
ಭಾರತವು ರಷ್ಯಾದ ಕಚ್ಚಾ ತೈಲವನ್ನು ರಿಯಾಯಿತಿ ದರದಲ್ಲಿ ಖರೀದಿಸಿ, ಅದನ್ನು ಸಂಸ್ಕರಿಸಿ, ಜಾಗತಿಕವಾಗಿ ಪ್ರೀಮಿಯಂ ಬೆಲೆಯಲ್ಲಿ ಉತ್ಪನ್ನಗಳನ್ನು ರಫ್ತು ಮಾಡುವ ಮೂಲಕ "ಕ್ರೆಮ್ಲಿನ್‌ಗೆ ಲಾಂಡ್ರೋಮೆಟ್" ನಂತೆ ವರ್ತಿಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾಜಿ ಉದ್ಯಮ ಸಲಹೆಗಾರ ಪೀಟರ್ ನವರೊ, ಆರೋಪಿಸಿದ್ದಾರೆ.
ವಾಷಿಂಗ್ಟನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನವರೊ, ಭಾರತದ ಕ್ರಮಗಳು ಉಕ್ರೇನ್‌ನಲ್ಲಿ ಯುದ್ಧವನ್ನು ಶಾಶ್ವತಗೊಳಿಸುತ್ತಿವೆ ಎಂದು ಹೇಳಿದರು. ರಷ್ಯಾದ ತೈಲ ಆಮದುಗಳು ಅದರ ಇಂಧನ ಭದ್ರತೆಗೆ ಅತ್ಯಗತ್ಯ ಎಂಬ ಭಾರತದ ದೀರ್ಘಕಾಲದ ಪ್ರತಿಪಾದನೆಯನ್ನು ತಳ್ಳಿಹಾಕಿದರು.
ಮೊನ್ನೆ ಆಗಸ್ಟ್ 18 ರಂದು ಫೈನಾನ್ಷಿಯಲ್ ಟೈಮ್ಸ್‌ನಲ್ಲಿ ಪ್ರಕಟವಾದ ತಮ್ಮ ಅಭಿಪ್ರಾಯದ ಲೇಖನವನ್ನು ಉಲ್ಲೇಖಿಸಿ, ನವರೊ, ಭಾರತ ಸರ್ಕಾರ ಹರಡುತ್ತಿರುವ ಪ್ರಚಾರವನ್ನು ಪರಿಹರಿಸಲು ನಾನು ಆ ಲೇಖನವನ್ನು ಬರೆದಿದ್ದೇನೆ. ಭಾರತಕ್ಕೆ ರಷ್ಯಾ ತೈಲ ಅಗತ್ಯವಿಲ್ಲ. ಇದು ಸಂಸ್ಕರಣಾ ಲಾಭ ಗಳಿಸುವ ಯೋಜನೆಯಾಗಿದೆ ಎಂದರು.
ನಾನು ಭಾರತವನ್ನು ಪ್ರೀತಿಸುತ್ತೇನೆ. ಮೋದಿ ಒಬ್ಬ ಮಹಾನ್ ನಾಯಕ. ಆದರೆ ಭಾರತ, ಜಾಗತಿಕ ಆರ್ಥಿಕತೆಯಲ್ಲಿ ನಿಮ್ಮ ಪಾತ್ರ ಏನೆಂದು ನೋಡಿ. ನೀವು ಈಗ ಮಾಡುತ್ತಿರುವುದು ಶಾಂತಿಯನ್ನು ಸೃಷ್ಟಿಸುವುದಲ್ಲ; ಅದು ಯುದ್ಧವನ್ನು ಶಾಶ್ವತಗೊಳಿಸುತ್ತಿದೆ ಎಂದರು.
ಫೈನಾನ್ಷಿಯಲ್ ಟೈಮ್ಸ್ ಲೇಖನದಲ್ಲಿ, ನವರೊ ಭಾರತವು ರಷ್ಯಾದ ಕಚ್ಚಾ ತೈಲ ಖರೀದಿಯನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದರು, ಉಕ್ರೇನ್ ಸಂಘರ್ಷದ ಮಧ್ಯೆ ರಷ್ಯಾದ ಆರ್ಥಿಕತೆಯನ್ನು ಪ್ರತ್ಯೇಕಿಸುವ ಅಂತಾರಾಷ್ಟ್ರೀಯ ಪ್ರಯತ್ನಗಳನ್ನು ದೇಶವು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದರು.
ರಷ್ಯಾದ ತೈಲದ ಮೇಲಿನ ಭಾರತದ ಅವಲಂಬನೆಯನ್ನು ಅವಕಾಶವಾದಿ ಎಂದು ಬಣ್ಣಿಸಿದ್ದಾರೆ. ಭಾರತವನ್ನು ಯುಎಸ್‌ನ ಕಾರ್ಯತಂತ್ರದ ಪಾಲುದಾರನಾಗಿ ಪರಿಗಣಿಸಲು ಬಯಸಿದರೆ, ಅದು ಹಾಗೆ ವರ್ತಿಸಲು ಪ್ರಾರಂಭಿಸಬೇಕು ಎಂದು ಹೇಳಿದರು.
ಭಾರತವು ರಷ್ಯಾದ ತೈಲಕ್ಕಾಗಿ ಜಾಗತಿಕ ಕ್ಲಿಯರಿಂಗ್ ಹೌಸ್ ಆಗಿ ಕಾರ್ಯನಿರ್ವಹಿಸುತ್ತದೆ, ನಿರ್ಬಂಧಿತ ಕಚ್ಚಾ ತೈಲವನ್ನು ಹೆಚ್ಚಿನ ಮೌಲ್ಯದ ರಫ್ತುಗಳಾಗಿ ಪರಿವರ್ತಿಸುತ್ತದೆ. ರಷ್ಯಾಗೆ ಅಗತ್ಯವಿರುವ ಡಾಲರ್‌ಗಳನ್ನು ಒದಗಿಸುತ್ತದೆ ಎಂದು ಅವರು ಆಪ್-ಎಡ್‌ನಲ್ಲಿ ಬರೆದಿದ್ದಾರೆ.
ಆಗಸ್ಟ್ 27 ಕ್ಕೆ ನಿಗದಿಪಡಿಸಲಾದ ಹೆಚ್ಚುವರಿ ಸುಂಕದೊಂದಿಗೆ, ಈ ತಿಂಗಳ ಆರಂಭದಲ್ಲಿ ಜಾರಿಗೆ ಬಂದ ಭಾರತೀಯ ಸರಕುಗಳ ಮೇಲೆ ಶೇಕಡಾ 25 ರಷ್ಟು ಸುಂಕ ವಿಧಿಸುವ ಅಮೆರಿಕ ನಿರ್ಧಾರವನ್ನು ಟ್ರಂಪ್ ಅವರ ಸಹಾಯಕ ಸಮರ್ಥಿಸಿಕೊಂಡರು.
Advertisement