ರಾಷ್ಟ್ರಗಳಿಗೆ ಈಗಾಗಲೇ ಬಿಸಿ ತಟ್ಟಿದೆ.
Advertisement