
ನವದೆಹಲಿ: ಭಾರತ ಇನ್ನು ಮುಂದೆ ರಷ್ಯಾದಿಂದ ತೈಲ ಖರೀದಿಗೆ ಹೋಗಲ್ಲ ಎಂಬ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಭಾರತದ ಸರ್ಕಾರಿ ಮೂಲಗಳು ಶನಿವಾರ ನಿರಾಕರಿಸಿವೆ.
ಶೇ. 25 ರಷ್ಟು ರಫ್ತು ಸುಂಕ ವಿಧಿಸುವ ಮೂಲಕ ರಷ್ಯಾದೊಂದಿಗಿನ ಇಂಧನ ಒಪ್ಪಂದ ಮೇಲೆ ಟ್ರಂಪ್ ಒತ್ತಡ ಹಾಕುತ್ತಿರುವಂತೆಯೇ ಭಾರತೀಯ ತೈಲ ಸಂಸ್ಕರಣಾಗಾರರು ರಷ್ಯಾದ ಪೂರೈಕೆದಾರರಿಂದ ತೈಲ ಪಡೆಯುವುದನ್ನು ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ಸುದ್ದಿಸಂಸ್ಥೆ ANI ವರದಿ ಮಾಡಿದೆ.
ಭಾರತೀಯ ತೈಲ ಸಂಸ್ಕರಣಾಗಾರರ ತೈಲ ಪೂರೈಕೆ ಬಗ್ಗೆಗಿನ ನಿರ್ಧಾರಗಳು ಬೆಲೆ, ಕಚ್ಚಾ ತೈಲದ ಗುಣಮಟ್ಟ, ದಾಸ್ತಾನು, ಸಾಗಾಣಿಕೆ ಮತ್ತು ಇತರ ಆರ್ಥಿಕ ಅಂಶಗಳನ್ನು ಅವಲಂಬಿಸಿರುತ್ತದೆ ಎನ್ನಲಾಗಿದೆ.
ರಷ್ಯಾದಿಂದ ತೈಲ ಪಡೆಯುವುದನ್ನು ಮುಂದುವರೆಸುವ ಅವರ ನಿರ್ಧಾರಗಳನ್ನು ಭಾರತ ಸರ್ಕಾರದಿಂದ ಬೆಂಬಲಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
ಭಾರತದ ಇಂಧನ ನಿರ್ಧಾರಗಳು ರಾಷ್ಟ್ರೀಯ ಹಿತಾಸಕ್ತಿಯನ್ನು ಅವಲಂಬಿಸಿವೆ. ಆದರೆ ಜಾಗತಿಕ ಇಂಧನ ಸ್ಥಿರತೆಗೆ ಸಕರಾತ್ಮಕ ಕೊಡುಗೆ ನೀಡಿವೆ. ಭಾರತದ ಪ್ರಾಯೋಗಿಕ ವಿಧಾನವು ತೈಲ ಹರಿವು, ಬೆಲೆಗಳ ಸ್ಥಿರತೆ ಮತ್ತು ಮಾರುಕಟ್ಟೆಗಳನ್ನು ಸಮತೋಲನಗೊಳಿಸುತ್ತದೆ. ಆದರೆ ಅಂತರರಾಷ್ಟ್ರೀಯ ಚೌಕಟ್ಟುಗಳನ್ನು ಸಂಪೂರ್ಣವಾಗಿ ಗೌರವಿಸುತ್ತದೆ ಎಂದು ಅವುಗಳು ಹೇಳಿವೆ.
ರಷ್ಯಾ ಸುಮಾರು 9.5 mb/d (ಜಾಗತಿಕವಾಗಿ ಸುಮಾರು ಶೇ. 10 ರಷ್ಟು ಬೇಡಿಕೆ) ಕಚ್ಚಾ ತೈಲ ಉತ್ಪಾದನೆಯ ವಿಶ್ವದ ಎರಡನೇ ಅತಿದೊಡ್ಡ ರಾಷ್ಟ್ರವಾಗಿದೆ. ಸುಮಾರು 4.5 mb/d ಕಚ್ಚಾತೈಲ ಮತ್ತು 2.3 mb/d ಸಂಸ್ಕರಿಸಿದ ಉತ್ಪನ್ನಗಳ ಸಾಗಣೆಯೊಂದಿಗೆ ಎರಡನೇ ದೊಡ್ಡ ರಫ್ತು ರಾಷ್ಟ್ರ ಕೂಡಾ ಆಗಿದೆ.
ಇಂತಹ ಪರಿಸ್ಥಿತಿಯಲ್ಲಿ ಭಾರತ ಶೇ. 85 ರಷ್ಟು ಕಚ್ಚಾ ತೈಲ ಆಮದು ಮಾಡಿಕೊಳ್ಳುವುದರೊಂದಿಗೆ ವಿಶ್ವದ ಮೂರನೇ ಅತಿದೊಡ್ಡ ಇಂಧನ ಗ್ರಾಹಕ ರಾಷ್ಟ್ರವಾಗಿದೆ. ಅಂತಾರಾಷ್ಟ್ರೀಯ ನಿಯಮಗಳಿಗೆ ಬದ್ದವಾಗಿ ಸೂಕ್ತ ತೈಲವನ್ನು ಪಡೆಯುತ್ತಿದ್ದು, ರಷ್ಯಾದ ಪೂರೈಕೆದಾರರಿಂದ ತೈಲ ಖರೀದಿಯನ್ನು ಭಾರತ ಮುಂದುವರೆಸಲಿದೆ ಎಂದು ಮೂಲಗಳು ಹೇಳಿವೆ.
Advertisement