

ವಾಷಿಂಗ್ಟನ್ : ತನ್ನ ಒಡೆತನದ ಉಪಗ್ರಹ ಆಧಾರಿತ ಇಂಟರ್ನೆಟ್ (Internet) ಕಂಪನಿ ಸ್ಟಾರ್‌ಲಿಂಕ್ (Starlink) ಜೊತೆಗೆ ಭಾರತಕ್ಕೆ ಸೇವೆ ಸಲ್ಲಿಸಲು ಎದುರು ನೋಡುತ್ತಿದ್ದೇನೆ ಎಂದು ಸ್ಪೇಸ್‌ಎಕ್ಸ್ (SpaceX) ಸಿಇಒ ಎಲೋನ್ ಮಸ್ಕ್ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಪೋಸ್ಟ್ ಮಾಡಿದ್ದು, ಸ್ಟಾರ್‌ಲಿಂಕ್‌ನೊಂದಿಗೆ ಭಾರತಕ್ಕೆ ಸೇವೆ ಸಲ್ಲಿಸಲು ಎದುರು ನೋಡುತ್ತಿದ್ದೇನೆ! ಎಂದು ಬರೆದುಕೊಂಡಿದ್ದಾರೆ.
ದೆಹಲಿಯಲ್ಲಿ ಸ್ಟಾರ್‌ಲಿಂಕ್ ಬ್ಯುಸಿನೆಸ್ ಆಪರೇಷನ್ಸ್‌ನ ಉಪಾಧ್ಯಕ್ಷ ಲಾರೆನ್ ಡ್ರೇಯರ್ ಅವರನ್ನು ಭೇಟಿಯಾದ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ ಮಸ್ಕ್ ಈ ಪೋಸ್ಟ್ ಮಾಡಿದ್ದಾರೆ.
ಭಾರತದಾದ್ಯಂತ ದೊರದ ಪ್ರದೇಶಗಳಲ್ಲಿ ಉಪಗ್ರಹ-ಆಧಾರಿತ ಪ್ರವೇಶ ಕುರಿತು ಚರ್ಚಿಸಲು'Starlink Business Operations (SpaceX) ನ ಉಪಾಧ್ಯಕ್ಷ LaurenDreyer ಮತ್ತು ಹಿರಿಯ ನಾಯಕತ್ವದ ತಂಡವನ್ನು ಭೇಟಿಯಾದದ್ದು ಸಂತೋಷವಾಗಿದೆ' ಎಂದು ಸಿಂಧಿಯಾ ಹೇಳಿಕೊಂಡಿದ್ದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಡಿಜಿಟಲ್ ಸಬಲೀಕರಣದ ಸಂಕಲ್ಪ ಸಾಕಾರಗೊಳಿಸಲು ಸಚಿವಾಲಯವು ಕಾರ್ಯನಿರ್ವಹಿಸುತ್ತಿರುವಾಗ, 'ದೇಶದ ಅತ್ಯಂತ ದೂರದ ಭಾಗಗಳಿಗೆ ಸಂಪರ್ಕವನ್ನು ವಿಸ್ತರಿಸುವಲ್ಲಿ ಮತ್ತು ಗ್ರಾಮೀಣ ಮತ್ತು ತಲುಪಲು ಕಷ್ಟದ ಪ್ರದೇಶಗಳಲ್ಲಿನ ಪ್ರತಿಯೊಬ್ಬ ನಾಗರಿಕರಿಗೆ ಇಂಟರ್ನೆಟ್ ಪ್ರವೇಶವನ್ನು ಬಲಪಡಿಸುವಲ್ಲಿ ಉಪಗ್ರಹ ತಂತ್ರಜ್ಞಾನವು ಪ್ರಮುಖ ಪಾತ್ರ ವಹಿಸುತ್ತದೆ. ಡಿಜಿಟಲ್ ಸೇರ್ಪಡೆಯು ಅಭಿವೃದ್ಧಿಯನ್ನು ವೇಗಗೊಳಿಸುತ್ತದೆ' ಎಂದು ಸಿಂಧಿಯಾ ಹೇಳಿದ್ದರು.
ಸ್ಟಾರ್‌ಲಿಂಕ್ ವಿಶ್ವದ ಅತ್ಯಂತ ಸುಧಾರಿತ ಉಪಗ್ರಹ ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾಗಿದೆ. ಹೆಚ್ಚಿನ ವೇಗದಲ್ಲಿ ದೂರದ ಮತ್ತು ಗ್ರಾಮೀಣ ಪ್ರದೇಶಗಳಲ್ಲಿರುವವರಿಗೆ ಸಂಪರ್ಕವನ್ನು ಒದಗಿಸುತ್ತದೆ.
Advertisement