
ವಾಷಿಂಗ್ಟನ್: ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಡ ಹಾಕುತ್ತಿರುವಂತೆಯೇ ಭಾರತ ತೈಲ ಖರೀದಿಯನ್ನು ಮುಂದುವರೆಸುವ ಮೂಲಕ ಉಕ್ರೇನ್‌ನಲ್ಲಿ ರಷ್ಯಾದ ಯುದ್ಧಕ್ಕೆ ಪರಿಣಾಮಕಾರಿಯಾಗಿ ಹಣಕಾಸು ಒದಗಿಸುತ್ತಿದೆ ಎಂದು ಟ್ರಂಪ್ ಅವರ ಆಪ್ತ ಸಲಹೆಗಾರರೊಬ್ಬರು ಆರೋಪಿಸಿದ್ದಾರೆ.
"ರಷ್ಯಾದಿಂದ ತೈಲವನ್ನು ಖರೀದಿಸುವ ಮೂಲಕ ಭಾರತ ಈ ಯುದ್ಧಕ್ಕೆ ಹಣಕಾಸು ಪೂರೈಕೆ ಮುಂದುವರಿಸುವುದು ಸ್ವೀಕಾರಾರ್ಹವಲ್ಲ ಎಂದು (ಟ್ರಂಪ್) ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಶ್ವೇತಭವನ ಸಿಬ್ಬಂದಿ ಉಪ ಮುಖ್ಯಸ್ಥ ಮತ್ತು ಟ್ರಂಪ್ ಅವರ ಅತ್ಯಂತ ಪ್ರಭಾವಿ ಸಹಾಯಕರಲ್ಲಿ ಒಬ್ಬರಾದ ಸ್ಟೀಫನ್ ಮಿಲ್ಲರ್ ಹೇಳಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಸ್ಟೀಫನ್ ಮಿಲ್ಲರ್ ಅವರ ಟೀಕೆಯು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಯುನೈಟೆಡ್ ಸ್ಟೇಟ್ಸ್‌ನ ಪ್ರಮುಖ ಪಾಲುದಾರ ರಾಷ್ಟ್ರಗಳಲ್ಲಿ ಒಂದಾದ ಭಾರತದಲ್ಲಿ ತೀವ್ರ ಖಂಡನೆಗೆ ವ್ಯಕ್ತವಾಗಿದೆ.
ರಷ್ಯಾದಿಂದ ತೈಲ ಖರೀದಿಸುವ ಭಾರತವು ಮೂಲತಃ ಚೀನಾದೊಂದಿಗೆ ಸಂಬಂಧ ಹೊಂದಿದೆ ಎಂದು ತಿಳಿದರೆ ಜನರು ಆಘಾತಕ್ಕೊಳಗಾಗುತ್ತಾರೆ. ಇದು ಬೆರಗುಗೊಳಿಸುವ ಸಂಗತಿಯಾಗಿದೆ ಎಂದು ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಿಲ್ಲರ್ ಹೇಳಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.
ಈ ಸಂಬಂಧ ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಯುಎಸ್ ಬೆದರಿಕೆಗಳ ಹೊರತಾಗಿಯೂ ಭಾರತ ಮಾಸ್ಕೋದಿಂದ ತೈಲವನ್ನು ಖರೀದಿಸುವುದನ್ನು ಮುಂದುವರಿಸುತ್ತದೆ ಎಂದು ಭಾರತೀಯ ಸರ್ಕಾರದ ಮೂಲಗಳು ಶನಿವಾರ ರಾಯಿಟರ್ಸ್‌ಗೆ ತಿಳಿಸಿವೆ.
Advertisement