

ಸಿಡ್ನಿ: ಆಸ್ಟ್ರೇಲಿಯಾದ ಸಿಡ್ನಿಯ ಬೋಂಡಿ ಬೀಚ್‌ನಲ್ಲಿ ಎರಡೂ ಗಂಟೆಗಳ ಹಿಂದೆ ಯಹೂದಿ ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ಇಬ್ಬರು ಬಂದೂಕುಧಾರಿಗಳು ಗುಂಡು ಹಾರಿಸಿದ್ದು 10 ಜನರನ್ನು ಹತ್ಯೆ ಮಾಡಿದ್ದಾರೆ. ಗುಂಡಿನ ದಾಳಿಯಲ್ಲಿ ಸುಮಾರು 50 ಗುಂಡು ಹಾರಿಸಲಾಗಿದೆ.
ಪ್ರತೀಕಾರದ ಗುಂಡಿನ ದಾಳಿಯಲ್ಲಿ ಒಬ್ಬ ಬಂದೂಕುಧಾರಿ ಸಾವನ್ನಪ್ಪಿದ್ದಾನೆ ಮತ್ತು ಪೊಲೀಸರು ಸೇರಿದಂತೆ ಸುಮಾರು 11 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ಕಾಲಮಾನ 6-30 ರ ಸುಮಾರಿನಲ್ಲಿ ಈ ದಾಳಿ ನಡೆದಿದೆ.
ಈ ಭಯಾನಕ ಗುಂಡಿನ ದಾಳಿ ನಡುವೆ ಕಾರು ಪಾರ್ಕಿಂಗ್ ಸ್ಥಳದಲ್ಲಿ ಮರದ ಹಿಂದೆ ಅಡಗಿದ್ದ ಧೈರ್ಯಶಾಲಿ ವ್ಯಕ್ತಿಯೋರ್ವ ಹಿಂದಿನಿಂದ ಓಡಿಬಂದು ಬಂದೂಕುದಾರಿ ಕೈಯಲ್ಲಿದ್ದ ರೈಫಲ್ ನ್ನು ಕಿತ್ತುಕೊಂಡು, ಆತನತ್ತ ಗುಂಡು ಹಾರಿಸಿದ್ದಾನೆ. ಈ ಪರಾಕ್ರಮದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
15 ಸೆಕೆಂಡ್‌ಗಳ ವೀಡಿಯೊದಲ್ಲಿ ನಿಂತಿದ್ದ ಕಾರುಗಳ ಹಿಂದೆ ನಿಶ್ಶಸ್ತ್ರ ವ್ಯಕ್ತಿ ಅಡಗಿರುವುದನ್ನು ತೋರಿಸುತ್ತದೆ. ಆತ ಹಿಂಭಾಗದಿಂದ ಬಂದೂಕುಧಾರಿ ಕಡೆಗೆ ಓಡಿ, ಕುತ್ತಿಗೆ ಹಿಡಿದುಕೊಂಡು ರೈಫಲ್ ಅನ್ನು ಕಸಿದುಕೊಳ್ಳುತ್ತಾರೆ. ನಂತರ ಆಗಂತುಕನತ್ತ ಗುಂಡಿನ ದಾಳಿ ನಡೆಸುತ್ತಾರೆ. ಆಗ ಬಂದೂಕುದಾರಿ ನೆಲದ ಮೇಲೆ ಮಲಗುವುದು ವಿಡಿಯೋದಲ್ಲಿದೆ. ಆದರೆ ತದನಂತರ ಏನಾಯಿತು ಎಂಬುದು ತಿಳಿದುಬಂದಿಲ್ಲ.
ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳ ಪೈಕಿ ಒಬ್ಬನನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹಂತಕರು ಈ ಪ್ರದೇಶದಲ್ಲಿ ಅಡಗಿರುವ ಶಂಕೆ ವ್ಯಕ್ತಪಡಿಸಿದ್ದು, ಕಾರ್ಯಾಚರಣೆ ಮುಂದುವರೆದಿದೆ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
Advertisement