
ನವದೆಹಲಿ: SCO ಶೃಂಗಸಭೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಚೀನಾಗೆ ಭೇಟಿ ನೀಡಿದ್ದಾರೆ. ಇದೇ ವೇಳೆ ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಪುಟಿನ್ ಭೇಟಿಗೂ ಮುನ್ನವೇ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಜೊತೆ ಪ್ರಧಾನಿ ಮೋದಿ ದೂರವಾಣಿ ಮೂಲಕ ಮಾತನ್ನಾಡಿದ್ದಾರೆ.
ಉಕ್ರೇನ್ ಸಂಘರ್ಷದ ಶಾಂತಿಯುತ ಪರಿಹಾರಕ್ಕಾಗಿ ಭಾರತ ಎಲ್ಲಾ ಸಂಭಾವ್ಯ ಬೆಂಬಲ ನೀಡುವ ಭರವಸೆಯನ್ನು ಝೆಲೆನ್ಸ್ಕಿಗೆ ನೀಡಿದ್ದಾರೆ. ಮಾತುಕತೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಮೋದಿ, ದೂರವಾಣಿ ಕರೆ ಮಾಡಿದ್ದಕ್ಕಾಗಿ ಅಧ್ಯಕ್ಷ ಝೆಲೆನ್ಸ್ಕಿಗೆ ಧನ್ಯವಾದಗಳು. ಉಕ್ರೇನ್ನಲ್ಲಿ ನಡೆಯುತ್ತಿರುವ ಸಂಘರ್ಷ, ಮಾನವೀಯ ಅಂಶ, ಶಾಂತಿ ಮತ್ತು ಸ್ಥಿರತೆ ಪುನಃಸ್ಥಾಪಿಸುವ ಪ್ರಯತ್ನಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ. ಈ ದಿಕ್ಕಿನಲ್ಲಿ ಎಲ್ಲಾ ಪ್ರಯತ್ನಗಳನ್ನು ಭಾರತ ಸಂಪೂರ್ಣವಾಗಿ ಬೆಂಬಲಿಸಲಿದೆ ಎಂದಿದ್ದಾರೆ.
ಯುದ್ಧದ ಅಂತ್ಯವು ತಕ್ಷಣದ ಕದನ ವಿರಾಮದೊಂದಿಗೆ ಪ್ರಾರಂಭವಾಗಬೇಕು ಎಂದು ಝೆಲೆನ್ಸ್ಕಿ ಪ್ರದಾನಿ ಮೋದಿ ಅವರಿಗೆ ತಿಳಿಸಿದರು. ಶೃಂಗಸಭೆಯ ಸಮಯದಲ್ಲಿ ಮೋದಿ ಮತ್ತು ಪುಟಿನ್ ಅವರು ವಿವರವಾದ ದ್ವಿಪಕ್ಷೀಯ ಸಭೆ ನಡೆಸುವ ನಿರೀಕ್ಷೆಯಿದೆ. ಉಕ್ರೇನ್ ಸಂಘರ್ಷವು ಮಾತುಕತೆಯ ಕೇಂದ್ರಬಿಂದುವಾಗಿದೆ ಎಂದು ನಿರೀಕ್ಷಿಸಲಾಗಿದೆ.
ಆಗಸ್ಟ್ 18 ರಂದು ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ನಡೆದ ಭೇಟಿಯ ಬಗ್ಗೆ ಜೆಲೆನ್ಸ್ಕಿ ಮೋದಿಗೆ ವಿವರಿಸಿದರು. ಭಾನುವಾರದಿಂದ ಪ್ರಾರಂಭವಾಗುವ ಎರಡು ದಿನಗಳ SCO ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಇಂದು ಸಂಜೆ ಟಿಯಾಂಜಿನ್‌ಗೆ ಬಂದಿಳಿದಿದ್ದಾರೆ.
ಬರೋಬ್ಬರಿ 7 ವರ್ಷಗಳ ನಂತರ ಪ್ರಧಾನಿ ನರೇಂದ್ರ ಮೋದಿ ಚೀನಾಗೆ ಭೇಟಿ ನೀಡಿದ್ದಾರೆ. ಶಾಂಘೈ ಸಹಕಾರ ಸಂಸ್ಥೆಯ ಶೃಂಗಸಭೆ ಹಿನ್ನೆಲೆಯಲ್ಲಿ ಟಿಯಾಂಜಿನ್ ತಲುಪಿದ್ದಾರೆ. ಟಿಯಾಂಜಿನ್ ವಿಮಾನ ನಿಲ್ದಾಣದಲ್ಲಿ ಮೋದಿಗೆ ಭರ್ಜರಿ ಸ್ವಾಗತ ಸಿಕ್ಕಿದೆ.
ನಾನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದೆ. ಯುರೋಪಿಯನ್ ನಾಯಕರ ಭಾಗವಹಿಸುವಿಕೆಯೊಂದಿಗೆ ವಾಷಿಂಗ್ಟನ್‌ನಲ್ಲಿ ಅಧ್ಯಕ್ಷ ಟ್ರಂಪ್ ಅವರೊಂದಿಗೆ ನಡೆದ ಮಾತುಕತೆಯ ಬಗ್ಗೆ ನಾನು ಮಾಹಿತಿ ನೀಡಿದ್ದೇನೆ. ರಷ್ಯಾದ ನಾಯಕರೊಂದಿಗಿನ ಸಭೆಗೆ ಉಕ್ರೇನ್ ತನ್ನ ಸಿದ್ಧತೆಯನ್ನು ಪುನರುಚ್ಚರಿಸಿದೆ. ಸುಮಾರು ಎರಡು ವಾರಗಳು ಕಳೆದಿವೆ.
ಈ ಸಮಯದಲ್ಲಿ, ರಷ್ಯಾ ರಾಜತಾಂತ್ರಿಕತೆಗೆ ತಯಾರಿ ನಡೆಸಬೇಕಾಗಿದ್ದಾಗ, ಮಾಸ್ಕೋ ಯಾವುದೇ ಸಕಾರಾತ್ಮಕ ಸಂಕೇತವನ್ನು ನೀಡಿಲ್ಲ. ಶೃಂಗಸಭೆಯ ಹೊರತಾಗಿ ರಷ್ಯಾ ಮತ್ತು ಇತರ ನಾಯಕರು ಅಗತ್ಯ ಪ್ರಯತ್ನಗಳನ್ನು ಮಾಡಲು, ಸೂಕ್ತ ಸಂದೇಶ ತಲುಪಿಸಲು ಭಾರತ ಸಿದ್ಧವಾಗಿದೆ. ಮುಂದಿನ ದಿನಗಳಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಲು ನನಗೆ ಸಂತೋಷವಾಗುತ್ತದೆ ಎಂದು ಝೆಲೆನ್ಸ್ಕಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
Advertisement