
ಅಲಸ್ಕಾ: ಉಕ್ರೇನ್-ರಷ್ಯಾ ಸಂಘರ್ಷಕ್ಕೆ ಅಂತ್ಯ ಹಾಡಿ, ಶಾಂತಿ ಸ್ಥಾಪಿಸುವ ಉದ್ದೇಶದಿಂದ ಶನಿವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ಅಮೆರಿಕದ ಅಲಾಸ್ಕಾದಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆ ಯಾವುದೇ ಫಲಿತಾಂಶವಿಲ್ಲದೇ ಅಂತ್ಯವಾಗಿದೆ ಎಂದು ಹೇಳಲಾಗಿದೆ.
1945ರ ನಂತರದ ಯುರೋಪಿನ ಅತಿದೊಡ್ಡ ಭೂ ಯುದ್ಧವಾದ ರಷ್ಯಾ ಮತ್ತು ಉಕ್ರೇನ್ ನಡುವಿನ ಕ್ರೂರ ಸಂಘರ್ಷವನ್ನು ಕೊನೆಗೊಳಿಸಲು ಅಥವಾ ವಿರಾಮಗೊಳಿಸಲು ಸೇರಿದ್ದ ಅಲಸ್ಕಾ ಶೃಂಗಸಭೆ ಯಾವುದೇ ಒಪ್ಪಂದವಿಲ್ಲದೆ ಅಂತ್ಯಗೊಂಡಿದೆ.
ಸುಮಾರು ಮೂರು ಗಂಟೆಗಳ ಸುದೀರ್ಘ ಸಮಾಲೋಚನೆ ನಡೆದಿದ್ದು, ಮಾತುಕತೆ ಬಳಿಕ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾದ ವ್ಲಾಡಿಮಿರ್ ಪುಟಿನ್ ಮಾತನಾಡಿ ಮಾತುಕತೆಯಲ್ಲಿ ಮಹತ್ವದ ಪ್ರಗತಿ ಕಂಡು ಬಂದಿದೆ ಎಂದು ಘೋಷಣೆ ಮಾಡಿದರು.
ಒಪ್ಪಂದದ ಯಾವುದೇ ವಿವರಗಳನ್ನು ಉಭಯ ನಾಯಕರು ಇದುವರೆಗೂ ನೀಡಿಲ್ಲ. ಅಷ್ಟೇ ಅಲ್ಲ ಉಕ್ರೇನ್ - ರಷ್ಯಾ ನಡುವಣ ಕದನ ವಿರಾಮ ಘೋಷಣೆ ಆಗಲಿದೆಯೇ ಎಂಬ ಬಗ್ಗೆ ಇಬ್ಬರೂ ನಾಯಕರು ಏನನ್ನೂ ಹೇಳಿಲ್ಲ.
ಈ ವೇಳೆ ಮಾತನಾಡಿದ ಅಮೆರಿಕ ಅಧ್ಯಕ್ಷ ಟ್ರಂಪ್, 'ನಾವು ಒಟ್ಟಿಗೆ ತಲುಪಿದ ಒಪ್ಪಂದವು (ಪರಿಹಾರವನ್ನು ಕಂಡುಕೊಳ್ಳುವ) ಆ ಗುರಿಯನ್ನು ಹತ್ತಿರಕ್ಕೆ ತರಲು ನಮಗೆ ಸಹಾಯ ಮಾಡುತ್ತದೆ ಮತ್ತು ಉಕ್ರೇನ್‌ನಲ್ಲಿ ಶಾಂತಿ ಕಾಪಾಡಲು ಮತ್ತು ಯುದ್ಧ ಕೊನೆಗೊಳಿಸುವ ಯತ್ನದ ಭಾಗವಾಗಿ ಹಾದಿಯನ್ನು ಸುಗಮಗೊಳಿಸುತ್ತದೆ ಎಂದು ನಾನು ಭಾವಿಸುತ್ತೇನೆ. ನಾವು