
ಮುಂಬೈ: ನಟಿ ಕಂಗನಾ ರಣಾವತ್ ಅವರ ನಿವಾಸದಲ್ಲಿ ನಡೆದ RSS ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪತ್ನಿ ಹಾಗೂ ಬಾರಾಮತಿ ಸಂಸದೆ ಸುನೇತ್ರಾ ಪವಾರ್ ಅವರು ವಿವಾದಕ್ಕೆ ಗುರಿಯಾಗಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ಕಾರ್ಯಕ್ರಮದ ವಿವರಗಳನ್ನು ಹಂಚಿಕೊಂಡಿರುವ ಕಂಗನಾ, ಇಂದು ನನ್ನ ನಿವಾಸದಲ್ಲಿ ರಾಷ್ಟ್ರ ಸೇವಿಕಾ ಸಮಿತಿಯ ಮಹಿಳಾ ವಿಭಾಗದ ಕಾರ್ಯಕ್ರಮ ನಡೆಯಿತು. ಸನಾತನ ಮೌಲ್ಯಗಳು, ಹಿಂದೂ ಸಂಸ್ಕೃತಿ ಮತ್ತು ರಾಷ್ಟ್ರೀಯ ಪ್ರಜ್ಞೆಯನ್ನು ಬಲಪಡಿಸಲು ನಾವು ಒಟ್ಟಾಗಿ ಸೇರಿದ್ದೇವು. ಮಾನವ ಸೇವೆ, ರಾಷ್ಟ್ರನಿರ್ಮಾಣ ಮತ್ತು ಸನಾತನ ಸಂಸ್ಕೃತಿಯ ಸಂರಕ್ಷಣೆಗಾಗಿ ಕೆಲಸ ಮಾಡಲು ಬದ್ಧರಾಗಿದ್ದೇವೆ. ಮಹಿಳೆಯರ ಜಾಗೃತಿ ಮತ್ತು ಭಾಗವಹಿಸುವಿಕೆ ರಾಷ್ಟ್ರವನ್ನು ಬಲಪಡಿಸುತ್ತದೆ ಎಂದು ಬರೆದುಕೊಂಡಿದ್ದಾರೆ.
ಕಂಗನಾ ರಣಾವತ್ ಸಭೆಯ ಹಲವಾರು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಸುನೇತ್ರಾ ಪವಾರ್ ಭಾಷಣ ಮಾಡುತ್ತಿರುವುದು ಸೇರಿದಂತೆ ಹಲವು ಮಹಿಳೆಯರು ನೆಲದ ಮೇಲೆ ಕುಳಿತಿರುವುದು ಕಂಡುಬರುತ್ತದೆ.
ಇದು ವಿವಾದಕ್ಕೆ ಗುರಿಯಾಗಿದ್ದು, ಎನ್‌ಸಿಪಿ (ಶರದ್ ಪವಾರ್ ಬಣ) ಶಾಸಕ ರೋಹಿತ್ ಪವಾರ್ ತನ್ನ ಚಿಕ್ಕಪ್ಪ ಅಜಿತ್ ಪವಾರ್ ಅವರ ಬಣವನ್ನು "ಬೂಟಾಟಿಕೆ" ಎಂದು ಆರೋಪಿಸಿದ್ದಾರೆ. ಉಪ ಮುಖ್ಯಮಂತ್ರಿ ಬಿಜೆಪಿಯಿಂದ ಒತ್ತಡದಲ್ಲಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ವಾರ್ಧಾದಲ್ಲಿ ವಿವಾದ ಕುರಿತು ಪ್ರತಿಕ್ರಿಯಿಸಿದ ಅಜಿತ್ ಪವಾರ್. ತಮ್ಮ ಹೆಂಡತಿ ಎಲ್ಲಿಗೆ ಹೋಗುತ್ತಾರೆ ಎಂಬುದನ್ನು ಹುಡುಕಲು ಹೋಗುವುದಿಲ್ಲ. ಆದಾಗ್ಯೂ, ಈ ವಿಚಾರದ ಬಗ್ಗೆ ಹೆಂಡತಿ ಬಳಿ ಕೇಳಿ ನಂತರ ಹೇಳುವುದಾಗಿ ತಿಳಿಸಿದರು.
ಈ ಮಧ್ಯೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಸಿರುವ ಸುನೇತ್ರಾ ಪವಾರ್, ರಾಜಕೀಯದಿಂದ ಅಲ್ಲಿಗೆ ಹೋಗಿರಲಿಲ್ಲ. ಮಹಿಳೆಯರ ಕಾರ್ಯಕ್ರಮ ಅರ್ಥಮಾಡಿಕೊಳ್ಳಲು ಅಲ್ಲಿಗೆ ಹೋಗಿದ್ದಾಗಿ ತಿಳಿಸಿದ್ದಾರೆ.
Advertisement