

ಹ್ಯಾಂಗ್‌ಝೌ: ಚೀನಾದ ಸಫಾರಿ ಪಾರ್ಕ್ ನಲ್ಲಿ ಭೀಕರ ಘಟನೆ ನಡೆದಿದ್ದು, ಪಾರ್ಕ್ ನಲ್ಲಿದ್ದ ಕರಡಿ ತನ್ನ ತರಬೇತುದಾರನ ಮೇಲೆಯೇ ಭೀಕರ ದಾಳಿ ಮಾಡಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಪೂರ್ವ ಚೀನಾದ ಝೆಜಿಯಾಂಗ್ ಪ್ರಾಂತ್ಯದ ಹ್ಯಾಂಗ್‌ಝೌ ಸಫಾರಿ ಪಾರ್ಕ್‌ನಲ್ಲಿ ಈ ಘಟನೆ ನಡೆದಿದ್ದು, ತನ್ನ ಮೊದಲ ಪ್ರದರ್ಶನದ ಬಳಿಕ ಕಪ್ಪು ಕರಡಿ ತನ್ನ ತರಬೇತುದಾರನ ಮೇಲೆಯೇ ದಾಳಿ ಮಾಡಿದೆ. ಈ ವೇಳೆ ಅಲ್ಲಿಯೇ ಇದ್ದ ಇತರೆ ತರಬೇತುದಾರರು ಕರಡಿಯನ್ನು ತಡೆಯಲು ಯತ್ನಿಸಿದ್ದಾರೆ.
ತಮ್ಮ ಕೈಯಲ್ಲಿದ್ದ ಪರಿಕರಗಳಿಂದ ಕರಡಿಯನ್ನು ಬಲವಂತವಾಗಿ ಬೇರ್ಪಡಿಸಲು ಯತ್ನಿಸಿದರು. ಈ ವೇಳೆ ಕರಡಿ ದಾಳಿ ಮುಂದುವರೆದ ಕಾರಣ ಸಿಬ್ಬಂದಿ ಬಲಪ್ರಯೋಗ ಮಾಡಿ ಕರಡಿ ಮೇಲೆ ಹಲ್ಲೆ ಮಾಡಿ ಬೇರ್ಪಡಿಸಿದ್ದಾರೆ.
ಕರಡಿ ದಾಳಿ ವೇಳೆ ಅಲ್ಲಿದ್ದ ಪ್ರವಾಸಿಗರು ಘಟನೆಯ ಕಂಡು ಆತಂಕದಿಂದ ಹೌಹಾರಿದ್ದಾರೆ. ಅಲ್ಲದೆ ಸಿಬ್ಬಂದಿಗಳು ಕೂಡಲೇ ಪ್ರವಾಸಿಗರನ್ನು ದೂರ ಸರಿಸಿದ್ದಾರೆ. ಬಳಿಕ ಕರಡಿಯನ್ನು ಸಿಬ್ಬಂದಿ ಎಳೆದೊಯ್ದಿದ್ದಾರೆ.
ಆಗಿದ್ದೇನು?
ಹ್ಯಾಂಗ್‌ಝೌ ಸಫಾರಿ ಪಾರ್ಕ್‌ನಲ್ಲಿ ಶನಿವಾರ ಒಂದು ಸುತ್ತಿನ ಪ್ರದರ್ಶನ ಮುಗಿದಿತ್ತು. ಇಬ್ಬರು ಪಾಲಕರು ಮತ್ತೊಂದು ಸುತ್ತಿನ ಪ್ರದರ್ಶನಕ್ಕಾಗಿ ವೇದಿಕೆಗೆ 2 ಕಪ್ಪು ಕರಡಿಗಳನ್ನು ತಂದಿದ್ದರು. ಈ ಪೈಕಿ ಒಂದು ಕರಡಿ ಯಶಸ್ವಿಯಾಗಿ ಪ್ರದರ್ಶನ ನೀಡಿದರೆ, ಇನ್ನೊಂದು, ವೇದಿಕೆಯ ಬಳಿ, ಇದ್ದಕ್ಕಿದ್ದಂತೆ ತನ್ನ ಪಾಲಕರ ಮೇಲೆ ಹಾರಿ, ಪಾಲಕನನ್ನು ನೆಲಕ್ಕೆ ಕೆಡವಿ ದಾಳಿ ಮಾಡಿದೆ.
ಈ ವೇಳೆ ಕೆಳಗೆ ಬಿದ್ದಿದ್ದ ಪಾಲಕ ತಪ್ಪಿಸಿಕೊಳ್ಳಲು ಹೆಣಗಾಡುತ್ತಿದ್ದಾಗ, ಹತ್ತಿರದ ಸಿಬ್ಬಂದಿಗಳು ಪ್ರಾಣಿಯನ್ನು ಬೇರ್ಪಡಿಸಲು ಕುರ್ಚಿಗಳು ಮತ್ತು ಕಂಬಗಳನ್ನು ಬಳಸಿ ಬೇರ್ಪಡಿಸಿದರು. ಕರಡಿಯನ್ನು ಎಳೆದ ನಂತರ, ಅದು ಮತ್ತೆ ಪಾಲಕನ ಮೇಲೆ ದಾಳಿ ಮಾಡಿತು. ಹೀಗಾಗಿ ಸಿಬ್ಬಂದಿ ಅವುಗಳನ್ನು ಬೇರ್ಪಡಿಸಲು ಬಲಪ್ರಯೋಗ ಮಾಡಬೇಕಾಯಿತು.