ಬಹಳ ಉತ್ಪಾದಕಯುಕ್ತವಾದ ಮಾತುಕತೆಯನ್ನು ನಡೆಸಿದ್ದೇವೆ ಎಂದು ನಾನು ಭಾವಿಸಿದ್ದೇನೆ ಮತ್ತು ನಂಬಿದ್ದೇನೆ. ನಾವು ಪರಸ್ಪರ ಹಲವು ಅಂಶಗಳನ್ನು ಒಪ್ಪಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
ನಿರ್ಧಾರಕ್ಕೆ ಬರಲಾಗದ ಒಪ್ಪಂದಗಳಿವೆ
ಇದೇ ವೇಳೆ, 'ನಾವು ಅಲ್ಲಿಗೆ ತಲುಪದ ಎರಡು ದೊಡ್ಡ ಒಪ್ಪಂದಗಳಿವೆ. ಆದರೂ ಆ ವಿಚಾರದಲ್ಲಿ ನಾವು ಸ್ವಲ್ಪ ಮುನ್ನಡೆದಿದ್ದೇವೆ. ನ್ಯಾಟೋ, ಉಕ್ರೇನ್ ಜತೆ ಮಾತುಕತೆ ಬಗ್ಗೆ ಚರ್ಚಿಸುತ್ತೇನೆ. ಇದರಲ್ಲಿ ಒಂದಂಶ ಬಹುಶಃ ಅತ್ಯಂತ ಮಹತ್ವದ್ದಾಗಿದೆ. ಆದರೆ ನಾವು ಅಂತಿಮ ಒಪ್ಪಂದಕ್ಕೆ ತಲುಪಲು ಉತ್ತಮ ಅವಕಾಶವಿದೆ.
ಆದರೆ ನಾವು ಇನ್ನೂ ಆ ಅಂಶಗಳಿಗೆ ತಲುಪಲು ಸಾಧ್ಯವಾಗಿಲ್ಲ, ಆದರೆ ನಾವು ಅಲ್ಲಿಗೆ ತಲುಪಲು ಉತ್ತಮ ಅವಕಾಶವಿದೆ. ನಾನು NATO ಗೆ ಕರೆ ಮಾಡುತ್ತೇನೆ, ನಾನು ಸೂಕ್ತವೆಂದು ಭಾವಿಸುವ ವಿವಿಧ ಜನರು, ಮತ್ತು ಸಹಜವಾಗಿ ಅಧ್ಯಕ್ಷ (ವೊಲೊಡಿಮಿರ್) ಝೆಲೆನ್ಸ್ಕಿಯನ್ನು ಕರೆದು ಇಂದಿನ ಸಭೆಯ ಮಾತುಕತೆಯ ವಿವರಗಳನ್ನು ನೀಡುತ್ತೇನೆ ಎಂದೂ ಅವರು ಇದೇ ವೇಳೆ ಸ್ಪಷ್ಟಪಡಿಸಿದರು.
ಉಕ್ರೇನ್ ಯುದ್ಧ ನಿಲುಗಡೆ ವಿಚಾರ
ಇನ್ನು ಇದೇ ವೇಳೆ ಉಕ್ರೇನ್ ಯುದ್ಧವನ್ನು ನಿಲ್ಲಿಸುವ ಬಗ್ಗೆ ಪುಟಿನ್ ಮತ್ತು ತಮ್ಮ ನಡುವೆ ಯಾವುದೇ ಒಪ್ಪಂದವಾಗಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಝೆಲೆನ್ಸ್ಕಿ ಮತ್ತು ನ್ಯಾಟೋ ನಾಯಕರ ಸಭೆ ಕರೆಯುವುದಾಗಿ ಹೇಳಿದರು. ಜತೆಗೆ ಇಬ್ಬರೂ ನಾಯಕರು ಪರಸ್ಪರ ಹೊಗಳುತ್ತಾ ಹಲವು ಇತರೆ ಒಪ್ಪಂದಗಳು ಆಗಿವೆ ಎಂದರು.
