
ನ್ಯೂಯಾರ್ಕ್: ಈ ವಾರದ ಆರಂಭದಲ್ಲಿ ರಸ್ತೆ ಪ್ರವಾಸದ ವೇಳೆ ನಾಪತ್ತೆಯಾಗಿದ್ದ ಭಾರತೀಯ ಮೂಲದ ನಾಲ್ವರು ಹಿರಿಯ ನಾಗರಿಕರು ಶನಿವಾರ ರಾತ್ರಿ ನಡೆದ ಅಪಘಾತದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಮಾರ್ಷಲ್ ಕೌಂಟಿ ಶೆರಿಫ್ ಕಚೇರಿ ದೃಢಪಡಿಸಿದೆ.
ಶನಿವಾರ ರಾತ್ರಿ 9:30 ರ ಸುಮಾರಿಗೆ (ಸ್ಥಳೀಯ ಸಮಯ) ಬಿಗ್ ವೀಲಿಂಗ್ ಕ್ರೀಕ್ ರಸ್ತೆಯ ಕಡಿದಾದ ಪ್ರದೇಶದಲ್ಲಿ ಮೃತದೇಹಗಳು ಮತ್ತು ಅಪಘಾತಕ್ಕೀಡಾದ ವಾಹನ ಪತ್ತೆಯಾಗಿದೆ ಎಂದು ಶೆರಿಫ್ ತಿಳಿಸಿದ್ದಾರೆ. ಮೃತರನ್ನು ಆಶಾ ದಿವಾನ್, ಕಿಶೋರ್ ದಿವಾನ್, ಶೈಲೇಶ್ ದಿವಾನ್ ಮತ್ತು ಗೀತಾ ದಿವಾನ್ ಎಂದು ಗುರುತಿಸಲಾಗಿದೆ.
ಇವರೆಲ್ಲರೂ 80 ರ ವಯಸ್ಸಿನಲ್ಲೂ ಈ ವಾರದ ಆರಂಭದಲ್ಲಿ ನ್ಯೂಯಾರ್ಕ್‌ನ ಬಫಲೋದಿಂದ ಪಿಟ್ಸ್‌ಬರ್ಗ್ ಮತ್ತು ಪಶ್ಚಿಮ ಪೆನ್ಸಿಲ್ವೇನಿಯಾಕ್ಕೆ ರಸ್ತೆ ಪ್ರವಾಸದಲ್ಲಿ ಸಂದರ್ಭದಲ್ಲಿ ನಾಪತ್ತೆಯಾಗಿದ್ದರು.
ಜುಲೈ 29 ಮಂಗಳವಾರ, ಪೆನ್ಸಿಲ್ವೇನಿಯಾದ ಎರಿಯ ಪೀಚ್ ಸ್ಟ್ರೀಟ್‌ನಲ್ಲಿರುವ ಬರ್ಗರ್ ಕಿಂಗ್‌ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಇವರು ಪ್ರಯಾಣಿಸುತ್ತಿದ್ದ ಟೊಯೊಟೋ ಕ್ಯಾಮ್ರಿ ಬಿಗ್ ವೀಲಿಂಗ್ ಕ್ರೀಕ್ ರಸ್ತೆ ಅಪಘಾತಕ್ಕೀಡಾಗಿರುವುದನ್ನು ತುರ್ತು ನಿರ್ವಹಣಾ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ.
ಇದು ಹೆದ್ದಾರಿಯಿಂದ ಹಲವಾರು ಮೈಲುಗಳಷ್ಟು ಕಡಿದಾದ ಭಾಗದಲ್ಲಿದೆ. ಘಟನಾ ಸ್ಥಳವನ್ನು ತಲುಪಲು ಐದು ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಶೆರಿಫ್ ಇಲಾಖೆ ಮಾಹಿತಿ ನೀಡಿದೆ. ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿರುವುದನ್ನು ಶೆರಿಫ್ ಮೈಕ್ ಡೌಫರ್ಟಿ ಖಚಿತಪಡಿಸಿದ್ದು, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದೆ. ಅಪಘಾತದ ಕಾರಣ ತಿಳಿಯಲು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದೆ.
ಕುಟುಂಬವು ನ್ಯೂಯಾರ್ಕ್‌ನಲ್ಲಿ ನೋಂದಾಯಿಸಲಾದ ತಿಳಿ-ಹಸಿರು 2009ನೇ ಮಾಡೆಲ್ ಟೊಯೋಟಾ ಕ್ಯಾಮ್ರಿಯಲ್ಲಿ ಪ್ರಯಾಣಿಸುತ್ತಿತ್ತು, ಪರವಾನಗಿ ಪ್ಲೇಟ್ ಸಂಖ್ಯೆ EKW2611 ಆಗಿದೆ. ಅವರ ಪ್ರಯಾಣದ ವೇಳಾಪಟ್ಟಿಯಲ್ಲಿ ಪಿಟ್ಸ್‌ಬರ್ಗ್‌ನಲ್ಲಿರುವ ದೇವಾಲಯಕ್ಕೆ ಭೇಟಿ ನೀಡುವುದು ಸೇರಿತ್ತು, ನಂತರ ಅವರು ಪಶ್ಚಿಮ ವರ್ಜೀನಿಯಾದ ಮೌಂಡ್ಸ್‌ವಿಲ್ಲೆಯಲ್ಲಿರುವ ಪ್ರಭುಪಾದರ ಪ್ಯಾಲೇಸ್ ಲಾಡ್ಜ್ ಹೋಟೆಲ್‌ಗೆ ಭೇಟಿ ನೀಡಲು ಯೋಜಿಸಿದ್ದರು ಎನ್ನಲಾಗಿದೆ.
Advertisement