ಕರಡಿ ದಾಳಿಗೆ ಕಾರಣ? ಪಾರ್ಕ್ ಅಧಿಕಾರಿಗಳ ಸ್ಪಷ್ಟನೆ
ಇನ್ನು ಕರಡಿ ದಾಳಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಈ ಬಗ್ಗೆ ಹ್ಯಾಂಗ್‌ಝೌ ಸಫಾರಿ ಪಾರ್ಕ್ ಕಚೇರಿ ಸ್ಪಷ್ಟನೆ ನೀಡಿದೆ. ಈ ದಾಳಿಯಲ್ಲಿ ಪಾಲಕ ಅಥವಾ ಕರಡಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿಸಿದೆ. ಅಲ್ಲದೆ ಕರಡಿ ವರ್ತನೆಗೂ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, ಪ್ರದರ್ಶನ ವೇಳೆ ಪಾಲಕ ಕ್ಯಾರೆಟ್ ಮತ್ತು ಸೇಬುಗಳ ದೊಡ್ಡ ಚೀಲವನ್ನು ಹೊತ್ತೊಯ್ಯುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಕರಡಿ ತನ್ನ ಪಾಲಕ ತನ್ನ ಆಹಾರಗಳನ್ನು ಒಯ್ಯುತ್ತಿದ್ದಾನೆ ಎಂದು ಭಾವಿಸಿತು. ಆರಂಭದಲ್ಲಿ ಪಾಲಕ ಅವುಗಳನ್ನು ತನಗೆ ನೀಡುತ್ತಾನೆ ಎಂದು ಭಾವಿಸಿತ್ತು. ಆದರೆ ಆತ ಆದನ್ನು ಅದರಿಂದ ದೂರ ಒಯ್ಯುತ್ತಲೇ ತನ್ನ ಆಹಾರ ತೆಗೆದುಕೊಳ್ಳಲು ಅದು ಆತನ ಮೇಲೆ ದಾಳಿ ಮಾಡಿರಬಹುದು ಎಂದು ಪಾರ್ಕ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ
ಇನ್ನು ಈ ವಿಡಿಯೋ ವೈರಲ್ ಆಗುತ್ತಲೇ ಸಫಾರಿ ಸಿಬ್ಬಂದಿಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. 'ಪ್ರಾಣಿಗಳ ಪ್ರದರ್ಶನಗಳನ್ನು ಯಾವಾಗ ರದ್ದುಗೊಳಿಸಲಾಗುತ್ತದೆ? ಆಹಾರ ಆಧಾರಿತ ಮತ್ತು ಅವುಗಳ ಆಹಾರವನ್ನು ರಕ್ಷಿಸುವುದು ಪ್ರಾಣಿಗಳ ಸ್ವಭಾವವಲ್ಲವೇ? ಎಂದು ಓರ್ವ ಬಳಕೆದಾರ ಟ್ವೀಟ್ ಮಾಡಿದ್ದರೆ, ಮತ್ತೊಬ್ಬರು, 'ಕರಡಿ ಚಿಕ್ಕ ಮಗುವಿನಂತೆ.
ನಾವು ಅದನ್ನು ಹೇಗೆ ಪ್ರದರ್ಶಿಸಬಹುದು? ಅದಕ್ಕೆ ಸೇಬುಗಳಿದ್ದರೆ, ಅದನ್ನು ತಿನ್ನಲು ಬಿಡಿ! ಅದು ನಿಮ್ಮ ಮಗುವಾಗಿದ್ದರೆ, ನೀವು ಅದನ್ನು ಮೊದಲು ಪ್ರದರ್ಶಿಸಿ ನಂತರ ತಿನ್ನಲು ಬಿಡುತ್ತೀರಾ? ಅದು ಹಸಿದಿದ್ದರೆ, ನಂತರ ಅದನ್ನು ಹೇಗೆ ತಿನ್ನಬೇಕೆಂದು ಪ್ರದರ್ಶಿಸಲು ಬಿಡಿ, ಅದು ಸಂತೋಷವಾಗಿರುತ್ತದೆ, ಕೀಪರ್ ಮತ್ತು ಕರಡಿ ಹೆಚ್ಚು ಸಾಮರಸ್ಯದಿಂದ ಇರುತ್ತಾರೆ ಮತ್ತು ಪ್ರೇಕ್ಷಕರು ಇನ್ನೂ ಅದನ್ನು ಆನಂದಿಸುತ್ತಾರೆ' ಎಂದು ಹೇಳಿದ್ದಾರೆ.
ಮತ್ತೋರ್ವ ಬಳಕೆದಾರರು, "ಪ್ರಾಣಿಗಳ ಪ್ರದರ್ಶನಗಳನ್ನು ಯಾವಾಗ ರದ್ದುಗೊಳಿಸಲಾಗುತ್ತದೆ? ಆಹಾರ ಆಧಾರಿತ ಮತ್ತು ಅವುಗಳ ಆಹಾರವನ್ನು ರಕ್ಷಿಸುವುದು ಪ್ರಾಣಿಗಳ ಸ್ವಭಾವವಲ್ಲವೇ?" ಎಂದು ಅಭಿಪ್ರಾಯಪಟ್ಟಿದ್ದಾರೆ.
Advertisement