ಉಕ್ರೇನ್‌ನಲ್ಲಿ ಶಾಂತಿ ನೆಲೆಸುವ ಕುರಿತು ಉಭಯ ನಾಯಕರು ಆಶಯ ವ್ಯಕ್ತಪಡಿಸಿದ್ದು, ರಷ್ಯಾ ಜತೆ ವ್ಯಾಪಾರ ಮಾತುಕತೆಗೆ ಅಮೆರಿಕ ಸಿದ್ಧವಿದ್ದು, ಭಾರತದ ಮೇಲಿನ ಸುಂಕದ ವಿಚಾರವಾಗಿಯೂ ಚರ್ಚೆ ನಡೆಯಿತು ಎನ್ನಲಾಗಿದೆ.
ಮುಂದಿನ ಭೇಟಿ ಮಾಸ್ಕೋದಲ್ಲಿ
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಾತನಾಡಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ತಮ್ಮ ಮುಂದಿನ ಸಭೆ ಮಾಸ್ಕೋದಲ್ಲಿ ನಡೆಯಬಹುದು. ಇನ್ನು ಮಾತುಕತೆ ಬಳಿಕ ಉಕ್ರೇನ್‌ನ ಕೀವ್‌ನಲ್ಲಿ ಶಾಂತಿ ನೆಲಸಬಹುದು ಎಂದು ಆಶಿಸುತ್ತೇನೆ ಎಂದು ತಿಳಿಸಿದರು.
ವಾಷಿಂಗ್ಟನ್ ಡಿಸಿಯಿಂದ ಏರ್‌ಫೋರ್ಸ್ ಒನ್ ವಿಮಾನದಲ್ಲಿ ಅಲಾಸ್ಕಾದತ್ತ ಹೊರಡುವ ಮುನ್ನ ಮಾತನಾಡಿದ ಟ್ರಂಪ್, ''ಪುಟಿನ್ ಅವರು ನಮ್ಮ ಆರ್ಥಿಕ ನೀತಿ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಮಾತುಕತೆಗಳು ಫಲಪ್ರದವಾದರೆ ರಷ್ಯಾ ಜತೆಗೆ ಮತ್ತಷ್ಟು ವ್ಯಾಪಾರದ ಮಾತುಕತೆಗೆ ಅಮೆರಿಕ ಮುಂದಾಗಲಿದೆ " ಎಂದು ಹೇಳಿದ್ದರು.
ರಷ್ಯಾ-ಅಮೆರಿಕ ನಿಯೋಗ
ಇನ್ನು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಮಾತುಕತೆ ನಡೆಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶುಕ್ರವಾರ ನಡುರಾತ್ರಿ (ಭಾರತೀಯ ಕಾಲಮಾನ ಪ್ರಕಾರ) ಅಲಾಸ್ಕಾಗೆ ಆಗಮಿಸಿದ್ದರು.
ಟ್ರಂಪ್‌ಗೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ, ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್, ವಾಣಿಜ್ಯ ಕಾರ್ಯದರ್ಶಿ ಹಾವಾರ್ಡ್ ಲುಟ್ನಿಕ್, ಸಿಐಎ ನಿರ್ದೇಶಕ ಜಾನ್ ರಾಟ್‌ಕ್ಲಿಫ್ ಸಾಥ್ ನೀಡಿದ್ದರು.
ಇತ್ತ ಪುಟಿನ್ ಅವರೊಂದಿಗೆ ರಷ್ಯಾ ವಿದೇಶಾಂಗ ಸಚಿವ ಸರ್ಗಿ ಲಾವ್ರೋವ್, ರಾಜತಾಂತ್ರಿಕ ಅಧಿಕಾರಿ ಯುರಿ ಉಷಕೋವ್, ರಕ್ಷಣಾ ಸಚಿವ ಆಂಡ್ರೆ ಬೆಲ್‌ಸೋವ್, ಹಣಕಾಸು ಸಚಿವ ಆಂಟನ್ ಸಿಲುವಾನೋವ್, ರಷ್ಯಾ ಸಾರ್ವಭೌಮತ್ವ ಸಂಪತ್ತು ನಿಧಿ ಮುಖ್ಯಸ್ಥ ಕಿರಿಲ್ ಡಿಮಿಟ್ರಿವ್ ಆಗಮಿಸಿದ್ದರು.
Advertisement