
ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಗ್ಯ ಕುರಿತು ಊಹಾಪೋಹಗಳು ಶುರುವಾಗಿದ್ದು, ಈ ನಡುವಲ್ಲೇ ರಾಷ್ಟ್ರೀಯ ತುರ್ತು ಪರಿಸ್ಥಿತಿ ಎದುರಾದರೆ ಅಧ್ಯಕ್ಷನಾಗರು ಸಿದ್ಧನಿದ್ದೇನೆಂದು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಹೇಳಿದ್ದಾರೆ.
ಯುಎಸ್ಎ ಟುಡೇಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಟ್ರಂಪ್ ಅವರ ಆರೋಗ್ಯದ ಕುರಿತು ಎದ್ದಿರುವ ಊಹಾಪೋಹಗಳನ್ನು ನಿರಾಕರಿಸಿದರು. ಇದೇ ವೇಳೆ ಟ್ರಂಪ್ ಅವರ ಚೈತನ್ ಮತ್ತು ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಟ್ರಂಪ್ ಅವರು ಆರೋಗ್ಯವಾಗಿದ್ದಾರೆ. ಮತ್ತಷ್ಟು ಶಕ್ತಿಯುತರಾಗಿದ್ದಾರೆ. ಅವರೊಂದಿಗೆ ಕೆಲಸ ಮಾಡುವ ಹೆಚ್ಚಿನವರು ಚಿಕ್ಕ ವಯಸ್ಸಿನವರು. ಆದರೆ, ನಮ್ಮೆಲ್ಲರಿಗಿಂತಲೂ ಕೊನೆಯಲ್ಲಿ ಮಲಗುವುದು ಡೊನಾಲ್ಡ್ ಟ್ರಂಪ್. ಬೆಳಿಗ್ಗೆ ಮೊದಲಿಗೆ ಏಳುವುದು ಅವರೇ. ಅವರು ನಮ್ಮೆಲ್ಲರಿಗೂ ಮಾದರಿ ಎಂದು ಹೇಳಿದ್ದಾರೆ.
ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೇ ಮ್ಯುಂಗ್ ಅವರೊಂದಿಗಿನ ಭೇಟಿಯ ಸಮಯದಲ್ಲಿ ಟ್ರಂಪ್ ಅವರ ಕೈಯಲ್ಲಿ ಕೆಲ ಗಾಯ ಕಾಣಿಸಿಕೊಂಡಿತ್ತು. ಇದರ ಬೆನ್ನಲ್ಲೇ ಟ್ರಂಪ್ ಅವರ ಆರೋಗ್ಯ ಕುರಿತು ಊಹಾಪೋಹಗಳು ಶುರುವಾಗಿತ್ತು.
ಟ್ರಂಪ್ ಅವರ ಕೈ ಮೇಲಿನ ಗಾಯದ ಗುರುತು ಕುರಿತು ಶ್ವೇತಭವನ ಸ್ಪಷ್ಟನೆ ನೀಡಿದ್ದು, ಆಗಾಗ್ಗೆ ಹಸ್ತಲಾಘವ ಮಾಡುವುದು ಇದಕ್ಕೆ ಕಾರಣವಾಗಿದೆ ಎಂದು ಹೇಳಿದೆ.
ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಅವರು ಮಾತನಾಡಿ, ಅಧ್ಯಕ್ಷ ಟ್ರಂಪ್ ಇತಿಹಾಸದಲ್ಲಿ ಯಾವುದೇ ಅಧ್ಯಕ್ಷರಿಗಿಂತ ಹೆಚ್ಚು ಕೈಕುಲುಕುತ್ತಾರೆಂದು ಹೇಳಿದ್ದಾರೆ.
ಟ್ರಂಪ್ ಅವರು ಅಮೆರಿಕಾ ಜನರ ಪರವಾಗಿ ಕೆಲಸ ಮಾಡಲು ಬದ್ಧರಾಗಿದ್ದು, ಅದನ್ನು ಪ್ರತೀ ನಿತ್ಯ ಸಾಬೀತುಪಡಿಸುತ್ತಿದ್ದಾರೆಂದು ತಿಳಿಸಿದ್ದಾರೆ.
ಇನ್ನು ಟ್ರಂಪ್ ಅವರಿಕೆ ಚಿಕಿತ್ಸೆ ನೀಡುವ ವೈದ್ಯ ಡಾ. ಸೀನ್ ಬಾರ್ಬೆಲ್ಲಾ ಅವರು ಮಾಹಿತಿ ನೀಡಿ, ಟ್ರಂಪ್ ಅವರು ದೀರ್ಘಕಾಲ ಸಿರೆ ಆರೋಗ್ಯ ಸಮಸ್ಯೆ (ಸಿವಿಐ)ಯಿಂದ ಬಳುತ್ತಿದ್ದಾರೆ. ಸೌಮ್ಯ ಲಕ್ಷಣಗಳಿದ್ದು, 70 ವರ್ಷ ಮೇಲ್ಪಟ್ಟ ವ್ಯಕ್ತಿಗಳಲ್ಲಿ ಇದು ಸಾಮಾನ್ಯ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ.
Advertisement